‘ಕಾವಿ ಬಟ್ಟೆ ಧರಿಸಿ ಪುಡಿ ರಾಜಕಾರಣಿಯಂತೆ ಮಾತಾಡುವುದನ್ನು ಮೊದಲು ಬಿಡಲಿ’ : ಪೇಜಾವರ ಶ್ರೀಗಳ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ
ಬೆಂಗಳೂರು : ‘ಜಾತಿ ಗಣತಿ ವಿರೋಧಿಸುವ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು, ‘ತಮ್ಮ ಮಠದಲ್ಲಿನ ಶ್ರೇಣಿಕೃತ ಜಾತಿ ಪದ್ಧತಿಯ ಆಚರಣೆ ಬಗ್ಗೆ ಮೊದಲು ಮಾತಾಡಲಿ. ಅನಿಷ್ಠ ಪಂಕ್ತಿಭೇದ, ಮಡೆಸ್ನಾನ ಪೋಷಿಸಿಕೊಂಡು ಬರುತ್ತಿದ್ದಾರೆ. ಕಾವಿ ಬಟ್ಟೆಯನ್ನು ಹಾಕಿಕೊಂಡು ಪುಡಿ ರಾಜಕಾರಣಿಯಂತೆ ಮಾತಾಡುವುದನ್ನು ಬಿಡಲಿ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಬುಧವಾರ ಹೊಸದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪೇಜಾವರ ಶ್ರೀಗಳು ಜಾತ್ಯತೀತತೆ ಬಗ್ಗೆ ಮಾತಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ. ‘ಭಾರತ ಜಾತ್ಯತೀತ ರಾಷ್ಟ್ರ, ಜಾತಿ ಗಣತಿ ಯಾಕೆ ಮಾಡಬೇಕು’ ಎಂದು ಶ್ರೀಗಳು ಹೇಳಿದ್ದಾರೆ. ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಗಳು ಹೇಳಿಕೆಗಳು ಕೊಟ್ಟಾಗ ನಾವ್ಯಾರು ಮಾತನಾಡುತ್ತಿರಲಿಲ್ಲ. ಅವರಿಗೆ ವಯಸ್ಸಾಗಿತ್ತು. ಈಗಿರುವಂತಹ ಸ್ವಾಮೀಜಿ ಅಯೋಧ್ಯೆಯ ರಾಮಮಂದಿರದಿಂದ ಹಿಡಿದು ಎಲ್ಲ ವಿಚಾರದಲ್ಲೂ ಪುಡಿ ರಾಜಕಾರಣಿಯಂತೆ ಮಾತನಾಡುತ್ತಿದ್ದಾರೆ. ಈ ವಿಚಾರಗಳು ಮಾತನಾಡಬೇಕೆಂದರೆ, ಅವರು ಮೊದಲು ಕಾವಿ ಬಟ್ಟೆ ಬಿಚ್ಚಿಟ್ಟು, ಬೇರೆ ಬಟ್ಟೆ ಹಾಕಿಕೊಂಡು ಮಾತನಾಡಿದಾಗ ನಾವು ಸರಿಯಾದ ಉತ್ತರ ನಾವು ಕೊಡಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಷ್ಟೊಂದು ಕಾಳಜಿ ಇರುವ ಶ್ರೀಗಳು, ಜಾತಿಗಣತಿ ಯಾಕೆ ಬೇಕು ಜ್ಯಾತ್ಯತೀತ ರಾಷ್ಟ್ರದಲ್ಲಿ ಎಂದು ಹೇಳಿದಾಗ, ಇವರ ಮಠದಲ್ಲಿಯೇ ಪಂಕ್ತಿ ಭೋಜನದಲ್ಲಿ ಬೇರೆಯವರನ್ನು ಸೇರಿಸುವುದಿಲ್ಲ. ಮಠಕ್ಕೆ ಬೇರೆಯವರನ್ನು ಒಳಗೆ ಬಿಡುವುದಿಲ್ಲ. ಮಡೆಸ್ನಾನಕ್ಕೆ ಉತ್ತೇಜನ ಕೊಡುವಂತವರು, ಇವರು. ಮೊದಲು ಇವರ ಮಠಗಳಲ್ಲಿ ಏನು ನಡೆಯುತ್ತಿದೆ ಎಂದು ನೋಡಿ, ಜಾತ್ಯತೀತ, ಜಾತಿಗಣತಿ ಬಗ್ಗೆ ಮಾತನಾಡುವುದು ಉತ್ತಮ ಎಂದು ಕಾಣುತ್ತದೆ. ಬಹಳಷ್ಟು ಜನ ನಂಬಿಕೆ ಇಟ್ಟುಕೊಂಡಿರುವ ಸ್ವಾಮೀಜಿ ಇವರು. ಪುಡಿ ರಾಜಕಾರಣಿಯ ರೀತಿಯಲ್ಲಿ ಮಾತನಾಡಬಾರದು ಎಂದು ಬಿ.ಕೆ.ಹರಿಪ್ರಸಾದ್ ಸಲಹೆ ನೀಡಿದರು.