ಸಚಿವರನ್ನು ಸಂಪರ್ಕಿಸಿ ಬ್ಲಾಕ್‍ ಮಟ್ಟದಲ್ಲಿ ಕಡ್ಡಾಯವಾಗಿ ಕಾಂಗ್ರೆಸ್ ಕಚೇರಿ ಸ್ಥಾಪಿಸಿ; ಈ ವಿಚಾರದಲ್ಲಿ ರಾಜಿ ಇಲ್ಲ: ಡಿ.ಕೆ.ಶಿವಕುಮಾರ್

Update: 2023-08-14 14:11 GMT

ಬೆಂಗಳೂರು, ಆ.14: ಕಂದಾಯ ಅಥವಾ ಗ್ರಾಮೀಣಾಭಿವೃದ್ಧಿ ಸಚಿವರನ್ನು ಸಂಪರ್ಕಿಸಿ ಮುಂದಿನ ದಿನಗಳಲ್ಲಿ ಪ್ರತಿ ಬ್ಲಾಕ್‍ನಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಕಡ್ಡಾಯವಾಗಿ ಇರಲೇಬೇಕು.ಈ ವಿಚಾರದಲ್ಲಿ ರಾಜಿ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕರ್ನಾಟಕ ಕಾಂಗ್ರೆಸ್ ಸಮಿತಿಯ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಯಕರ್ತರು ಕಂದಾಯ ಸಚಿವರು, ಗ್ರಾಮೀಣಾಭಿವೃದ್ಧಿ ಸಚಿವರನ್ನು ಭೇಟಿ ಮಾಡಬೇಕು. ಜಮೀನು ಖರೀದಿ ಮಾಡುತ್ತೀರೋ ಏನು ಮಾಡುತ್ತೀರೋ ಗೊತ್ತಿಲ್ಲ. ಕಾಂಗ್ರೆಸ್ ದೇವಾಲಯವಾದ ಪಕ್ಷದ ಕಚೇರಿ ನಿರ್ಮಾಣ ಮಾಡಲೇಬೇಕು ಎಂದು ಹೇಳಿದರು.

ಮುಖ್ಯಮಂತ್ರಿಗಳು, ಸಚಿವರುಗಳು ಯಾವುದೇ ಜಿಲ್ಲೆ ಪ್ರವಾಸ ಮಾಡಿದರೂ ಅಲ್ಲಿ ಜಿಲ್ಲಾಧ್ಯಾಕ್ಷರೂ ಕೂಡ ಇರಬೇಕು. ನೀವು ಬಲಿಷ್ಠವಾಗಿದ್ದರೆ ಮಾತ್ರ ನಾವು ಬಲಿಷ್ಠವಾಗಿರುತ್ತೇವೆ. ನಿಮಗೆ ನಾವು ಹೆಚ್ಚಿನ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಮುಖ್ಯಮಂತ್ರಿಗಳು ಹಾಗೂ ನಾನು ಪ್ರತಿ ಜಿಲ್ಲೆಯ ಶಾಸಕರನ್ನು ಕರೆದು ಮಾತನಾಡುತ್ತಿದ್ದೇವೆ. ನಿಮಗೂ ಪ್ರತ್ಯೇಕವಾಗಿ ಸಮಯ ನಿಗದಿ ಮಾಡುತ್ತೇವೆ. ನೀವೆಲ್ಲರೂ ನಮ್ಮ ಜತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಪಕ್ಷ ಅಧಿಕಾರಕ್ಕೆ ಬಂದಿದೆ ನಮಗೆ ಏನು ಸಿಕ್ಕಿದೆ ಎಂಬ ಅನೇಕ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಕೂತಿದೆ ಎಂಬುದು ನಮಗೆ ಗೊತ್ತಿದೆ. ಚುನಾವಣೆ ಸಮಯದಲ್ಲಿ ಸಾವಿರಾರು ಮಂದಿ ಅರ್ಜಿ ಹಾಕಿದ್ದಿರಿ. ಎಲ್ಲರಿಗೂ ನಾವು ಅವಕಾಶ ನೀಡಲು ಆಗಿಲ್ಲ. ನಮ್ಮ ಆಯ್ಕೆಗೆ ಫಲಿತಾಂಶವೇ ಸಾಕ್ಷಿ. ನಮ್ಮ ಎಲ್ಲ ಆಯ್ಕೆ ಸರಿ ಎಂದು ಹೇಳುವುದಿಲ್ಲ. ಸುಮಾರು 15 ಕ್ಷೇತ್ರಗಳಲ್ಲಿ ಬಂಡಾಯದಿಂದ ಪಕ್ಷ ಸೋತಿದೆ ಎಂದರು.

ಚುನಾವಣೆ ಮುನ್ನ ನಾವು ಹೇಗೆ ಬೂತ್ ಮಟ್ಟದಲ್ಲಿ ಬಿಜೆಪಿ ಹಾಗೂ ದಳವನ್ನು ಸೋಲಿಸಲು ಶ್ರಮಿಸಿದೆವೋ ಅದೇ ರೀತಿ ಸರಕಾರದ ನೆರವು ಪಡೆದು ಪಕ್ಷ ಸಂಘಟನೆ ಮಾಡಬೇಕು. ಪ್ರತಿ ಬೂತ್‍ನಲ್ಲಿ ಬೇರೆ ಪಕ್ಷದವರನ್ನು ಕಾಂಗ್ರೆಸ್ ನತ್ತ ಸೆಳೆದು ಮತ ಪ್ರಮಾಣವನ್ನು ಹೆಚ್ಚಳ ಮಾಡಿಕೊಳ್ಳಬೇಕು. ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆ ಚುನಾವಣೆ ಕುರಿತು ನಮಗೆ ಮಾರ್ಗದರ್ಶನ ನೀಡಿದ್ದಾರೆ. ನಾವು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಪ್ರತಿ ಪಂಚಾಯಿತಿ ಹಾಗೂ ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ಪಟ್ಟಿ ಮಾಡಿ ಎಲ್ಲ ವರ್ಗಕ್ಕೆ ಸಾಮಾಜಿಕವಾಗಿ ಪ್ರತಿ ಕ್ಷೇತ್ರದಲ್ಲಿ 50-100 ಸದಸ್ಯರ ನೇಮಕಾತಿ ಮಾಡಬೇಕು. ರಾಜ್ಯ ಮಟ್ಟದ ಪದಾಧಿಕಾರಿಗಳ ಹೆಸರು ಸೂಚಿಸುವಂತೆ ಕೇಳಿದ್ದೇವೆ. ಸಹಕಾರ ಸಚಿವಾಲಯದಲ್ಲಿ, ಇಂಧನ ಇಲಾಖೆಯಲ್ಲಿ ನಮ್ಮ ಕಾರ್ಯಕರ್ತರನ್ನು ನಾಮನಿರ್ದೇಶನ ಮಾಡಲು ಸಚಿವರ ಜತೆ ಸೂಚನೆ ನೀಡಿದ್ದೇವೆ. ನಿಮ್ಮೆಲ್ಲರಿಗೂ ಅಧಿಕಾರ ನೀಡಬೇಕು ಎಂಬುದು ನಮ್ಮ ಉದ್ದೇಶ ಎಂದು ಅವರು ಉಲ್ಲೇಖಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News