ಲೋಕಸಭಾ ಚುನಾವಣೆ | ವಿಕಲಚೇತನರು, ಹಿರಿಯ ನಾಗರಿಕರಿಗೆ ವಿವಿಧ ಸೌಲಭ್ಯ

Update: 2024-04-25 14:11 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ಮೊದಲ ಹಂತದ ಲೋಕಸಭಾ ಚುನಾವಣೆಗೆ ನಾಳೆ (ಎ.26)ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ರಾಜ್ಯದಲ್ಲಿರುವ ವಿಕಲಚೇತನ ಮತ್ತು ಹಿರಿಯ ನಾಗರಿಕ ಮತದಾರರಿಗೆ ಯಾವುದೇ ಅಡೆತಡೆ ಇಲ್ಲದೆ ಮತಗಟ್ಟೆಗಳಿಗೆ ಬಂದು ಸುಗಮವಾಗಿ ಮತದಾನ ಮಾಡಲು ಅಗತ್ಯವಿರುವ ವಿವಿಧ ಸೇವೆ ಹಾಗೂ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ರಾಂಪ್ (ಇಳಿಜಾರು) ರೈಲಿಂಗ್, ಗಾಲಿ ಕುರ್ಚಿಗಳು, ಅಂಧ ಮತದಾರರಿಗೆ ಅಗತ್ಯವಿರುವಂತೆ ಮತಯಂತ್ರದಲ್ಲಿ ಬೈಲ್ ಲಿಪಿ ಸಂಖ್ಯೆಗಳು, ಬೈಲ್ ಲಿಪಿಯ ಡಮ್ಮಿ ಮತಪತ್ರ, ಬೂತಕನ್ನಡಿ, ಶ್ರವಣದೋಷವುಳ್ಳ ಮತದಾರರಿಗೆ ಅಗತ್ಯವಿರುವಂತ ಸಂಜ್ಞಾ ಭಾಷೆ ತಜ್ಞರ ನೆರವು, ಸೂಚನಾ ಫಲಕಗಳು, ಶೌಚಾಲಯದ ವ್ಯವಸ್ಥೆ, ಮತದಾನ ಮಾಡಲು ಪ್ರತ್ಯೇಕ ಸರದಿ ಸಾಲು, ಕುಡಿಯುವ ನೀರಿನ ವ್ಯವಸ್ಥೆ, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಮತ್ತು ಆರೋಗ್ಯ ಸಹಾಯಕರ ನೆರವು, ಅಗತ್ಯವಿರುವ ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಹಾಗೂ ತರಬೇತಿ ಪಡೆದ ಸ್ವಯಂ ಸೇವಕರ ಸೇರಿದಂತೆ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗಿದೆ.

ಎಲ್ಲ ವಿಕಲಚೇತನರು ಮತ್ತು ಹಿರಿಯ ನಾಗರಿಕರು ಮತಗಟ್ಟೆಗಳಿಗೆ ಬಂದು ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಚುನಾವಣಾ ಸಂಯೋಜಕ ಎಸ್. ನಟರಾಜ್ ಕೋರಿದ್ದಾರೆ.

ವಿಶೇಷಚೇತನ ಮತದಾರರು ‘ಸಕ್ಷಮ್ ಆಪ್’ ಮೂಲಕ ಅಗತ್ಯ ನೆರವು ಬುಕ್ ಮಾಡಿ, ಮತ ಚಲಾಯಿಸಿ

ವಿಶೇಷಚೇತನ ಮತದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಯೋಗವು ‘ಸಕ್ಷಮ್ ಆಪ್’ನ್ನು ಅಭಿವೃದ್ಧಿಪಡಿಸಿದೆ. ಇದರಲ್ಲಿ ವಿಶೇಷ ಚೇತನರಿಗೆ ಅಗತ್ಯವಿರುವ ಮಾಹಿತಿ ಮತ್ತು ಅವರಿಗೆ ದೊರೆಯುವ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಇದರಿಂದ ವಿಶೇಷಚೇತನ ಮತದಾರರು ಭೌತಿಕವಾಗಿ ಅಲೆದಾಡುವುದನ್ನು ತಪ್ಪಿಸಿ, ತಮ್ಮ ಸ್ಥಳದಿಂದಲೇ ಮೊಬೈಲ್‍ನಲ್ಲಿ ಆನ್‍ಲೈನ್ ಮುಖಾಂತರ ತಮಗೆ ಬೇಕಾದ ಮಾಹಿತಿ ಹಾಗೂ ವಿಶೇಷಚೇತನರಿಗೆ ದೊರೆಯುವ ಸೌಲಭ್ಯಗಳಾದ ಗಾಲಿಕುರ್ಚಿ, ಸಾರಿಗೆ, ಸಹಾಯಕರು, ಪ್ರತ್ಯೇಕ ಸಾಲು, ಸಂಜ್ಞಾ ಭಾಷೆ ಪರಿಣಿತರು, ಬೂತಗನ್ನಡಿ, ಬ್ರೈಲ್ ಲಿಪಿ, ನೀರು ಇತ್ಯಾದಿ ಮಾಹಿತಿ ಒಳಗೊಂಡಿರುತ್ತದೆ.

ಇದನ್ನು ತಮ್ಮ ಮೊಬೈಲ್ ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದು. ನಂತರ ತಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿ ನೋಂದಾಯಿಸಿಕೊಂಡು ಲಾಗಿನ್ ಮಾಡಬಹುದು. ನಂತರ ಮತ ಚಲಾಯಿಸಲು ಮತಗಟ್ಟೆಗೆ ತೆರಳಲು ಪಿಕ್‌ ಅಪ್ ಮತ್ತು ಡ್ರಾಪ್ ವ್ಯವಸ್ಥೆಯನ್ನು ಕಾಯ್ದಿರಿಸಬಹುದು ಹಾಗೂ ಮತಗಟ್ಟೆಯಲ್ಲಿ ದೊರೆಯುವ ವಿಶೇಷ ಚೇತನರ ಸೌಲಭ್ಯಗಳನ್ನು ಪಡೆಯಲು ಆನ್‍ಲೈನ್‍ನಲ್ಲಿ ಕಾಯ್ದಿರಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News