ರಾಜ್ಯ ಅಗ್ನಿಶಾಮಕ ದಳಕ್ಕೆ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ: ಡಾ.ಜಿ. ಪರಮೇಶ್ವರ್

Update: 2024-06-11 18:29 GMT

ಬೆಂಗಳೂರು: ರಾಜ್ಯದ ಅಗ್ನಿಶಾಮಕ ದಳವು ರಾಷ್ಟ್ರ ಮಟ್ಟದಲ್ಲಿ ಮೆಚ್ಚುಗೆ ಪಡೆದಿದೆ. ಇದಕ್ಕೆ ಕಾರಣರಾಗಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅಭಿನಂದನೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಕೋರಮಂಗಲದ ಆರ್.ಎ.ಮುಂಡ್ಕುರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತರಬೇತಿ ಅಕಾಡೆಮಿ ಮೈದಾನದಲ್ಲಿ ಮಂಗಳವಾರ ನಡೆದ ‘ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭ ಹಾಗೂ ಅಗ್ನಿಶಾಮಕರ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿ ಜಿಲ್ಲೆಯಲ್ಲಿ ಅಗ್ನಿಶಾಮಕದ ದಳದ ಕಚೇರಿ ಇರಬೇಕು ಎಂಬ ಆದೇಶವಿದೆ. ರಾಜ್ಯ ಸರ್ಕಾರ ಪ್ರತಿ ತಾಲ್ಲೂಕಿನಲ್ಲಿ ಕಚೇರಿಯಲ್ಲಿ ತೆರೆದಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.

ಅಗ್ನಿಶಾಮಕ ಮತ್ತು ತುರ್ತುಸೇವೆ, ಗೃಹ ರಕ್ಷಕ ದಳ, ರಾಜ್ಯ ವಿಪತ್ತು ನಿರ್ವಹಣ ದಳ ಪ್ರಾಮಾಣಿಕವಾಗಿ ಕೆಲಸ ಮಾಡಿ ರಾಜ್ಯದ ಜನಸಮುದಾಯದ ಮೆಚ್ಚುಗೆಗೆ ಪಾತ್ರವಾಗಿದೆ. ಇಂತಹ ಇಲಾಖೆಯ ಕೆಲಸ ಕಾರ್ಯಗಳಿಗೆ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದೀರಿ. ಭವಿಷ್ಯ ಉಜ್ವಲವಾಗಿರಲಿ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.

ಅವಘಡಗಳಲ್ಲಿ ಬೆಂಕಿ ನಂದಿಸಲು 90 ಮೀಟರ್‍ವರೆಗೆ ನೀರು ತಲುಪಿಸಬಹುದಾದ ಏರಿಯಲ್ ಲ್ಯಾಡರ್ ಅಳವಡಿಸಿಕೊಳ್ಳಲಾಗಿದೆ. ಬಹುತೇಕ ರಾಜ್ಯಗಳಲ್ಲಿ ಇದು ಇಲ್ಲ. ಅಲ್ಲದೇ, ಮೊದಲ ಬಾರಿಗೆ ಇಲಾಖೆಯ ವಾಹನಗಳಿಗೆ ಪೆಟ್ರೋಲ್ ಕಾರ್ಡ್ ಸವಲತ್ತು ಕಲ್ಪಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.

ಆಧುನಿಕ ಜಗತ್ತು ತಾಂತ್ರಿಕವಾಗಿ ಸಾಕಷ್ಟು ಬದಲಾವಣೆ ಕಂಡಿದೆ. ಅಗ್ನಿ ಶಾಮಕ ದಳ ಮತ್ತು ತುರ್ತುಸೇವೆಯ ಐವತ್ತು ವರ್ಷಗಳ ಹಿಂದೆ ಸಿಬ್ಬಂದಿಗಳ ಕಾರ್ಯವೈಖರಿ ಬೇರೆ ಇತ್ತು. ಈಗ ಬದಲಾಗಿದೆ. ನಗರಗಳಲ್ಲಿ ದೊಡ್ಡ ಕಟ್ಟಡಗಳು ನಿರ್ಮಣವಾಗಿವೆ. ಅವಘಡಗಳು ಸಂಭವಿಸಿದಾಗ ಹೇಗೆ ನಿಭಾಯಿಸಬೇಕು ಎಂದು ತರಬೇತಿ ನೀಡಲಾಗಿದೆ. ತಾಂತ್ರಿಕ ಉಪಕರಣಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಪರಮೇಶ್ವರ್ ತಿಳಿಸಿದರು.

ಉತ್ತರ ಕರ್ನಾಟಕ ಭಾಗದವು ಹೆಚ್ಚಿನ ಸಂಖ್ಯೆಯಲ್ಲಿ ಇಲಾಖೆಗೆ ನೇಮಕಾತಿ ಹೊಂದುತ್ತಿದ್ದಾರೆ. ಇದು ಸಂತೋಷದಾಯಕ ವಿಚಾರ. ಈ ಭಾಗದವರು ಸಹ ನೇಮಕ ಹೊಂದಲು ಆಸಕ್ತಿ ತೋರಬೇಕು ಎಂದು ಪರಮೇಶ್ವರ್ ಹೇಳಿದರು.

ಬಿಜಾಪುರದ ಇಂಡಿ ತಾಲ್ಲೂಕಿನ ಲಚ್ಚಾಣ ಗ್ರಾಮದಲ್ಲಿ ಕೊಳವೆಬಾವಿಗೆ ಬಿದ್ದಿದ್ದ ಸಾತ್ವಿಕ್ ಎಂಬ ಮಗುವನ್ನು ನಮ್ಮ ಸಿಬ್ಬಂದಿ ನಿರಂತರ ಕಾರ್ಯಚರಣೆ ಮೂಲಕ ರಕ್ಷಣೆ ಮಾಡಿದ್ದಾರೆ. ರಕ್ಷಣೆ ಮಾಡಿದ್ದಾರೆ ಎಂಬುದನ್ನು ಕೇಳಲು ಸುಲಭ. ಆದರೆ ಜೀವದ ಹಂಗು ತೊರೆದು, ತಮ್ಮ ಕುಟುಂಬವನ್ನು ಜ್ಞಾಪಿಸಿಕೊಳ್ಳದೆ ಸತತ 19 ಗಂಟೆ ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸಿದ್ದಾರೆ ಎಂದು ಪರಮೇಶ್ವರ್ ಅಭಿನಂದಿಸಿದರು.

ರಾಮೇಶ್ವರ ಕೆಫೆ ಸ್ಪೋಟದ ಸ್ಥಳ ಪರಿಶೀಲನೆಗೆ ಹೋಗಿದ್ದೆ. ಕೋರಮಂಗಲದ ಪಬ್‍ನಲ್ಲಿ 16 ಸಿಲಿಂಡರ್ ಸ್ಪೋಟವಾಗಿತ್ತು. ಭಯದಿಂದ ಕಟ್ಟಡದ ಮೇಲಿಂದ ಹಾರಿದ್ದ ವ್ಯಕ್ತಿಯನ್ನು ರಕ್ಷಿಸಿ ಪ್ರಾಣ ಉಳಿಸಿದರು. ಮಡಿಕೇರಿಯಲ್ಲಿ ಭೂಕುಸಿತ ಸಂಭವಿಸಿ ಹತ್ತಾರು ಜನ ಪ್ರಾಣ ಕಳೆದುಕೊಂಡರು. ಎಸ್‍ಡಿಆರ್‍ಎಫ್‍ನವರು ಯಾವುದೇ ಭಯವಿಲ್ಲದೇ ನೂರಾರು ಜನರ ಪ್ರಾಣ ರಕ್ಷಣೆ ಮಾಡಿದ್ದಾರೆ. ಸಿಬ್ಬಂದಿಗಳು ಕಠಿಣ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸಿರುವುದನ್ನು ಗೃಹ ಸಚಿವನಾಗಿ ಹತ್ತಿರದಿಂದ ನೋಡಿದ್ದೇನೆ ಎಂದು ಪರಮೇಶ್ವರ್ ಹೇಳಿದರು.

ಸಂವಿಧಾನವು ಭಗವದ್ಗೀತೆ, ಕುರ್ ಆನ್, ಬೈಬಲ್ ಇದ್ದಂತೆ..!

ಸಂವಿಧಾನ ನಮ್ಮ ದೇಶದ ಮೂಲ ಗ್ರಂಥ. ವಿಶ್ವದಲ್ಲೇ ಹೆಚ್ಚು ಪ್ರಖ್ಯಾತಿ ಪಡೆದಿದೆ. 148 ಕೋಟಿ ಜನಸಂಖ್ಯೆಗೆ ಆಧಾರವಾಗಿದೆ. ಇದು ಇಲ್ಲವಾಗಿದ್ದರೆ ಯಾವ ಸಮಸ್ಯೆಗೂ ಉತ್ತರ ಸಿಗುವುದಿಲ್ಲ. ಸಂವಿಧಾನವು ಭಗವದ್ಗೀತೆ, ಕುರ್‍ಆನ್, ಬೈಬಲ್ ಇದ್ದಂತೆ. ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು. ಯಾವುದೇ ಧರ್ಮ, ರಾಜಕೀಯ, ವ್ಯಕ್ತಿಗೆ ಕೆಲಸ ಮಾಡುವುದಿಲ್ಲ. ದೇಶಕ್ಕಾಗಿ ಕೆಲಸ ಮಾಡುತ್ತೇನೆ ಎಂದು ನಿಮಗೆ ಪ್ರಮಾಣ ಬೋದನೆ ಮಾಡಲಾಗಿದೆ ಅದೇ ನಿಟ್ಟಿನಲ್ಲಿ ತರಬೇತಿ ನೀಡಲಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News