ಬಿಜೆಪಿಯ ಲೆಟರ್ ಹೆಡ್ ನಲ್ಲಿ ಸಹಿ ಹಾಕಿದ ಕುಮಾರಸ್ವಾಮಿ!
ಬೆಂಗಳೂರು, ಜು.20: ನಗರದಲ್ಲಿ ಇತ್ತೀಚೆಗೆ ನಡೆದ ಕೇಂದ್ರ ಆಡಳಿತಾರೂಢ ಎನ್ಡಿಎ ವಿರುದ್ಧ ವಿಪಕ್ಷಗಳ ಸಭೆಯಲ್ಲಿ ಐಎಎಸ್ ಅಧಿಕಾರಿಗಳ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ಗುರುವಾರ ದೂರು ಸಲ್ಲಿಕೆ ಮಾಡಿದೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಿ.ಟಿ ರವಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಸುನೀಲ್ ಕುಮಾರ್, ರಮೇಶ್ ಜಾರಕಿಹೊಳಿ ಹಾಗೂ ಪ್ರಭು ಚೌಹಾಣ್ ಸೇರಿದಂತೆ ಬಿಜೆಪಿ ಪರಿಷತ್ ಸದಸ್ಯರು ಸಹ ರಾಜಭವನಕ್ಕೆ ತೆರಳಿ ದೂರು ನೀಡಿದ್ದಾರೆ.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ ಸೇರಿದಂತೆ ಜೆಡಿಎಸ್ ಶಾಸಕರು ಸಹ ಬಿಜೆಪಿ ಜತೆಗೂಡಿ ಕಲಾಪ ಸುಗಮವಾಗಿ, ನಿಷ್ಪಕ್ಷಪಾತವಾಗಿ ನಡೆಸಲು ಸ್ಪೀಕರ್ ವಿಫಲವಾಗಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ, ಜೆಡಿಎಸ್ ನ ಶಾಸಕರು ಹಾಗೂ ಪರಿಷತ್ ಸದಸ್ಯರು ಉಪಸ್ಥಿತರಿದ್ದರು.
ಬಿಜೆಪಿಯ ಲೆಟರ್ ಹೆಡ್ ನಲ್ಲಿ ಎಚ್.ಡಿಕೆ ಸಹಿ
'ಐಎಎಸ್ ಅಧಿಕಾರಿಗಳ ದುರ್ಬಳಕೆ ಮಾಡಿಕೊಂಡಿರುವ ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ನೀಡಿರುವ ಬಿಜೆಪಿಯ ಲೆಟರ್ ಹೆಡ್ ಗೆ ಕುಮಾರಸ್ವಾಮಿ ಅವರು ಸಹಿ ಮಾಡಿದ್ದಾರೆ.
ಇನ್ನು ಸದನದ ಒಳಗಡೆ ಹಾಗು ಹೊರಗೆ ಉಭಯ ಪಕ್ಷ ಒಗ್ಗಟ್ಟಾಗಿದ್ದು, ಕಾಂಗ್ರೆಸ್ ವಿರುದ್ಧ ಜಂಟಿಯಾಗಿ ಹೋರಾಟಕ್ಕಿಳಿದಿದೆ. ಮೈತ್ರಿಯ ಸುದ್ದಿ ಬೆನ್ನಲ್ಲೇ ಇಬ್ಬರ ಹೊಂದಾಣಿಕೆ ಹೋರಾಟ ಚರ್ಚೆಗೆ ಗ್ರಾಸವಾಗಿದೆ.
ಇದಕ್ಕೂ ಮುನ್ನ ಬಿಜೆಪಿ ನಾಯಕರು ನಿನ್ನೆ (ಜು. 19) ಪಕ್ಷದ 10 ಶಾಸಕರನ್ನು ವಿಧಾನಸಭೆಯಿಂದ ಅಮಾನತು ಮಾಡಿರುವುದನ್ನು ಖಂಡಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.