ಬಿಬಿಎಂಪಿಯಲ್ಲಿ ಬಹುಕೋಟಿ ಹಗರಣ ಆರೋಪ : ಸಂಸದ, ಪಾಲಿಕೆ ಆಯುಕ್ತ ಸೇರಿ ಹಲವರ ವಿರುದ್ಧ ಈಡಿಗೆ ದೂರು
ಬೆಂಗಳೂರು : ಬಿಬಿಎಂಪಿಯಲ್ಲಿ ನಡೆದಿದೆ ಎನ್ನಲಾದ 2,067ಕೋಟಿ ರೂ.ಬೃಹತ್ ಹಗರಣ ಕುರಿತಂತೆ ಹಾಲಿ ಸಂಸದ ಕುಮಾರ್ ನಾಯ್ಕ್, ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೇರಿದಂತೆ 9 ಐಎಎಸ್ ಅಧಿಕಾರಿಗಳ ವಿರುದ್ಧ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಜಾರಿ ನಿರ್ದೇಶನಾಲಯ (ಈಡಿ)ದಲ್ಲಿ ದೂರು ದಾಖಲಿಸಿದ್ದಾರೆ.
ಬುಧವಾರ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರದ 13ನ, 14ನ ಮತ್ತು 15ನ ಹಣಕಾಸು ಆಯೋಗದ ಅನುದಾನಗಳನ್ನು ದುರ್ಬಳಕೆ ಮಾಡಿಕೊಂಡು 2067 ಕೋಟಿ ಮೊತ್ತದ ಹಗರಣ ಬಿಬಿಎಂಪಿಯಲ್ಲಿ ನಡೆದಿದೆ ಎಂದು ಆರೋಪಿಸಿದರು.
ಈ ಹಗರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಈಡಿಯಲ್ಲಿ ದೂರು ದಾಖಲಿಸಿದ್ದೇನೆ. 2013 ರಿಂದ 2025 ರ ಅವಧಿಯಲ್ಲಿ ಪಾಲಿಕೆಯ ಆಯುಕ್ತರು ಹಾಗೂ ಮುಖ್ಯ ಆಯುಕ್ತರುಗಳಾಗಿದ್ದ ಲಕ್ಷೀನಾರಾಯಣ್, ಈಗಿನ ರಾಯಚೂರು ಲೋಕಸಭಾ ಕ್ಷೇತ್ರದ ಸಂಸದ ಜಿ.ಕುಮಾರ್ ನಾಯಕ್, ಮಂಜುನಾಥ್ ಪ್ರಸಾದ್, ಅನಿಲ್ ಕುಮಾರ್, ಗೌರವ್ ಗುಪ್ತ ಹಾಗೂ ಹಾಲಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಿರುದ್ಧ ದೂರು ದಾಖಲು ಮಾಡಿದ್ದೇನೆ ಎಂದು ಅವರು ಮಾಹಿತಿ ನೀಡಿದರು.
ಇದೇ ಅವಧಿಯಲ್ಲಿ ಪಾಲಿಕೆಯ ಆಡಳಿತಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿರುವ ವಿಜಯ್ ಭಾಸ್ಕರ್, ರಾಕೇಶ್ ಸಿಂಗ್ ಮತ್ತು ಉಮಾಶಂಕರ್ ವಿರುದ್ಧವೂ ದೂರು ದಾಖಲು ಮಾಡಿದ್ದೇನೆ. ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ 9 ಐಎಎಸ್ ಅಧಿಕಾರಿಗಳ ವಿರುದ್ದ ದೂರು ನೀಡಿದ್ದೇನೆ ಎಂದು ಅವರು ಹೇಳಿದರು.
2013ರಿಂದ 2025 ರ ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ಇಲಾಖೆಯ ವಿಶೇಷ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಅಭಿಯಂತರರುಗಳು ಸೇರಿದಂತೆ ಸಂಬಂಧಪಟ್ಟ ಎಲ್ಲಾ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಈ ಹಗರಣಗಳಲ್ಲಿ ಭಾಗಿಯಾಗಿರುವ ಎಲ್ಲ ಗುತ್ತಿಗೆದಾರರ ವಿರುದ್ಧ 1,295 ಪುಟಗಳ ದೂರು ದಾಖಲು ಮಾಡಲಾಗಿದೆ ಎಂದು ಹೇಳಿದರು.