ನೌಕರರಿಗೆ ʼಕುಟುಂಬ ಕಲ್ಯಾಣ ಯೋಜನೆʼಯ ಪರಿಹಾರ ಮೊತ್ತ 10 ಲಕ್ಷ ರೂ.ಗೆ ಹೆಚ್ಚಿಸಿದ KSRTC: ನ.1ರಿಂದಲೇ ಜಾರಿ

Update: 2023-10-30 15:36 GMT

ಸಾಂದರ್ಭಿಕ ಚಿತ್ರ

ಬೆಂಗಳೂರು, ಅ. 30: ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ನೌಕರರಿಗೆ ಕುಟುಂಬ ಕಲ್ಯಾಣ ಯೋಜನೆಯ ಪರಿಹಾರ ಮೊತ್ತವನ್ನು 3ಲಕ್ಷ ರೂ.ಗಳಿಂದ 10ಲಕ್ಷ ರೂ.ಗಳಿಗೆ ಏರಿಕೆ ಮಾಡಿ ಕೆಎಸ್ಸಾರ್ಟಿಸಿ ಸುತ್ತೋಲೆ ಹೊರಡಿಸಿದೆ.

ಕೆಎಸ್ಸಾರ್ಟಿಸಿ ಸಂಸ್ಥೆಯಲ್ಲಿ ಈಗಾಗಲೇ ಸೇವೆಯಲ್ಲಿರುವಾಗ ಸಿಬ್ಬಂದಿಗಳು ಖಾಸಗಿ ಅಥವಾ ಕರ್ತವ್ಯನಿರತದ ವೇಳೆ ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ಅಪಘಾತ ವಿಮಾ ಪರಿಹಾರ ಯೋಜನೆಯಡಿ, 1 ಕೋಟಿ ರೂ.ಮೊತ್ತದ ಆರ್ಥಿಕ ಪರಿಹಾರ ಒದಗಿಸುತ್ತಿದ್ದು, ಇಲ್ಲಿಯ ವರೆಗೆ 7 ಪ್ರಕರಣಗಳಲ್ಲಿ ಅಪಘಾತದಿಂದ ಮರಣ ಹೊಂದಿದ ನೌಕರರ ಅವಲಂಬಿತರಿಗೆ ತಲಾ 1 ಕೋಟಿ ರೂ.ನೀಡಲಾಗಿದೆ.

ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದ ಮೃತಪಟ್ಟ ನೌಕರರ ಕುಟುಂಬದವರಿಗೆ ಅಂದರೆ ಕ್ಯಾನ್ಸರ್, ಪಾಶ್ರ್ವವಾಯು(ಸ್ಟ್ರೋಕ್), ಹೃದಯಾಘಾತ, ಕಿಡ್ನಿ ವೈಫಲ್ಯ ಸೇರಿ ಇತರೆ ಖಾಯಿಲೆಗಳಿಂದ ಪ್ರತಿವರ್ಷ 100ನೌಕರರು ಮರಣ ಹೊಂದುತ್ತಿದ್ದಾರೆ. ಈ ರೀತಿ ತಮ್ಮ ಸೇವಾವಧಿಯಲ್ಲಿ ಮರಣ ಹೊಂದುತ್ತಿರುವ ನೌಕರರ ಕುಟುಂಬದವರ ಕಷ್ಟಗಳನ್ನು ಗಮನಿಸಿ, ಅವರಿಗೆ ನೆರವಾಗಲು 3ಲಕ್ಷ ರೂ. ನೀಡುತ್ತಿದ್ದ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕೆಂದು ವಿವಿಧ ಕಾರ್ಮಿಕ ಸಂಘಟನೆಗಳಿಂದಲೂ ಬೇಡಿಕೆ ಬಂದ ಹಿನ್ನೆಲೆಯಲ್ಲಿ ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿ ಪ್ರಸ್ತುತ ನೀಡಲಾಗುತ್ತಿರುವ ಪರಿಹಾರವನ್ನು ಹೆಚ್ಚಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಇದರಿಂದ ಮೃತರ ಅವಲಂಬಿತರಿಗೆ 7 ಲಕ್ಷ ರೂ.ಹೆಚ್ಚುವರಿ ಪರಿಹಾರ ಮೊತ್ತ ಲಭ್ಯವಾಗುತ್ತದೆ. ಕಾರ್ಮಿಕರ ಜೀವ ಅಮೂಲ್ಯವಾದದ್ದು, ಜೀವಕ್ಕೆ ಯಾವುದೇ ರೀತಿಯಿಂದಲೂ ಬೆಲೆ ಕಟ್ಟಲಾಗುವುದಿಲ್ಲ. ಆದರೆ, ನೌಕರರು ಮರಣ ಹೊಂದಿದ್ದಲ್ಲಿ, ಅವರ ಅವಲಂಬಿತರಿಗೆ ಆದಷ್ಟೂ ಆರ್ಥಿಕವಾಗಿ ಸಹಾಯ ಮಾಡುವುದು ನಿಗಮದ ಸದುದ್ದೇಶವಾಗಿದೆ.

ಸದರಿ ಯೋಜನೆಗೆ ನೌಕರರ ಮಾಸಿಕ ವಂತಿಕೆಯನ್ನು ಪ್ರಸ್ತುತ 100 ರೂ.ಗಳಿಂದ 200 ರೂ.ಗಳಿಗೆ ಹಾಗೂ ನಿಗಮದ ವತಿಯಿಂದ ಪ್ರತಿ ನೌಕರರ ಪರವಾಗಿ ನೀಡಲಾಗುತ್ತಿರುವ 50 ರೂ.ಗಳ ವಂತಿಕೆಯನ್ನು 100 ರೂ.ಗಳಿಗೆ ಹೆಚ್ಚಿಸಿ, ಪರಿಷ್ಕರಿಸಲಾಗಿದೆ. ಪರಿಷ್ಕೃತ ಆದೇಶವು 2023ರ ನವೆಂಬರ್ 1ರಿಂದ ಜಾರಿಗೆ ಬರಲಿದ್ದು, ಈ ದಿನಾಂಕದ ನಂತರದಲ್ಲಿ ಉಂಟಾಗುವ ಮರಣ ಪ್ರಕರಣಗಳಿಗೆ ಈ ಯೋಜನೆಯು ಅನ್ವಯಿಸುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News