ವಕ್ಫ್ ತಿದ್ದುಪಡಿ ಮಸೂದೆ ಜಾರಿಗೆ ಯತ್ನ | ಕೇಂದ್ರ ಸರಕಾರದ ನಡೆಗೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಿರೋಧ
ಬೆಂಗಳೂರು : ಕೇಂದ್ರ ಸರಕಾರವು ಜಾರಿಗೆ ತರಲು ಉದ್ದೇಶಿಸಿರುವ ‘ವಕ್ಫ್ ತಿದ್ದುಪಡಿ ಮಸೂದೆ-2024’ ಅನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಇದು ದೇಶದ ಸಂವಿಧಾನವು ಮುಸ್ಲಿಮರಿಗೆ ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿಯುವ ಪ್ರಯತ್ನವಾಗಿದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಆರೋಪಿಸಿದೆ.
ರವಿವಾರ ನಗರದ ಬೆನ್ಸನ್ ಟೌನ್‌ನಲ್ಲಿರುವ ಹಝ್ರತ್ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ತನ್ನ 29ನೇ ರಾಷ್ಟ್ರೀಯ ಸಮಾವೇಶದ ಅಂಗವಾಗಿ ‘ಶರೀಅತ್ ಹಾಗೂ ವಕ್ಫ್ ರಕ್ಷಣೆ’ ಕುರಿತು ಬೃಹತ್ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿತ್ತು.
ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಧಾರ್ಮಿಕ ಮುಖಂಡರು ಹಾಗೂ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯರು, ಕೇಂದ್ರ ಸರಕಾರದ ನಡೆಯನ್ನು ಖಂಡಿಸಿದರು. ನಾವು ನಮ್ಮ ಧರ್ಮ ಹಾಗೂ ಶರೀಅತ್‌ನಲ್ಲಿ ಯಾವುದೇ ಹಸ್ತಕ್ಷೇಪಕ್ಕೆ ಅವಕಾಶ ನೀಡುವುದಿಲ್ಲ. ಸರಕಾರದ ನಡೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಅಧ್ಯಕ್ಷ ಮೌಲಾನಾ ಖಾಲಿದ್ ಸೈಫುಲ್ಲಾ ರಹ್ಮಾನಿ ಮಾತನಾಡಿ, ಮುಸ್ಲಿಮರು ಎಂಬ ಕಾರಣಕ್ಕೆ ಗುಂಪು ಹತ್ಯೆಗಳು ನಡೆಯುತ್ತಿವೆ. ಮುಸ್ಲಿಮರ ಜೊತೆ ವ್ಯಾಪಾರ ವಹಿವಾಟನ್ನು ಬಹಿಷ್ಕರಿಸಲಾಗುತ್ತಿದೆ. ಆದರೆ, ನೀವು ಅನ್ಯ ಧರ್ಮೀಯರ ಆಚಾರ, ವಿಚಾರಗಳನ್ನು ಟೀಕಿಸಬೇಡಿ. ನಮ್ಮ ವರ್ತನೆ ಪ್ರೀತಿ ಹಾಗೂ ಸಹೋದರತೆಯಿಂದ ಕೂಡಿರಬೇಕು ಎಂದು ಹೇಳಿದರು.
ಅನ್ಯಧರ್ಮೀಯರಲ್ಲಿ ಇರುವಂತಹ ಅಪನಂಬಿಕೆಗಳನ್ನು ದೂರ ಮಾಡುವ ಪ್ರಯತ್ನ ಮಾಡಿ. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನೀಡುವಂತಹ ಎಲ್ಲ ಸಂದೇಶಗಳನ್ನು ಪಾಲನೆ ಮಾಡಿ. ಆಗ ಮಾತ್ರ ನಾವು ಶರೀಅತ್ ಹಾಗೂ ಸಮುದಾಯದ ಎಲ್ಲ ವಿಷಯಗಳನ್ನು ಸಂರಕ್ಷಿಸಬಹುದಾಗಿದೆ ಎಂದು ಅವರು ಹೇಳಿದರು.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪ್ರಧಾನ ಕಾರ್ಯದರ್ಶಿ ಮೌಲಾನಾ ಶಾ ಮುಹಮ್ಮದ್ ಫಝ್ಲರ‍್ರಹೀಮ್ ಮುಜದ್ದೀದಿ ಮಾತನಾಡಿ, ನಮ್ಮ ಧರ್ಮದಲ್ಲಿ ಹಸ್ತಕ್ಷೇಪ ಮಾಡುವವರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬೇಡಿ. ನಮ್ಮ ಶರೀಅತ್ ರಕ್ಷಣೆಗಾಗಿ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಲಭ್ಯವಿರುವ ಎಲ್ಲ ಬಗೆಯ ಹೋರಾಟಗಳನ್ನು ನಡೆಸಲು ನಾವು ಸಿದ್ಧವಾಗಿರಬೇಕು ಎಂದು ಎಂದು ಕರೆ ನೀಡಿದರು.
ಶರೀಅತ್ ಆಧಾರದಲ್ಲಿ ಜೀವನ ನಡೆಸುವಂತೆ ಅಮೀರೆ ಶರೀಅತ್ ಕರೆ:
ಸಂವಿಧಾನದಲ್ಲಿ ಎಲ್ಲ ನಾಗರಿಕರಿಗೆ ತಮ್ಮ ಆಚಾರ, ವಿಚಾರಗಳನ್ನು ಅನುಸರಿಸಲು ಅವಕಾಶ ನೀಡಲಾಗಿದೆ. ಅದೇ ರೀತಿ, ಮುಸ್ಲಿಮರಿಗೂ ತಮ್ಮ ಶರೀಅತ್ ಪಾಲಿಸಲು ಅವಕಾಶ ನೀಡಿದೆ. ಆದರೆ, ನಮ್ಮ ಶರೀಅತ್ ಮೇಲೆ ಪದೇ ಪದೇ ದಾಳಿ ನಡೆಯುತ್ತಲೇ ಇದೆ ಎಂದು ತಮ್ಮ ಲಿಖಿತ ಸಂದೇಶದಲ್ಲಿ ಅಮೀರೆ ಶರೀಅತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಕರೆ ನೀಡಿದರು.
ಪ್ರತಿಯೊಬ್ಬ ಮುಸ್ಲಿಮರೂ ಶರೀಅತ್ ಆಧಾರದಲ್ಲಿ ತಮ್ಮ ಜೀವನ ನಡೆಸಲು ನಿರ್ಧರಿಸಿದರೆ, ನಮ್ಮನ್ನು ಯಾರೂ ಪರಾಭವಗೊಳಿಸಲು ಸಾಧ್ಯವಿಲ್ಲ. ನಮ್ಮ ಸಮಾಜದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ನೀಡದೇ ಇರುವುದು, ವಿಧವೆಯರ ಮೇಲೆ ಕನಿಕರ ತೋರದೆ ಇರುವುದು, ಮದುವೆಗಳಲ್ಲಿ ದುಂದುವೆಚ್ಚ, ವರದಕ್ಷಿಣೆಯನ್ನು ಪೋಷಿಸಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ವಕ್ಫ್ ಆಸ್ತಿಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಈ ತಪ್ಪುಗಳನ್ನು ಸಮಾಜ ಸರಿಪಡಿಸಿ ಕೊಳ್ಳದಿದ್ದರೆ ನಮ್ಮಿಂದಲೇ ಶರೀಅತ್‌ಗೆ ಅಪಮಾನ ಆಗುತ್ತದೆ ಎಂದು ಹೇಳಿರುವ ಅವರು, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯೂ ನಮ್ಮೆಲ್ಲರ ಒಗ್ಗಟ್ಟಿನ ವೇದಿಕೆಯಾಗಿದೆ. ಇದನ್ನು ಉಳಿಸಬೇಕಾದ ಅಗತ್ಯವಿದೆ. ಶರೀಅತ್ ರಕ್ಷಣೆಗಾಗಿ ನಾವೆಲ್ಲ ಒಂದಾಗಬೇಕು. ನಮ್ಮ ಮಸೀದಿಗಳು, ಮದ್ರಸಾಗಳು, ಈದ್ಗಾಗಳು, ಅನಾಥಾಶ್ರಮಗಳು, ಖಬರಸ್ಥಾನ್ ಹಾಗೂ ಇಸ್ಲಾಮಿಕ್ ಸಂಸ್ಥೆಗಳನ್ನು ರಕ್ಷಣೆ ಮಾಡಬೇಕಿದೆ ಎಂದು ಕರೆ ನೀಡಿದರು.
ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಸೈಯ್ಯದ್ ಸಾದತುಲ್ಲಾ ಹುಸೇನಿ ಮಾತನಾಡಿ, ವಿಶೇಷವಾಗಿ ಯುವಕರು ಜ್ಞಾನಾರ್ಜನೆ ಮಾಡಿ, ಶರೀಅತ್ ಅಡಿಯಲ್ಲಿ ಮದುವೆ, ವಿಚ್ಛೇದನ, ವಕ್ಫ್ ಏನು, ಅದರ ಕಾನೂನು ಏನು ಎಂಬುದನ್ನು ತಿಳಿಸಿಕೊಳ್ಳಿ. ಮಾಹಿತಿಯ ಕೊರತೆ ನಮ್ಮ ದೊಡ್ಡ ಬಲಹೀನತೆಯಾಗಿದೆ. ಅದಕ್ಕೆ ಅವಕಾಶ ಕೊಡಬೇಡಿ. ನೀವು ಮಾಹಿತಿ ಪಡೆದ ಬಳಿಕ ನಮ್ಮ ಅನ್ಯ ಧರ್ಮೀಯ ಸಹೋದರ, ಸಹೋದರಿಯರಿಗೂ ಸತ್ಯವನ್ನು ಮನವರಿಕೆ ಮಾಡಿಕೊಡಿ ಎಂದು ಮನವಿ ಮಾಡಿದರು.
ಸಾರ್ವಜನಿಕ ಸಭೆಯಲ್ಲಿ ಉತ್ತರಪ್ರದೇಶದ ದಾರುಲ್ ಉಲೂಮ್ ನದ್ವತುಲ್ ಉಲಮಾದ ಮೌಲಾನಾ ಖಾಲಿದ್ ನದ್ವಿ ಗಾಝಿಪುರಿ, ಮೌಲಾನಾ ಉಮರೈನ್ ಮಹಫೂಝ್ ರಹ್ಮಾನಿ, ಮೌಲಾನಾ ಸೈಯದ್ ತನ್ವೀರ್ ಹಾಶ್ಮಿ, ಮೌಲಾನಾ ಮುಹ್ಮದ್ ಮಕ್ಸೂದ್ ಇಮ್ರಾನ್, ಮೌಲಾನಾ ಅಬುತಾಲೀಬ್ ರಹ್ಮಾನಿ, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಮುಖಂಡ ಸುಲೇಮಾನ್ ಖಾನ್, ಜುಮ್ಮಾ ಮಸ್ಜಿದ್ ಟ್ರಸ್ಟ್ ಬೋರ್ಡ್ ಕಾರ್ಯದರ್ಶಿ ಉಸ್ಮಾನ್ ಶರೀಫ್ ಸೇರಿದಂತೆ ಅನೇಕ ಮಂದಿ ಗಣ್ಯರು ಪಾಲ್ಗೊಂಡಿದ್ದರು.
ವಕ್ಫ್ ತಿದ್ದುಪಡಿ ಮಸೂದೆ ಮೂಲಕ ವಕ್ಫ್ ಆಸ್ತಿಗಳನ್ನು ಲಪಾಟಿಸುವ ಪ್ರಯತ್ನ ನಡೆಯುತ್ತಿದೆ. ವಕ್ಫ್ ಬೋರ್ಡ್‌ಗೆ ಇರುವ ಅಧಿಕಾರವನ್ನು ಅಂತ್ಯಗೊಳಿಸಲು ಪ್ರಯತ್ನ ನಡೆಯುತ್ತಿದೆ. ನಮ್ಮ ಪೂರ್ವಿಕರು ವಿವಿಧ ಉದ್ದೇಶಗಳಿಗಾಗಿ ಭೂಮಿಯನ್ನು ವಕ್ಫ್ ಮಾಡಿದ್ದರು. ಆದರೆ, ಅದನ್ನು ಲಪಟಾಯಿಸಲು ಪ್ರಯತ್ನ ನಡೆಯುತ್ತಿದೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯೂ ಬೆಂಗಳೂರಿನ ದಾರುಲ್ ಉಲೂಮ್ ಸಬೀಲರ‍್ರಶಾದ್‌ನಲ್ಲಿ ಎರಡು ದಿನಗಳಿಂದ ಸರಣಿಗೋಷ್ಠಿಗಳನ್ನು ನಡೆಸಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಿದೆ.
ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ, ರಾಜ್ಯಾಧ್ಯಕ್ಷ, ಜಮೀಯತ್ ಉಲಮಾ ಹಿಂದ್
ನಮ್ಮ ಧಾರ್ಮಿಕ ಸ್ಥಳಗಳು ಅಪಾಯದಲ್ಲಿವೆ. ಸರಕಾರದ ಬುಲ್ಡೋಜರ್, ದೌರ್ಜನ್ಯಗಳಿಂದ ನಾವು ಹೆದರುವುದಿಲ್ಲ. ದೇಶದ ಎಲ್ಲ ನಗರಗಳಲ್ಲಿಯೂ ಇಂತಹ ಜನಸಭೆಗಳು ನಡೆಯುತ್ತಿವೆ. ಎಲ್ಲರೂ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಜೊತೆ ಇದ್ದಾರೆ. ನಮ್ಮ ಮಸೀದಿಗಳು, ದರ್ಗಾಗಳು ಎಲ್ಲದರ ಮೇಲೆ ದುರುದ್ದೇಶಪೂರಿತ ಹಿಡಿತವನ್ನು ನಾವು ಸಹಿಸುವುದಿಲ್ಲ.
ಮೌಲಾನಾ ಮಹ್ಮೂದ್ ಅಹ್ಮದ್ ಖಾದ್ರಿ, ಮುಂಬೈ
ನಮ್ಮ ಧಾರ್ಮಿಕ ಸ್ಥಳಗಳು ಅಪಾಯದಲ್ಲಿವೆ. ಸರಕಾರದ ಬುಲ್ಡೋಜರ್, ದೌರ್ಜನ್ಯಗಳಿಂದ ನಾವು ಹೆದರುವುದಿಲ್ಲ. ದೇಶದ ಎಲ್ಲ ನಗರಗಳಲ್ಲಿಯೂ ಇಂತಹ ಜನಸಭೆಗಳು ನಡೆಯುತ್ತಿವೆ. ಎಲ್ಲರೂ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಜೊತೆ ಇದ್ದಾರೆ. ನಮ್ಮ ಮಸೀದಿಗಳು, ದರ್ಗಾಗಳು ಎಲ್ಲದರ ಮೇಲೆ ದುರುದ್ದೇಶಪೂರಿತ ಹಿಡಿತವನ್ನು ನಾವು ಸಹಿಸುವುದಿಲ್ಲ.
ಮೌಲಾನಾ ಮಹ್ಮೂದ್ ಅಹ್ಮದ್ ಖಾದ್ರಿ, ಮುಂಬೈ
29ನೇ ಸಮಾವೇಶದ ನಿರ್ಣಯಗಳು :
ಮುಸ್ಲಿಮರು ಯಾವುದೇ ರೀತಿಯ ಸಮಸ್ಯೆಗಳು ಎದುರಾದರೂ ತಮ್ಮ ಇಮಾನ್ ರಕ್ಷಣೆಗೆ ನಿಲ್ಲಬೇಕು. ಮುಸ್ಲಿಮರ ಇತಿಹಾಸವನ್ನು ಬಿಂಬಿಸುವಂತಹ ನಗರ, ಪ್ರದೇಶಗಳು, ರಸ್ತೆಗಳ ಹೆಸರು ಬದಲಾಯಿಸುತ್ತಿರುವುದನ್ನು ಖಂಡಿಸಬೇಕು. ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿ ಶಿಕ್ಷಣ ಕೇಂದ್ರಗಳನ್ನು ಆರಂಭಿಸಬೇಕು. ಮದುವೆಯನ್ನು ಸರಳವಾಗಿಸಿ, ಯುವಕರಿಗೆ ಧರ್ಮದ ಆಚರಣೆ ಬಗ್ಗೆ ತಿಳಿ ಹೇಳಬೇಕು.
ಕುಟುಂಬದ ಸಮಸ್ಯೆಗಳನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗದೇ, ದಾರುಲ್ ಕಝಾಗೆ ತೆಗೆದುಕೊಂಡು ಹೋಗಬೇಕು. ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿಲ್ಲಿಸಬೇಕು, ಅವರ ಹಕ್ಕುಗಳನ್ನು ಕಸಿಯಬಾರದು. ನಮ್ಮ ಧಾರ್ಮಿಕ ಸಂಸ್ಥೆಗಳ ರಕ್ಷಣೆಗೆ ಕಾನೂನು ಹೋರಾಟದ ಜೊತೆ ಜನ ಹೋರಾಟಕ್ಕೂ ಸಿದ್ಧವಾಗಬೇಕು.
ವಕ್ಫ್ ಸಂಸ್ಥೆಗಳ ದಾಖಲಾತಿಗಳನ್ನು ಸರಿಪಡಿಸಬೇಕು. ಮುಸ್ಲಿಮರು ಮಾಡಿಕೊಂಡಿರುವ ವಕ್ಫ್ ಒತ್ತುವರಿಯನ್ನು ತೆರವುಗೊಳಿಸಬೇಕು. ಸರಕಾರ ಸಂವಿಧಾನ ಹಾಗೂ ಜಾತ್ಯತೀತ ತತ್ವದಡಿಯಲ್ಲಿ ಆಡಳಿತ ನಡೆಸಬೇಕು. ಫೆಲೆಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಅಮಾನವೀಯ ದಾಳಿಗೆ ಖಂಡನೆ.
ಇಸ್ಲಾಮಿಕ್ ರಾಷ್ಟ್ರಗಳ ಮೌನವನ್ನು ಈ ಅಪರಾಧದಲ್ಲಿ ಭಾಗಿ ಎಂದು ಭಾವಿಸುತ್ತೇವೆ. ಭಾರತ ಸರಕಾರವು ಇಸ್ರೇಲ್ ದಾಳಿಯನ್ನು ಖಂಡಿಸಬೇಕು. ಇಸ್ರೇಲ್ ಉತ್ಪನ್ನಗಳನ್ನು ಬಹಿಷ್ಕರಿಸಬೇಕು. ಪ್ರವಾದಿ ಮುಹಮ್ಮದ್(ಸ) ಅವರ ಕುರಿತು ನಿಂದನೆ ಮಾಡುವುದನ್ನು ತಡೆಯಲು ಕೇಂದ್ರ ಸರಕಾರ ಕಠಿಣ ಕಾನೂನು ಜಾರಿಗೆ ತರಬೇಕು.