ಸೋಲಿಗೆ ರಾಜ್ಯಾಧ್ಯಕ್ಷ ವಿಜಯೇಂದ್ರ ಒಬ್ಬರೇ ಹೊಣೆಯಲ್ಲ : ರವಿಕುಮಾರ್
ಬೆಂಗಳೂರು : ರಾಜ್ಯದಲ್ಲಿ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕೇವಲ ರಾಜ್ಯಾಧ್ಯಕ್ಷ ವಿಜಯೇಂದ್ರ ಒಬ್ಬರೇ ಹೊಣೆಯಲ್ಲ ಎಂದು ಪರಿಷತ್ ಸದಸ್ಯ ಎನ್.ರವಿಕುಮಾರ್ ಪ್ರತಿಕ್ರಿಯಿಸಿದ್ದಾರೆ.
ರವಿವಾರ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಈ ಸೋಲಿಗೆ ಪಕ್ಷವೇ ಜವಾಬ್ದಾರಿ ಹೊರಲಿದೆ. ಪಕ್ಷವು ಇದನ್ನು ಸವಾಲಾಗಿ ತೆಗೆದುಕೊಳ್ಳಲಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಬೂತ್‍ಮಟ್ಟದಿಂದ ಸಂಘಟಿಸಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ಸಿಗರು ವಾಮಮಾರ್ಗದ ಮೂಲಕ ಹಣ ಹಂಚಿ, ಜಾತಿ ವಿಷಬೀಜವನ್ನು ಬಿತ್ತಿ, ಅಲ್ಪಸಂಖ್ಯಾತರನ್ನು ಸಂಪೂರ್ಣವಾಗಿ ಒಗ್ಗಟ್ಟು ಮಾಡಿ, ಮುಖ್ಯಮಂತ್ರಿ ತಾನು ಸಿಎಂ ಆಗಿ 5 ವರ್ಷ ಇರಬೇಕೋ ಬೇಡವೋ ಎಂದು ಮಂತ್ರಿಗಳಿಗೆ, ಶಾಸಕರಿಗೆ ಕೇಳಿ, ಭಯವನ್ನುಂಟು ಮಾಡಿ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸಿ ಗೆದ್ದಿದ್ದಾರೆ ಎಂದು ಹೇಳಿದರು.
ಎನ್‍ಡಿಎ ಮೂರು ಸ್ಥಾನಗಳನ್ನು ಸೋತಿದೆ. ಸೋಲಿನ ಅವಲೋಕನ ಮಾಡಿ ಬಿಜೆಪಿಯನ್ನು ಒಂದು ಬಲಿಷ್ಠ ಸಂಘಟನೆಯನ್ನಾಗಿ ರೂಪಿಸಿ ನಾವು ಮುಂದೆ ಅಧಿಕಾರಕ್ಕೆ ಬರುತ್ತೇವೆ. ಶಿಗ್ಗಾಂವಿಯಲ್ಲಿ ಅಲ್ಪಸಂಖ್ಯಾತರ ಮತಗಳೂ ದೊಡ್ಡ ಪ್ರಮಾಣದಲ್ಲಿ ಇದೆ. ನಮಗೆ ಬರುವ ಮತಗಳು ವಿಭಜನೆಯಾಗಿವೆ ಎಂದು ಅವರು ವಿಶ್ಲೇಷಿಸಿದರು.
ಅಧಿವೇಶನದಲ್ಲಿ ಕಟ್ಟಿ ಹಾಕುತ್ತೇವೆ: ಬೆಳಗಾವಿ ಅಧಿವೇಶನದಲ್ಲಿ ಈ ಸರಕಾರದ ಅಕ್ರಮಗಳು, ಭ್ರಷ್ಟಾಚಾರ, ವಕ್ಫ್ ಆಸ್ತಿ ವಿಚಾರಗಳನ್ನು ಬಯಲಿಗೆಳೆಯುತ್ತೇವೆ. ಮುಡಾ, ವಾಲ್ಮೀಕಿ ನಿಗಮದ ಹಗರಣಗಳು, ಸರಕಾರಿ ನೌಕರರು, ರೈತರ ಆತ್ಮಹತ್ಯೆ ಸಹಿತ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಸರಕಾರವನ್ನು ಕಟ್ಟಿ ಹಾಕುವ ಕೆಲಸ ಮಾಡುತ್ತೇವೆ ಎಂದು ಅವರು ತಿಳಿಸಿದರು.