ರಾಜ್ಯದ 35ಕ್ಕೂ ಹೆಚ್ಚು ಕಡೆಗಳಲ್ಲಿ ಲೋಕಾಯುಕ್ತ ದಾಳಿ: ಅಪಾರ ಪ್ರಮಾಣದ ನಗದು, ಚಿನ್ನಾಭರಣ, ಆಸ್ತಿ ಪತ್ತೆ

Update: 2024-01-09 15:40 GMT

ಬೆಂಗಳೂರು: ಲೋಕೋಪಯೋಗಿ, ಪಂಚಾಯತ್ ಅಭಿವೃದ್ಧಿ, ಬೆಸ್ಕಾಂ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧದ ಆರು ಪ್ರಕರಣಗಳಿಗೆ ಸಂಬಂಧಿಸಿದಂತೆ 35ಕ್ಕೂ ಹೆಚ್ಚು ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ನಗದು, ಚಿನ್ನಾಭರಣ ಹಾಗೂ ಆಸ್ತಿ ಪತ್ರಗಳು ಪತ್ತೆಯಾಗಿರುವುದಾಗಿ ವರದಿಯಾಗಿದೆ.

ಬೆಂಗಳೂರು, ರಾಮನಗರ, ಬಳ್ಳಾರಿ, ವಿಜಯನಗರ, ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ದೇವನಹಳ್ಳಿಯ ಪಿಡಿಒ ಡಿ.ಎಂ.ಪದ್ಮನಾಭ ಅವರಿಗೆ ಸೇರಿದ ತುಮಕೂರು, ದಾಬಸ್‍ಪೇಟೆಯಲ್ಲಿರುವ ಮನೆ, ಫಾರ್ಮ್ ಹೌಸ್ ಹಾಗೂ ಕೆಲಸದ ಕಚೇರಿಯಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ಇವರ ಮಲ್ಲೇಶ್ವರಂನ ನಿವಾಸ, ಸಪ್ತಗಿರಿ ಲೇಔಟ್ ಬಳಿಯ ಎಜಿಬಿ ಲೇಔಟ್‍ನಲ್ಲಿರುವ 4 ಅಂತಸ್ತಿನ ಮನೆ, ತುಮಕೂರು ಜಿಲ್ಲೆ ಅನುಪನಹಳ್ಳಿಯಲ್ಲಿರುವ ಫಾರ್ಮ್ ಹೌಸ್, 5 ಎಕರೆ ಕೃಷಿ ಭೂಮಿ, ಸೋಂಪುರದಲ್ಲಿರುವ ವಾಣಿಜ್ಯ ಕಟ್ಟಡ, ದಾಬಸ್‍ಪೇಟೆ, ಸೋಂಪುರದಲ್ಲಿ ಕೈಗಾರಿಕಾ ಶೆಡ್‍ಗಳಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದು, ಕೆಜಿಗಟ್ಟಲೆ ಚಿನ್ನ, ಬೆಳ್ಳಿ ಆಭರಣಗಳು, ಸ್ಥಿರಾಸ್ತಿ, ಚರಾಸ್ತಿ, ನಗದು ಸೇರಿ ಒಟ್ಟು 5.98 ಕೋಟಿ ರೂ.ಗೂ ಅಧಿಕ ಮೌಲ್ಯದಷ್ಟು ಆಸ್ತಿ ಗಳಿಕೆ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರಿನ ಕೆ.ಆರ್.ಸರ್ಕಲ್‍ನಲ್ಲಿರುವ ಬೆಸ್ಕಾಂ ಕೇಂದ್ರ ಕಚೇರಿಯ ಚೀಫ್ ಜನರಲ್ ಮ್ಯಾನೇಜರ್ ಎಂ.ಎಲ್.ನಾಗರಾಜ್ ಮತ್ತು ಅವರ ಸಂಬಂಧಿಕರ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ನಾಗರಾಜ್ ಅವರಿಗೆ ಸೇರಿದ ಸಿವಿ ರಾಮನ್ ನಗರದ ನಾಗವಾರಪಾಳ್ಯದ ಮನೆ, ನಾಗರಾಜ್ ವಾಸವಿದ್ದ ಕ್ವಾಟ್ರಸ್, ಬಳ್ಳಾರಿಯ ಹುಟ್ಟೂರಿನಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.

ನಾಗರಾಜ್ ಅವರು ಕೂಡ್ಲಿಗಿ ಪಟ್ಟಣ, ಗುಡೇಕೋಟೆ ಗ್ರಾಮದಲ್ಲಿ ಅಕ್ರಮ ಆಸ್ತಿ, ಪೆಟ್ರೋಲ್ ಬಂಕ್, ಮನೆ, ಜಮೀನು ಹೊಂದಿರುವ ಆರೋಪವಿದ್ದು, ನಾಗರಾಜ್ ಕೆಲ ದಿನಗಳ ಹಿಂದಷ್ಟೇ 7.50 ಲಕ್ಷ ರೂ. ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದರು. ಇದಲ್ಲದೆ ಮಂಡ್ಯ ಮೂಲದ ಬಿಬಿಎಂಪಿ ಅಧಿಕಾರಿ ಮಂಜೇಶ್ ಹಾಗೂ ಅವರ ಸಂಬಂಧಿಕರ ಮನೆ ಮೇಲೆ, ಬೆಸ್ಕಾಂ ಎಇಇ ಅಹಮದ್, ಸೂಪರಿಂಡೆಂಟ್ ಎನ್. ಸತೀಶ್, ಬೆಂಗಳೂರು ದಕ್ಷಿಣ ಚೆನ್ನೇನಹಳ್ಳಿ ಗ್ರಾಮ ಪಂಚಾಯತಿಯ ಸದಸ್ಯ ಸುರೇಶ್‍ಗೆ ಸೇರಿದ ಸ್ಥಳಗಳಲ್ಲೂ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದ್ದಾರೆ. ದಾಳಿಯಲ್ಲಿ ಎಂ.ಎಲ್.ನಾಗರಾಜ್ ಅವರು 6.37 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಆಸ್ತಿ ಗಳಿಕೆ ಹೊಂದಿರುವುದಾಗಿ ಪರಿಶೀಲನೆಯಲ್ಲಿ ತಿಳಿದುಬಂದಿದ್ದು, ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಕೆ.ಆರ್.ಸರ್ಕಲ್‍ನಲ್ಲಿರುವ ಬಿಲ್ಡಿಂಗ್ ಸರ್ಕಲ್‍ನ ಪಿಡಬ್ಲೂಡಿ ಇಂಜಿನಿಯರ್ ಎನ್.ಸತೀಶ್ ಬಾಬು ಅವರ ಜೆಸಿಆರ್ ಬಡಾವಣೆಯಲ್ಲಿರುವ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಸತೀಶ್ ಬಾಬು ಚಿತ್ರದುರ್ಗದಲ್ಲಿ ಕಾರ್ಯನಿರ್ವಹಿಸಿದ್ದರು. ಬೆಂಗಳೂರು ಮತ್ತು ಚಿತ್ರದುರ್ಗದ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, 15 ಕೃಷಿ ಜಮೀನು, 9,00,000 ರೂ. ನಗದು, 64,62,400 ರೂ. ಬೆಲೆಯ ಆಭರಣಗಳು ಹಾಗೂ ಲಕ್ಷಾಂತರ ಬೆಲೆಯ ವಾಹನಗಳು ಸೇರಿ 4,52,52,400 ರೂ.ನಷ್ಟು ಗಳಿಕೆ ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಆನೇಕಲ್ ತಾಲೂಕು ಯೋಜನಾ ಪ್ರಾಧಿಕಾರದ ಜಂಟಿ ನಿರ್ದೇಶಕ ಬಿ.ಮಂಜೇಶ್ ಅವರ ನಿವಾಸ, ಅವರ ಸ್ವಂತ ಊರಾದ ಮಂಡ್ಯ ಸೇರಿದಂತೆ ವಿವಿಧೆಡೆ ದಾಳಿ ನಡೆಸಲಾಗಿದೆ. ಮದ್ದೂರಿನ ಎಸ್‍ಐ ಕೋಡಿಹಳ್ಳಿಯಲ್ಲಿರುವ ಅಜ್ಜಿ ಮನೆ ಹಾಗೂ ಸಂಬಂಧಿಕರ ಮನೆಯ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಒಟ್ಟು 3,18,20,920 ರೂ.ನಷ್ಟು ಗಳಿಕೆ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾವರೆಕೆರೆ ಹೋಬಳಿಯ ಚನ್ನೇನಹಳ್ಳಿ ಗ್ರಾ.ಪಂ.ಸದಸ್ಯ ಎಚ್.ಎಸ್.ಸುರೇಶ್ ಅವರ ಮನೆಯಲ್ಲೂ ದಾಳಿ ನಡೆಸಲಾಗಿದ್ದು, 16 ನಿವೇಶನಗಳು, ಒಂದು ಮನೆ, 7.6 ಎಕರೆ ಕೃಷಿ ಜಮೀನು, ಚಿನ್ನಾಭರಣಗಳು, ವಾಹನಗಳು, ನಗದು ಸೇರಿ ಒಟ್ಟು 25,58,19,010 ರೂ. ನಷ್ಟು ಗಳಿಕೆ ಪತ್ತೆಯಾಗಿದೆ.

ರಾಮನಗರದ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸೈಯ್ಯದ್ ಮುನೀರ್ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿದ್ದು, ಎರಡು ನಿವೇಶನಗಳು, 7 ಮನೆಗಳು, ಕೃಷಿ ಜಮೀನು, ನಗದು, ಚಿನ್ನಾಭರಣ ಸೇರಿ ಒಟ್ಟು 5,48,60,898 ರೂ.ನಷ್ಟು ಗಳಿಕೆ ಪತ್ತೆಯಾಗಿದ್ದು, ಎಲ್ಲ ದಾಖಲೆಗಳನ್ನು ಪರಿಶೀಲಿಸಿ ತನಿಖೆಗೆ ಒಳಪಡಿಸಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News