ಕೈಗಾರಿಕೆಗಳ ಬೆಳವಣಿಗೆಯಲ್ಲಿ ಮೊದಲ ಐದು ರಾಜ್ಯಗಳಲ್ಲಿ ಕರ್ನಾಟಕಕ್ಕೆ ಸ್ಥಾನ : ಸಚಿವ ದರ್ಶನಾಪುರ

Update: 2024-11-24 13:34 GMT

ಬೆಂಗಳೂರು : ‘ದೇಶದಲ್ಲಿಯೇ ಕೈಗಾರಿಕೆಗಳ ಬೆಳವಣಿಗೆಯಲ್ಲಿನ ಮೊದಲ ಐದು ರಾಜ್ಯಗಳಲ್ಲಿ ಕರ್ನಾಟಕವು ಒಂದು. ಅಭಿವೃದ್ಧಿಗೆ ಜಾಗತಿಕವಾಗಿ ಸಣ್ಣ-ಮಧ್ಯಮ ಕೈಗಾರಿಕೆಗಳು ದೇಶದ ಜಿಡಿಪಿಗೆ ಶೇ.30ರಷ್ಟು ಕೊಡುಗೆ ನೀಡುತ್ತಿವೆ, ಜತೆಗೆ ಉದ್ಯೋಗಗಳನ್ನು ಸೃಷ್ಟಿಸುತ್ತಿವೆ’ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದ್ದಾರೆ.

ರವಿವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಮಹಿಳಾ ಉದ್ಯಮಿಗಳ ಒಕ್ಕೂಟದ(ಉಬಂಟು) ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಮಹಿಳಾ ಉದ್ಯಮಿಗಳಿಗೆ ಕರ್ನಾಟಕ ಸರಕಾರವು ಎಲ್ಲ ರೀತಿಯ ಸೌಲಭ್ಯ ಹಾಗೂ ನೆರವು ನೀಡಲು ಸಿದ್ಧವಿದೆ. ಸಣ್ಣ ಉದ್ಯಮಗಳನ್ನು ಉತ್ತೇಜಿಸಲು ವಿವಿಧ ಪ್ರೋತ್ಸಾಹ ಮತ್ತು ರಿಯಾಯಿತಿಗಳನ್ನು ನೀಡುತ್ತಿದ್ದೇವೆ. ಮಹಿಳಾ ಉದ್ಯಮಿಗಳನ್ನ ಬೆಳೆಸುತ್ತಿರುವ ಉಬಂಟು ಉಪಕ್ರಮ ಹೆಮ್ಮೆಯ ಕಾರ್ಯ' ಎಂದು ಬಣ್ಣಿಸಿದರು.

ಉಬಂಟು ಸಂಸ್ಥಾಪಕಿ ಕೆ.ರತ್ನಪ್ರಭಾ ಮಾತನಾಡಿ, ‘ವಾಟ್ಸಪ್ ಗ್ರೂಪ್‍ನಿಂದ ಆರಂಭವಾದ ಉಬಂಟು ಇಂದು ಎತ್ತರಕ್ಕೆ ಬೆಳೆದು ನಿಂತಿದೆ. ದೇಶ್ಯಾದ್ಯಂತ 55 ಸಂಸ್ಥೆಗಳಿದ್ದು, ನೂರು ಅಧ್ಯಕ್ಷರನ್ನು ಹೊಂದುವ ಗುರಿ ಇಟ್ಟುಕೊಳ್ಳಲಾಗಿದೆ. ಉದ್ಯಮ ಕೌಶಲ್ಯಗಳನ್ನ ಬೆಳೆಸುವ ನಿಟ್ಟಿನಲ್ಲಿ ಈಗಾಗಲೇ 2400 ಮಹಿಳಾ ಉದ್ಯಮಿಗಳಿಗೆ ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ನೀಡಲಾಗಿದೆ. ಸುಮಾರು 10ಸಾವಿರ ಮಹಿಳಾ ಉದ್ಯಮಿಗಳಿಗೆ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಫ್ಲಿಪ್ ಕಾರ್ಟ್‍ನ ಕಾರ್ಪೊರೇಟ್ ಕಮ್ಯೂನಿಕೇಷನ್ ಮುಖ್ಯಸ್ಥೆ ಸಾರಾ ಗಿಡಿಯೊನ್ ಭಾರತದಲ್ಲಿ ಮಹಿಳೆಯರು ಉದ್ಯಮದೆಡೆಗೆ ಆಸಕ್ತಿ ತೋರಿಸುತ್ತಿರುವುದರಿಂದಾಗಿ ದೇಶದ ಆರ್ಥಿಕತೆ ಬೆಳವಣಿಗೆ ಹೊಂದುತ್ತಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸದರು. ಪ್ರಸ್ತುತ ಮಹಿಳೆಯರಲ್ಲಿ ಉದ್ಯಮದ ಬಗ್ಗೆ ಹೆಚ್ಚು ಒಲವು ಮೂಡುತ್ತಿದೆ. ಪ್ರಸ್ತುತ ಶೇ.20ರಷ್ಟು ಉದ್ಯಮಗಳನ್ನು ಮಹಿಳೆಯರು ನಡೆಸುತ್ತಿದ್ದಾರೆ. 2018-20ರ ನಡುವೆ ಈ ಪ್ರಮಾಣ ಶೇ.50ರಷ್ಟು ಹೆಚ್ಚಾಗಿದೆ. ಇದೊಂದು ಸಂಭ್ರಮಿಸುವ ಸಂಗತಿ ಎಂದರು.

ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮಾತನಾಡಿ, ‘ಉಬಂಟು ಯಶಸ್ಸು ಇರುವುದೇ ಒಬ್ಬರಿಗೊಬ್ಬರು ಸಹಕಾರಿಯಾಗಿರಬೇಕು. ಸರಕಾರ ಇಲ್ಲಿ ಮಹಿಳಾ ಉದ್ಯಮಿಗಳಿಗೆ ನೆರವಾಗುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಕರ್ನಾಟಕದಲ್ಲಿ ಮಹಿಳೆಯರು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಮನೆ-ಮನೆಗೆ ತೆರಳಿ ಘನ ತ್ಯಾಜ್ಯಸಂಗ್ರಹಿಸುವ ಮೂಲಕ ಶೇ. 90ರಷ್ಟು ತ್ಯಾಜ್ಯ ನಿರ್ವಹಣೆ ಮಾಡುತ್ತಿದ್ದಾರೆ. ಈ ಕಾರ್ಯ ಅವರ ಜವಾಬ್ದಾರಿಯನ್ನು ತೋರಿಸುತ್ತಿದೆ. ಅತ್ಯುತ್ಸಾಹದಿಂದ ಮುನ್ನುಗ್ಗುವ ಮೂಲಕ ಮತ್ತಷ್ಟು ಸಾಧನೆ ಮಾಡಬಹದು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News