ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ದೂರು ದಾಖಲಿಸಿದ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್

Update: 2024-10-11 14:13 GMT

ಎಂ.ಚಂದ್ರಶೇಖರ್/ಎಚ್‌.ಡಿ.ಕುಮಾರಸ್ವಾಮಿ

ಬೆಂಗಳೂರು : ತನ್ನ ಹಾಗೂ ತನ್ನ ಕುಟುಂಬದ ವಿರುದ್ಧ ದುರುದ್ದೇಶದಿಂದ ಸುಳ್ಳು ಆರೋಪಗಳನ್ನು ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಸುರೇಶ್ ಬಾಬು ವಿರುದ್ಧ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ದೂರು ದಾಖಲಿಸಿದ್ದಾರೆ.

ಈ ಸಂಬಂಧ ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿರುವ ಅವರು, ತಾನು ಕುಮಾರಸ್ವಾಮಿ ವಿರುದ್ಧ ದಾಖಲಾಗಿರುವ ಮೊಕದ್ದಮೆ ಸಂಖ್ಯೆ 16/2014 ಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಸಾಕ್ಷ್ಯಾಧಾರಗಳು ಲಭ್ಯವಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯಪಾಲರ ಅನುಮತಿ ಕೋರಿರುತ್ತೇನೆ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸೆ.28 ಹಾಗೂ ಸೆ.29ರಂದು ಕುಮಾರಸ್ವಾಮಿ ಪತ್ರಿಕಾಗೋಷ್ಠಿ ನಡೆಸಿ ನನ್ನ ವಿರುದ್ಧ ಸುಳ್ಳು ಹಾಗೂ ದುರುದ್ದೇಶಪೂರಿತ ಆರೋಪಗಳನ್ನು ಮಾಡಿ, ಬೆದರಿಕೆ ಹಾಕಿದ್ದಾರೆ ಎಂದು ಚಂದ್ರಶೇಖರ್ ದೂರಿದ್ದಾರೆ.

ನನ್ನನ್ನು ಕರ್ನಾಟಕ ಕೇಡರ್ ನಿಂದ ಬೇರೆ ರಾಜ್ಯಕ್ಕೆ ಕಳುಹಿಸುವುದಾಗಿ ಮೌಖಿಕ ಬೆದರಿಕೆ ಹಾಕಿದ್ದಾರೆ ಹಾಗೂ ನಾನು ಬೌರಿಂಗ್ ಆಸ್ಪತ್ರೆಯಿಂದ ಸುಳ್ಳು ವೈದ್ಯಕೀಯ ದಾಖಲಾತಿಯನ್ನು ಪಡೆದು ಕರ್ನಾಟಕ ಕೇಡರ್ ನಲ್ಲಿ ಮುಂದುವರೆಯುತ್ತಿರುವುದಾಗಿಯೂ ಆರೋಪ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ನಾನು ಲಂಚ ತೆಗೆದುಕೊಂಡಿರುವುದಾಗಿಯೂ ಕುಮಾರಸ್ವಾಮಿ ಸುಳ್ಳು ಆರೋಪ ಮಾಡಿದ್ದಾರೆ. ಸೆ.29ರಂದು ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಪತ್ರಿಕಾಗೋಷ್ಠಿ ಮಾಡಿ, ನನ್ನ ವಿರುದ್ಧ ಸುಳ್ಳು ಹಾಗೂ ದುರುದ್ದೇಶಪೂರಿತ ಆರೋಪಗಳನ್ನು ಮಾಡಿದ್ದಾರೆ. ನಂತರ ಕುಮಾರಸ್ವಾಮಿ ಆಪ್ತ ಸುರೇಶ್ ಬಾಬು ನನ್ನ ಮೇಲೆ ಸುಳ್ಳು ಹಾಗೂ ದುರುದ್ದೇಶಪೂರಿತ ಆರೋಪಗಳನ್ನು ಮಾಡಿ, ನನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಪತ್ರ ನೀಡಿದ್ದಾರೆ. ಆ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ್ದಾರೆ ಎಂದು ಚಂದ್ರಶೇಖರ್ ದೂರಿದ್ದಾರೆ.

ಚಂದ್ರಶೇಖರ್ ನೀಡಿರುವ ದೂರನ್ನು ಸ್ವೀಕರಿಸಿರುವ ಸಂಜಯ ನಗರ ಪೊಲೀಸರು, ಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಹಾಗೂ ಸುರೇಶ್ ಬಾಬು ವಿರುದ್ಧ ಬಿ.ಎನ್.ಎಸ್.ಎಸ್.ಕಲಂ 174(1)ರ ಮೇರೆಗೆ ಠಾಣಾ ಎನ್.ಸಿ.ಆರ್. ಸಂಖ್ಯೆ 207/2024 ರಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.

ಸಂಡೂರು ಗಣಿ ಹಗರಣದಲ್ಲಿ ಲೋಕಾಯುಕ್ತದೆದುರು ಹಾಜರಾಗಿ ವಿಚಾರಣೆ ಎದುರಿಸಿದ ಬೆನ್ನಿಗೇ ಕುಮಾರಸ್ವಾಮಿ ಅವರು ಪತ್ರಿಕಾಗೋಷ್ಠಿ ಮಾಡಿ ಲೋಕಾಯುಕ್ತ ಎಸ್ ಐ ಟಿ ಮುಖ್ಯಸ್ಥ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಅವರು ಭ್ರಷ್ಟ, ಬ್ಲ್ಯಾಕ್ ಮೇಲರ್ ಇತ್ಯಾದಿ ಆರೋಪ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಚಂದ್ರಶೇಖರ್ ನಾವು ಇದರಿಂದ ವಿಚಲಿತರಾಗುವುದಿಲ್ಲ, ಆರೋಪಿ ಯಾವುದೇ ಸ್ಥಾನದಲ್ಲಿದ್ದರೂ ಆತ ಆರೋಪಿಯೇ ಎಂದು ಹೇಳಿದ್ದರು. ಅದಕ್ಕೆ ಮತ್ತೆ ತಿರುಗೇಟು ನೀಡಿದ್ದ ಕುಮಾರಸ್ವಾಮಿ ಆತ ಕ್ರಿಮಿನಲ್ ಎಂದೇ ಚಂದ್ರಶೇಖರ್ ವಿರುದ್ಧ ಹರಿಹಾಯ್ದಿದ್ದರು.

ಈಗ ಎಡಿಜಿಪಿ ಚಂದ್ರಶೇಖರ್ ಅವರು ಕುಮಾರಸ್ವಾಮಿ ವಿರುದ್ಧವೇ ಪೊಲೀಸ್ ದೂರು ದಾಖಲಿಸಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಕೇಂದ್ರ ಸಚಿವರ ವಿರುದ್ಧವೇ ಹಿರಿಯ ಪೊಲೀಸ್ ಅಧಿಕಾರಿಕಾನೂನು ಸಮರಕ್ಕೆ ಮುಂದಾಗಿರುವ ಅಪರೂಪದ ಪ್ರಕರಣ ಇದಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News