ದಲಿತರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಮುಂದೆ ಬರಲು ಪ್ರಯತ್ನಿಸಲಿ: ಮೂಡ್ನಾಕೂಡು ಚಿನ್ನಸ್ವಾಮಿ

Update: 2023-10-14 17:28 GMT

ಬೆಂಗಳೂರು, ಅ.14: ದಲಿತ ಎಂದು ಕೊರಗುತ್ತಿದ್ದರೆ ನೀವು ದಲಿತರಾಗಿಯೇ ಉಳಿಯುತ್ತೇವೆ. ಹಾಗಾಗಿ ದಲಿತರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಮುಂದೆ ಬರಲು ಪ್ರಯತ್ನಿಸಬೇಕು ಎಂದು ಚಿಂತಕ ಮೂಡ್ನಾಕೂಡು ಚಿನ್ನಸ್ವಾಮಿ ಕರೆ ನೀಡಿದ್ದಾರೆ.

ಶನಿವಾರ ನಗರದ ನಾಗಸೇನ ಬುದ್ಧ ವಿಹಾರದಲ್ಲಿ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ, ಕರ್ನಾಟಕ ಬೌದ್ಧ ಸಮಾಜ ಹಾಗೂ ಸಮತಾ ಸೈನಿಕ ದಳದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಡಾ.ಬಿ.ಆರ್. ಅಂಬೇಡ್ಕರ್ ಅವರ 67ನೆ ವಾರ್ಷಿಕ ಧಮ್ಮ ಧೀಕ್ಷಾ ಮಹೋತ್ಸವ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂದು ದೇಶದ ಅತ್ಯುನ್ನತ ವೃತ್ತಿಗಳಲ್ಲಿ ಮೇಲ್ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ದಲಿತರೂ ದೊಡ್ಡ ಹುದ್ದೆಗಳನ್ನು ಪಡೆದು ಆ ಮೂಲಕ ಪ್ರಗತಿಪಥದತ್ತ ಸಾಗಲು ಪ್ರಯತ್ನಿಸುತ್ತಿರಬೇಕು. ನಾಗಲೋಟದಲ್ಲಿ ಮುಂದುವರಿಯುತ್ತಿರುವ ಇಂತಹ ಪ್ರಪಂಚದಲ್ಲಿ ಶೂದ್ರರು, ದಲಿತರು ಎಂಬ ಕಿಳರಿಮೆ ಬೇಡ, ಸಿಗುವಂತಹ ಅವಕಾಶಗಳನ್ನು ಪಡೆದುಕೊಂಡು ಭಿನ್ನ ಭಿನ್ನ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಮುಂದಾಗಬೇಕು ಎಂದರು.

ಈಗಾಗಲೇ ಮೇಲ್ಜಾತಿಯವರು ಕೆಲ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡುತ್ತಿದ್ದಾರೆ. ಆದರೆ ಇದು ನಮ್ಮಿಂದ ಸಾಧ್ಯವೇ ಎಂಬ ಜಿಜ್ಞಾಸೆ ಕಾಡುವುದುಂಟು. ಇಂತಹ ಮಟ್ಟಿಗೆ ಸಾಧನೆ ಮಾಡಲಾಗದಿದ್ದರೂ, ಸಿಗುವಂತಹ ಪ್ರಯೋಜನಗಳನ್ನು ಪಡೆದು ಇತರರಿಗೆ ಮಾದರಿಯಾಗಲು ಪ್ರಯತ್ನಿಸುತ್ತಿರಬೇಕು ಎಂದು ಅವರು ಹೇಳಿದರು.

ಲೇಖಕ ಪ್ರೊ.ಎನ್.ಆರ್. ಶಿವರಾಮ್ ಮಾತನಾಡಿ, ಬೌದ್ಧಧರ್ಮದ ಧಮ್ಮ ಎನ್ನುವುದು ಮಾನವೀಯತೆಯ ಮೂಲವಾಗಿದೆ. ಗೌತಮ ಬುದ್ಧರು ತಮ್ಮ 45 ವರ್ಷಗಳ ಕಾಲ ತಮ್ಮ ಅನುಭವಗಳ ಮೂಲಕ ಅವರು ಧಮ್ಮದ ಮೂಲಕ ಹಲವು ಸಂಗತಿಗಳನ್ನು ಕಂಡುಕೊಂಡರು. ಅದರಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ಬಂದಿದ್ದು ಮಾನವೀಯ ಮೌಲ್ಯಗಳು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರೊ.ಹೊನ್ನು ಸಿದ್ಧಾರ್ಥ, ಬೀದರ್ ಗಿರೀಶ್ ಮೂಡ್, ಸೋಮಶೇಖರ್, ಹ.ರಾ.ಮಹೇಶ್, ಸುರೇಶ್ ಗೌತಮ್ ಹಾಗೂ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಧಮ್ಮಧೀಕ್ಷಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿಧಾನಸೌಧದ ಮುಂಭಾಗದಿಂದ ಫ್ರೀಡ್‍ಂ ಪಾರ್ಕ್ ಮೂಲಕ ಸಾಗಿ ಸದಾಶಿವನಗರದ ನಾಗಸೇನ ಬುದ್ಧ ವಿಹಾರದ ವರೆಗೂ ಮೆರವಣಿಗೆ ನಡೆಯಿತು. ರಾಜ್ಯದ ವಿವಿಧೆಡೆಗಳಿಂದ ಜನತೆ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News