ಬಿಜೆಪಿ ಜೊತೆಗಿನ ಮೈತ್ರಿ ಬಿಟ್ಟು ಕುಮಾರಸ್ವಾಮಿ ಹೊರಗೆ ಬರಲಿ : ಸಿ.ಎಂ.ಇಬ್ರಾಹೀಂ
ಬೆಂಗಳೂರು : ಎಚ್.ಡಿ.ಕುಮಾರಸ್ವಾಮಿ ತಾನು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ತಪ್ಪು ಮಾಡಿದ್ದೇನೆ ಕ್ಷಮಿಸಿ ಎಂದು ಹೇಳಿ ಹೊರಗೆ ಬರಲಿ. ಈ ರಾಜ್ಯದ ಜನ ಅವರನ್ನು ಸ್ವೀಕರಿಸುತ್ತಾರೆ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹೀಂ ಹೇಳಿದರು.
ರವಿವಾರ ಬೆನ್ಸನ್ ಟೌನ್‍ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸಚಿವನಾಗಿರುವ ಕುಮಾರಸ್ವಾಮಿ ರಾಜ್ಯಕ್ಕೆ ಒಂದು ಕೊಡುಗೆ ಕೊಡುತ್ತೇನೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಅವರಿಗೆ ತನಗೆ ಬೇಕಾದ ಒಬ್ಬ ಆಪ್ತ ಕಾರ್ಯದರ್ಶಿ ನೇಮಕ ಮಾಡಿಕೊಳ್ಳುವ ಅಧಿಕಾರವೂ ಇಲ್ಲ ಎಂದು ಹೇಳಿದರು.
ಬಿಜೆಪಿ ಜೊತೆಗಿನ ಮೈತ್ರಿ ವಿರೋಧಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇದ್ದಾರೆ. ಜನತಾ ದಳ ಮುಗಿಯಿತು. ಯಾರೂ ಅಲ್ಲಿ ಉಳಿಯುವುದಿಲ್ಲ. ಭವಿಷ್ಯದಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಜೊತೆ ವಿಲೀನವಾಗುವುದನ್ನು ತಳ್ಳಿ ಹಾಕುವಂತಿಲ್ಲ ಎಂದು ಅವರು ಹೇಳಿದರು.
ನಾವು ಪುಗಸ್ಸಟೆಯಾಗಿ ಸಿಕ್ಕಿದ್ದೇವೆ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಮರು ನಮಗೆ ಬೆಂಬಲ ನೀಡದೆ ಇರುವುದರಿಂದ ಸೋಲುವಂತಾಯಿತು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಇಬ್ರಾಹೀಂ, ನಾವು ಪುಗಸ್ಸಟ್ಟೆಯಾಗಿ ಸಿಕ್ಕಿದ್ದೇವೆ. ಅದಕ್ಕೆ ದೂರುತ್ತಿದ್ದಾರೆ. ಬೇರೆ ಸಮುದಾಯದವರನ್ನು ಏನಾದರೂ ದೂರಿದ್ದರೆ ಅವರು ಮನೆಗೆ ಬಂದು ಉಗಿದು ಹೋಗುತ್ತಿದ್ದರು ಎಂದರು.
ಒಕ್ಕಲಿಗರು ಮತ ನೀಡಿಲ್ಲ ಎಂದರೆ ಅವರಿಗೆ ಅವ ಮರ್ಯಾದೆ. ದಲಿತರು ಕೊಟ್ಟಿಲ್ಲ ಎಂದರೆ ಬಂದು ಒದಿತ್ತಾರೆ. ನಾವು ಸಾಬರು ಪಂಕ್ಚರ್ ಹಾಕುವವರು, ಸೌತೆಕಾಯಿ ಮಾರುವವರು. ಅವರಿಗೆ ಉತ್ತರ ಕೊಡುವ ಸಾಬರು ಇಲ್ಲ. ನಾವು ಮೈದಾನದಲ್ಲಿ ಇದ್ದಿದ್ದರೆ ಬಾ ಉತ್ತರ ಕೊಡುತ್ತೇವೆ ಎಂದು ಕರೆಯಬಹುದಿತ್ತು ಎಂದು ಇಬ್ರಾಹೀಂ ಹೇಳಿದರು.
ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಗೆಲ್ಲಲು ಮುಸ್ಲಿಮರು ಕಾರಣರಾಗಿದ್ದರು. ಅನ್ನೋದನ್ನು ನಿಖಿಲ್ ತಮ್ಮ ಹೇಳಿಕೆಯಲ್ಲೆ ಸಮರ್ಥಿಸಿಕೊಂಡಿದ್ದಾರೆ. ಮುಸ್ಲಿಮರು ನಮ್ಮನ್ನು ಗೌರವ, ಪ್ರೀತಿಯಿಂದ ಕಾಣಿ ಎಂದಷ್ಟೇ ತಾನೇ ಕೇಳಿದ್ದು? ಎಂದು ಇಬ್ರಾಹೀಂ ಹೇಳಿದರು.
ಹಿರಿಯ, ಅನುಭವಿ ರಾಜಕಾರಣಿ ಜಿ.ಟಿ.ದೇವೇಗೌಡರನ್ನು ಕುಮಾರಸ್ವಾಮಿ ಮೂಲೆಗುಂಪು ಮಾಡಿದ್ದಾರೆ. ಚನ್ನಪಟ್ಟಣ ಚುನಾವಣಾ ಪ್ರಚಾರಕ್ಕೂ ಅವರನ್ನು ಆಹ್ವಾನ ನೀಡಿಲ್ಲ. ಬಿಜೆಪಿಯವರಿಗೂ ಕುಮಾರಸ್ವಾಮಿ ನುಂಗಲಾರದ ತುತ್ತಾಗಿದ್ದಾರೆ ಎಂದು ಅವರು ತಿಳಿಸಿದರು.
ಯತ್ನಾಳ್ ವಿರುದ್ಧ ಪ್ರಕರಣ: ನಾನು ವಕ್ಫ್ ಆಸ್ತಿ ದುರುಪಯೋಗಪಡಿಸಿಕೊಂಡಿದ್ದೇನೆ ಎಂದು ಆರೋಪ ಮಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪ್ರಕರಣ ದಾಖಲು ಮಾಡಿದ್ದೇನೆ. ಅದೇ ರೀತಿ, ಪ್ರತಾಪ್ ಸಿಂಹಗೂ ಸವಾಲು ಹಾಕುತ್ತಿದ್ದೇನೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿ ನನ್ನ ವಿರುದ್ಧ ಸಿಬಿಐ ತನಿಖೆ ಮಾಡಿಸಲಿ ಎಂದು ಇಬ್ರಾಹೀಂ ಹೇಳಿದರು.