ಸಚಿವ ಝಮೀರ್ ಅಹ್ಮದ್ ಗೆ ಲೋಕಾಯುಕ್ತ ಸಮನ್ಸ್; ಡಿ.3ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ
ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಪ್ರಕರಣ ಸಂಬಂಧಿಸಿದಂತೆ ಡಿ.3ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಸಚಿವ ಝಮೀರ್ ಅಹ್ಮದ್ ಖಾನ್ ಅವರಿಗೆ ಲೋಕಾಯುಕ್ತ ಪೊಲೀಸರು ಸಮನ್ಸ್ ನೀಡಿರುವುದಾಗಿ ವರದಿಯಾಗಿದೆ.
ನ.16ರ ಸಂಜೆ ಲೋಕಾಯುಕ್ತದ ಅಧಿಕಾರಿಗಳು ಝಮೀರ್ ಅವರಿಗೆ ಸಮನ್ಸ್ ನೀಡಿದ್ದು, ಡಿಸೆಂಬರ್ 3ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ನಲ್ಲಿ ಉಲ್ಲೇಖ ಮಾಡಿರುವುದಾಗಿ ಗೊತ್ತಾಗಿದೆ.
ಏನಿದು ಪ್ರಕರಣ?: ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆ ಸಂದರ್ಭದಲ್ಲಿ ಐಎಂಎ ಮತ್ತು ಝಮೀರ್ ಅವರ ನಡುವೆ ಹಣಕಾಸು ವ್ಯವಹಾರ ನಡೆದಿರುವುದನ್ನು ಜಾರಿ ನಿರ್ದೇಶನಾಲಯವು (ಈಡಿ) ಪತ್ತೆಹಚ್ಚಿತ್ತು. ಇದೇ ಆಧಾರದ ಮೇಲೆ 2021ರ ಆಗಸ್ಟ್‌ನಲ್ಲಿ ಝಮೀರ್ ನಿವಾಸ, ಕಚೇರಿ ಸೇರಿದಂತೆ ವಿವಿಧೆಡೆ ಈಡಿ ಅಧಿಕಾರಿಗಳು ದಾಳಿಸಿ ಹೆಚ್ಚಿನ ತನಿಖೆ ಒಳಪಡಿಸಿದ್ದರು.
ಈ ವೇಳೆ ತಮ್ಮ ಆದಾಯಕ್ಕಿಂತ ಹೆಚ್ಚು ಸ್ವತ್ತು ಹೊಂದಿರುವುದು ಪತ್ತೆಯಾಗಿತ್ತು.
ಈ ಸಂಬಂಧ ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಈ.ಡಿ ವಿವರಣಾತ್ಮಕವಾದ ವರದಿಯನ್ನು ನೀಡಿತ್ತು. ಜತೆಗೆ ತನಿಖೆಯ ಅಗತ್ಯವಿದೆ ಎಂದು ತಿಳಿಸಿತ್ತು. 2022ರ ಸೆಪ್ಟೆಂಬರ್‌ನಲ್ಲಿ ಎಸಿಬಿ ರದ್ದಾದ ಕಾರಣ, ಎಲ್ಲ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗಾವಣೆಯಾಗಿದ್ದವು.
ಆದರೂ, ಝಮೀರ್ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣನೀಯ ಮಟ್ಟದ ತನಿಖೆ ನಡೆದಿರಲಿಲ್ಲ. ಆದರೆ, ಈಗ ಪ್ರಕರಣಕ್ಕೆ ಮರುಜೀವ ನೀಡಲಾಗಿದ್ದು, ಡಿ.3ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಸಮನ್ಸ್ ನೀಡಲಾಗಿದೆ.