ಚಿಕ್ಕಮಗಳೂರು| ವಕೀಲನಿಗೆ ಪೊಲೀಸರಿಂದ ಹಲ್ಲೆ ಪ್ರಕರಣ: ಸಿಐಡಿ ಡಿಐಜಿಪಿಯಿಂದ ತನಿಖೆ ಆರಂಭ

Update: 2023-12-07 14:27 GMT

ಚಿಕ್ಕಮಗಳೂರು: ರಾಜ್ಯಾದ್ಯಂತ ಸದ್ದು ಮಾಡಿರುವ ವಕೀಲರು ಮತ್ತು ಪೊಲೀಸರ ನಡುವಿನ ಸಂಘರ್ಷದ ಪ್ರಕರಣವನ್ನು ರಾಜ್ಯ ಸರಕಾರ ಸಿಐಡಿಗೆ ವಹಿಸಿದ್ದು, ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ಸಿಐಡಿ ಡಿಐಜಿಪಿ ವಂಶಿಕೃಷ್ಣ ನೇತೃತ್ವದ ಅಧಿಕಾರಿಗಳ ತಂಡ ತನಿಖೆಯನ್ನು ಆರಂಭಿಸಿದ್ದು, ನಗರ ಠಾಣೆ ಪೊಲೀಸರಿಂದ ಹಲ್ಲೆಗೊಳಗಾದ ಯುವ ವಕೀಲ ಪ್ರೀತಮ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡರು.

ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್, ಡಿವೈಎಸ್ಪಿ ಉಮೇಶ್ ಹಾಗೂ ಕಾನೂನು ಸಲಹೆಗಾರ ಕಾಳೆ ಅವರು ಬುಧವಾರ ನಗರಕ್ಕೆ ಆಗಮಿಸಿ ಪ್ರವಾಸಿ ಮಂದಿರದಲ್ಲಿ ಪ್ರಕರಣ ಸಂಬಂಧದ ಕೆಲ ಮಾಹಿತಿಯನ್ನು ಕಲೆ ಹಾಕಿದ್ದರು. ಗುರುವಾರ ಸಿಐಡಿ ಡಿಐಜಿಪಿ ವಂಶಿಕೃಷ್ಣ ಅವರು ನಗರಕ್ಕೆ ಆಗಮಿಸಿದ್ದು, ನಗರದ ಪ್ರವಾಸಿ ಮಂದಿರದಲ್ಲಿ ತಮ್ಮ ಸಹದ್ಯೋಗಿಗಳೊಂದಿಗೆ ನಗರ ಠಾಣೆ ಪೊಲೀಸರಿಂದ ಹಲ್ಲೆಗೊಳಗಾದ ವಕೀಲ ಪ್ರೀತಮ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಪ್ರೀತಮ್ ನೀಡಿದ ಎಲ್ಲ ಹೇಳಿಕೆಗಳನ್ನೂ ಸಿಐಡಿ ಅಧಿಕಾರಿಗಳ ತಂಡ ಲಿಖಿತವಾಗಿ ದಾಖಲಿಸಿಕೊಂಡರು.

ನಗರದ ಮಾರ್ಕೆಟ್ ರಸ್ತೆಯಲ್ಲಿ ಯುವ ವಕೀಲ ಪ್ರೀತಮ್ ಅವರು ಬೈಕ್‍ನಲ್ಲಿ ತೆರಳುವಾಗ ಹೆಲ್ಮೆಟ್ ಧರಿಸಿಲ್ಲವೆಂಬ ಕ್ಲುಲಕ ಕಾರಣಕ್ಕೆ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ವಕೀಲ ಪ್ರೀತಮ್ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ್ದರು ಎಂದು ಪ್ರೀತಮ್ ದೂರಿನಲ್ಲಿ ಆರೋಪಿಸಿದ್ದು, ಈ ಘಟನೆ ಸಂಬಂಧ ಅಂದು ಪೊಲೀಸ್ ಠಾಣೆಯಲ್ಲಿ ಏನೆಲ್ಲ ನಡೆಯಿತು ಎಂಬ ಮಾಹಿತಿಯನ್ನು ಸಿಐಡಿ ಡಿಐಜಿಪಿ ವಂಶಿಕೃಷ್ಣ ಕಲೆ ಹಾಕಿದರು.

ವಕೀಲ ಪ್ರೀತಮ್ ಅವರಿಂದ ಹೆಳಿಕೆ ದಾಖಲಿಸಿಕೊಂಡ ಸಿಐಡಿ ಡಿಐಜಿಪಿ ವಂಶಿಕೃಷ್ಣ, ಸಿಐಡಿ ಎಸ್ಪಿ ವೆಂಕಟೇಶ್, ಡಿವೈಎಸ್ಪಿ ಉಮೇಶ್ ನೇತೃತ್ವದ ತಂಡ ಘಟನೆಯಲ್ಲಿ ಅಮಾನತುಗೊಂಡಿರುವ ನಗರ ಠಾಣೆಯ 6 ಮಂದಿ ಪೊಲೀಸರನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಳ್ಳಲು ಮುಂದಾಗಿದ್ದಾರೆ. ನಗರ ಠಾಣೆಯ ಪಿಎಸ್ಸೈ ಮಹೇಶ್ ಪುಜೇರಿ, ಎಎಸ್ಸೈ ರಾಮಪ್ಪ, ಹೆಡ್ ಕಾನ್ಸ್‍ಸ್ಟೇಬಲ್ ಶಶಿಧರ್, ಪೇದೆಗಳಾದ ಗುರುಪ್ರಸಾದ್, ನಿಖಿಲ್, ಯುವರಾಜ ಎಂಬವರನ್ನು ವಿಚಾರಣೆಗೆ ಒಳಪಡಿಸಿ ನಡೆದ ಘಟನೆಯ ವಿವರವನ್ನು ಪಡೆದುಕೊಳ್ಳಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ.

ನಗರದಲ್ಲಿ ನಡೆದಿರುವ ವಕೀಲರು ಮತ್ತು ಪೊಲೀಸರ ನಡುವಿನ ಸಂಘರ್ಷದಲ್ಲಿ 6 ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದ್ದು, ಪೊಲೀಸರು ಹಾಗೂ ವಕೀಲ ಪ್ರೀತಮ್ ಸೇರಿದಂತೆ ವಕೀಲರ ಸಂಘದ ಅಧ್ಯಕ್ಷ, ಪದಾಧಿಕಾರಿಗಳ ಮೇಲೂ ದೂರು ಪ್ರತಿದೂರು ದಾಖಲಾಗಿದೆ. ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದು, ಡಿಐಜಿ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಹೈಕೋರ್ಟ್ ಇತ್ತೀಚೆಗೆ ಆದೇಶ ನೀಡಿತ್ತು.

ನ್ಯಾಯಾಲಯದ ಆದೇಶ ಬಳಿಕ ರಾಜ್ಯ ಸರಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಈ ಹಿನ್ನಲೆಯಲ್ಲಿ ಸಿಐಡಿ ಡಿಐಜಿಪಿ ವಂಶಿಕೃಷ್ಣ ನೇತೃತ್ವದಲ್ಲಿ ತನಿಖೆ ಆರಂಭಗೊಂಡಿದ್ದು, ಘಟನೆಯ ಸಂಪೂರ್ಣ ಮಾಹಿತಿಯನ್ನು ಸಿಐಡಿ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಒಟ್ಟಾರೆ ವಕೀಲರು ಮತ್ತು ಪೊಲೀಸರ ನಡುವಿನ ಈ ಪ್ರಕರಣ ಸದ್ಯ ಸಿಐಡಿ ಹೆಗಲಿಗೇರಿದ್ದು, ಘಟನೆಯಲ್ಲಿ ತಪ್ಪಿತಸ್ಥರು ಯಾರು ಎಂಬುದು ಸಿಐಡಿ ಅಧಿಕಾರಿಗಳ ತನಿಖೆಯಿಂದ ತಿಳಿದು ಬರಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News