ಲೋಕಸಭೆ ಚುನಾವಣೆ 2024; ದಕ್ಷಿಣ ಭಾರತದಲ್ಲಿ ಅಚ್ಚರಿ ಫಲಿತಾಂಶ ನಿರೀಕ್ಷೆ: ಬಸವರಾಜ ಬೊಮ್ಮಾಯಿ

Update: 2024-01-24 09:27 GMT

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ. ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡಿನಲ್ಲೂ ಬಿಜೆಪಿಗೆ ಹೆಚ್ಚಿನ ಸ್ಥಾನ ಬರುವ ನಿರೀಕ್ಷೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬುಧವಾರ ಬಿಜೆಪಿ ಕಚೇರಿಯಲ್ಲಿ  ನಿವೃತ್ತ ಅಧಿಕಾರಿ ಆರ್. ರುದ್ರಯ್ಯ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡುತ್ತಿದ್ದರು.

ಇಡೀ ದೇಶ ಇವತ್ತು ಅತ್ಯಂತ ಭರವಸೆಯಿಂದ ನರೇಂದ್ರ ಮೋದಿಯವರ ಕಡೆ ನೋಡುತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಬಿಜೆಪಿ, ಮೋದಿ ಅಲೆ ಇದೆ. ಈ ಬಾರಿ ದಕ್ಷಿಣ ಭಾರತದಲ್ಲಿ ಅಚ್ಚರಿ ಫಲಿತಾಂಶ ಬರುವ ನಿರೀಕ್ಷೆ ಇದೆ. ಕರ್ನಾಟಕದಲ್ಲಿ ಇಪ್ಪತೈದು ಕ್ಷೇತ್ರಗಳಿಗಿಂತಲೂ ಹೆಚ್ಚು ಸ್ಥಾನ ಗೆಲ್ಲಲಿದೆ. ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣದಲ್ಲಿಯೂ ಅಚ್ಚರಿಯ ಫಲಿತಾಂಶ ಬರಲಿದೆ ಎಂದು ಹೇಳಿದರು.

ಎಸ್ಸಿ ಎಸ್ಟಿ ಸಮುದಾಯ ಕಾಂಗ್ರೆಸ್ ಬಗ್ಗೆ ಭ್ರಮ ನಿರಸನಗೊಂಡಿದ್ದಾರೆ. ಎಸ್ಸಿ ಎಸ್ಟಿ ಮೀಸಲಾತಿಗೆ ಜಾತಿಗಳನ್ನು ಸೇರಿಸಿದರು. ಆದರೆ, ಮೀಸಲಾತಿ ಹೆಚ್ಚಳ ಮಾಡಲಿಲ್ಲ. ನಾನು ಸಿಎಂ ಆಗಿದ್ದಾಗ ಎಸ್ಸಿ ಮೀಸಲಾತಿ 15% ರಿಂದ 17%. ಕ್ಕೆ ಎಸ್ಟಿ ಮೀಸಲಾತಿ 3% ರಿಂದ 4% ಕ್ಕೆ ಹೆಚ್ಚಳ ಮಾಡಿದ್ದೆ. ಇದರಿಂದ ಎಂಜಿನಿಯರಿಂಗ್ ಸೀಟ್ ನಲ್ಲಿ ಐದು ಸಾವಿರ ವಿದ್ಯಾರ್ಥಿಗಳು ಹೆಚ್ಚು ಅವಕಾಶ ಸಿಕ್ಕಿದೆ. ಮೆಡಿಕಲ್ ನಲ್ಲಿಯೂ ನೂರು ವಿದ್ಯಾರ್ಥಿಗಳಿಗೆ ಹೆಚ್ಚಿಗೆ ಅವಕಾಶ ಸಿಕ್ಕಿದೆ. ಅದೇ ರೀತಿ ಕೆಪಿಎಸ್ಸಿಯಲ್ಲಿ ನಡೆಯುವ ನೇಮಕಾತಿಯಲ್ಲೂ ಮೀಸಲಾತಿ ಹೆಚ್ಚಳವಾಗಲಿದೆ. ಏಕೆಂದರೆ ನಮ್ಮ ಸರ್ಕಾರದ ಅವಧಿಯಲ್ಲಿ ಮೀಸಲಾತಿ ಹೆಚ್ಚಳ ಮಾಡಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಿ ಜಾರಿಗೆ ತಂದಿದ್ದೇವೆ ಎಂದು ಹೇಳಿದರು.

ರಾಜ್ಯ ಸರ್ಕಾರ ಎಸ್ಸಿಪಿ, ಟಿಎಸ್ ಪಿ ಯ 11 ಸಾವಿರ ಕೋಟಿ ರೂ. ಗ್ಯಾರೆಂಟಿ ಯೋಜನೆಗಳಿಗೆ ಹಣ ನೀಡಿ, ದಲಿತರಿಗೆ ಅನ್ಯಾಯ ಮಾಡಿ ರಾಜಕೀಯ ಯೋಜನೆಗಳನ್ನು ಜಾರಿಗೆ ತಂದಿದೆ. ದಲಿತರ ಹಣ ಅವರಿಗೆ ಇದ್ದಿದ್ದರೆ, ಆ ಸಮುದಾಯಗಳ ಕಾಲೋನಿಗಳು, ರಸ್ತೆಗಳ ಅಭಿವೃದ್ಧಿಗೆ ಬಳಕೆಯಾಗುತ್ತಿತ್ತು. ಕಾಂಗ್ರೆಸ್ ನಿಂದ ದಲಿತರಿಗೆ ಆಗಿರುವ ಅನ್ಯಾಯ ಸಾಕಷ್ಟಿದೆ ಎಂದು ಹೇಳಿದರು.

 ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸಂಸದ ಮುನಿಸ್ವಾಮಿ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಶಾಸಕ ಶಿವರಾಜ ಪಾಟೀಲ್ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News