ನನ್ನನ್ನು ಜೈಲಿಗೆ ಕಳುಹಿಸಲು ಕಟೀಲ್, ಕುಮಾರಸ್ವಾಮಿ ನ್ಯಾಯಾಧೀಶರಲ್ಲ: ಡಿ.ಕೆ.ಶಿವಕುಮಾರ್ ತಿರುಗೇಟು
ಬೆಳಗಾವಿ, ಅ.18: ನನ್ನನ್ನು ಜೈಲಿಗೆ ಕಳುಹಿಸಲು ನಳೀನ್ ಕುಮಾರ್ ಕಟೀಲ್ ಆಗಲಿ, ಕುಮಾರಸ್ವಾಮಿ ಅವರಾಗಲಿ ನ್ಯಾಯಾಧೀಶರಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶಿವಕುಮಾರ್ ಅವರು ಎರಡನೆ ಬಾರಿಗೆ ತಿಹಾರ್ ಜೈಲಿಗೆ ಹೋಗಲು ಸಿದ್ಧತೆ ಮಾಡಿಕೊಳ್ಳಲಿ ಎಂಬ ಕಟೀಲ್ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ಶಿವಕುಮಾರ್ ಅವರು ಕೇಡಿಯಂತೆ ವರ್ತಿಸಬಾರದು ಎಂಬ ಸಿ.ಟಿ.ರವಿ ಹೇಳಿಕೆ ಬಗ್ಗೆ ಕೇಳಿದಾಗ, ಅವರಿಗೆ ಅವರ ಪಕ್ಷದವರೆ ‘ಲೂಟಿ ರವಿ’ ಎಂಬ ಹೆಸರು ಕೊಟ್ಟಿದ್ದಾರೆ. ಅವರ ಪಕ್ಷದವರೇ ಏನೆಲ್ಲಾ ಹೇಳಿದ್ದಾರೆ ಎಂಬ ದಾಖಲೆ ನನ್ನ ಬಳಿ ಇದೆ. ಇದಕ್ಕೆ ಸಮಯ ಬಂದಾಗ ಉತ್ತರ ನೀಡುತ್ತೇನೆ ಎಂದರು.
ಬೆಳಗಾವಿಯಲ್ಲಿ ಇಂದು ಈ ಭಾಗದ ವಿವಿಧ ನೀರಾವರಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳ ಸಭೆ ಮಾಡಿ ಚರ್ಚಿಸಿದ್ದೇನೆ. ಈ ಭಾಗದಲ್ಲಿ ಘಟಪ್ರಭ, ಮಾಕರ್ಂಡೇಯ, ಹಿಪ್ಪರಗಿ, ಆಲಮಟ್ಟಿ ಜಲಾಶಯಗಳಲ್ಲಿ ಶೇ.90 ರಷ್ಟು ನೀರು ತುಂಬಿದೆ. ಮಲಪ್ರಭದಲ್ಲಿ ಮಾತ್ರ ಶೇ. 52ರಷ್ಟಿದೆ ಎಂದು ಅವರು ಹೇಳಿದರು.
ಈ ಭಾಗದಲ್ಲಿ ನೀರಾವರಿ ಇಲಾಖೆಯ ಹುದ್ದೆಗಳ ನೇಮಕಾತಿ ಸಮಸ್ಯೆ ಇದೆ. ಒಟ್ಟು 1322 ಹುದ್ದೆಗಳು ಮಂಜೂರಾಗಿದ್ದು, 671 ಭರ್ತಿಯಾಗಿದ್ದು, 651 ಹುದ್ದೆಗಳು ಖಾಲಿ ಇವೆ. ಬೆಂಗಳೂರಿಗೆ ಹೋದ ಮೇಲೆ ಈ ಹುದ್ದೆಗಳನ್ನು ತುಂಬಲು ಕ್ರಮ ಕೈಗೊಳ್ಳುತ್ತೇನೆ. ಯಾವ ಕಾಮಗಾರಿಗಳನ್ನು ಉಳಿಸಿಕೊಳ್ಳಬೇಕು, ಯಾವ ಅನಗತ್ಯ ಕಾಮಗಾರಿಗಳನ್ನು ಕೈಬಿಡಬೇಕು ಎಂಬುದರ ಬಗ್ಗೆ ಸಭೆ ಮಾಡಿ ತೀರ್ಮಾನಿಸುತ್ತೇವೆ ಎಂದು ಶಿವಕುಮಾರ್ ಹೇಳಿದರು.
ನೀರು ಬಳಕೆದಾರರ ಸಂಘದ ಚಟುವಟಿಕೆಗಳು ಸರಿಯಾಗಿ ನಡೆಯುತ್ತಿಲ್ಲ. ಮುಂದಿನ ನೂರು ದಿನಗಳಲ್ಲಿ ಎಲ್ಲಾ ಕಡೆ ನೀರು ಬಳಕೆದಾರರ ಸಂಘ ಸ್ಥಾಪನೆಯಾಗಬೇಕು ಎಂದು ಕಾಡಾ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಈ ಮೂಲಕ ಸೂಚನೆ ನೀಡುತಿದ್ದೇನೆ. ಚಟುವಟಿಕೆ ನಡೆಯದ ಕಡೆ ಮತ್ತೆ ಚುನಾವಣೆ ಮಾಡಿ ಪುನರಾರಂಭಿಸಬೇಕು ಎಂದು ಅವರು ಹೇಳಿದರು.
ಕೆನಾಲ್ ರಿಪೇರಿ ವಿಚಾರವಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ಜೊತೆ ಮಾತನಾಡುತ್ತೇವೆ. ನರೇಗಾ ಮೂಲಕ ಸ್ಥಳೀಯರ ಮೂಲಕ ಕಾಮಗಾರಿಗಳನ್ನು ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ. ಇನ್ನು ವಾಲ್ಮಿ ತರಬೇತಿಗೆ ಧಾರವಾಡಕ್ಕೆ ಹೋಗಬೇಕಾಗಿದೆ. ರಾಜ್ಯದ ಆಯಾ ಭಾಗಗಳಲ್ಲಿ ವಾಲ್ಮಿ ತರಬೇತಿ ಕೇಂದ್ರಗಳನ್ನು ಆರಂಭಿಸಿ ಅಲ್ಲೇ ತರಬೇತಿ ನೀಡುವ ಬಗ್ಗೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಇದನ್ನು ಪರಿಗಣಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.
ಎಲ್ಲ ಸೊಸೈಟಿ ಸಭೆಗಳಲ್ಲಿ ಎಇಇಗಳು ಭಾಗವಹಿಸಬೇಕು ಎಕ್ಸಿಕ್ಯೂಟಿವ್ ಇಂಜಿನಿಯರ್ ಉಸ್ತುವಾರಿ ನೋಡಿಕೊಳ್ಳಬೇಕು. ನೀರಾವರಿ ಇಲಾಖೆ ಹಾಗೂ ಕಾಡಾ ಎರಡೂ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕಿದೆ. ರೈತರಿಗೆ ಭೂಮಿ ಹೇಗೆ ಬಳಕೆಯಾಗಬೇಕು. ಈ ಭಾಗದಲ್ಲಿ ಹೆಚ್ಚಾಗಿ ಕಬ್ಬು ಬೆಳೆಯಲಾಗುತ್ತಿದ್ದು, ಇದಕ್ಕೆ ನೀರು ಪೂರೈಸಬೇಕು ಎಂದು ಶಿವಕುಮಾರ್ ತಿಳಿಸಿದರು.
ಹೊಸ ಕೆರೆ ಹಾಗೂ ಕೆನಾಲ್ ಗಳಿಂದ ನೀರು ಕದಿಯದಂತೆ ರಕ್ಷಣೆ ಮಾಡಲು ಕಾನೂನು ತರಲಾಗುವುದು. ಈ ವಿಚಾರವಾಗಿ ಮಹಾರಾಷ್ಟ್ರದಲ್ಲಿರುವ ವ್ಯವಸ್ಥೆ ಬಗ್ಗೆ ಅಧಿಕಾರಿಗಳು ಗಮನಸೆಳೆದಿದ್ದು, ಈ ಬಗ್ಗೆ ವರದಿ ನೀಡುವಂತೆ ತಿಳಿಸಿದ್ದೇನೆ. ಸಾಧ್ಯವಾದರೆ ನಾನು ಕೂಡ ಹೋಗಿ ನೋಡಿಕೊಂಡು ಬರುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.
ಕಳಾಸಬಂಡೂರಿ ಯೋಜನೆಗೆ ನಾವು ಬದ್ಧರಾಗಿದ್ದೇವೆ. ಕೇಂದ್ರ ಸರಕಾರ ಈ ಯೋಜನೆ ವಿಚಾರವಾಗಿ ರಾಜ್ಯಗಳ ನಡುವೆ ಇರುವ ವ್ಯತ್ಯಾಸವನ್ನು ಸರಿಪಡಿಸಬೇಕು. ಈ ಬಗ್ಗೆ ಸಚಿವರ ಜತೆಯೂ ಚರ್ಚೆ ಮಾಡಿದ್ದೇವೆ. ಕಾವೇರಿ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದ ಕಾರಣ ಈ ವಿಚಾರ ಹಿಂದುಳಿದಿದೆ. ಮೇಕೆದಾಟು ಯೋಜನೆ ಆರಂಭಿಸಲು ಸುಪ್ರೀಂ ಕೋರ್ಟ್ ಮೆಟ್ಟಿಲೇರುವಂತೆ ಕಳಸಾ ಬಂಡೂರಿ ಯೋಜನೆಗೂ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರವಾಗಿ ಅ.28ರಂದು ಸಭೆ ಕರೆದಿದ್ದೇವೆ. ಈ ವರ್ಷ ಐದು ಗ್ಯಾರಂಟಿ ನೀಡಿದ್ದು, ನಾವು ಮುಖ್ಯಮಂತ್ರಿಗಳ ಜತೆ ಹಣಕಾಸು ಪರಿಸ್ಥಿತಿ ಕುರಿತಾಗಿ ಚರ್ಚೆ ಮಾಡಿ ಈ ಯೋಜನೆಗೆ ಹಣ ಬಿಡುಗಡೆ ಮಾಡಲು ತೀರ್ಮಾನ ಮಾಡುತ್ತೇವೆ. 20ಕ್ಕೂ ಹೆಚ್ಚು ಹಳ್ಳಿಗಳ ಸ್ಥಳಾಂತರ ಮಾಡಬೇಕಿದೆ. ರೈತರ ವಿಚಾರದಲ್ಲಿ ನಾವು ನಮ್ಮ ಬದ್ಧತೆಯಂತೆ ಕೆಲಸ ಮಾಡಬೇಕು. ಭೂಸ್ವಾಧೀನ ವಿಚಾರಕ್ಕೆ ಆದ್ಯತೆ ನೀಡಬೇಕು. ನಾವು ನೀರನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಅನಗತ್ಯವಾಗಿ ವ್ಯರ್ಥ ಮಾಡಬಾರದು ಎಂದು ಅವರು ತಿಳಿಸಿದರು.