"ಜಮೀನು ಯಾವಾಗ ಹಿಂದಿರುಗಿಸುತ್ತೀರಿ": ಬಿಜೆಪಿ-ಆರೆಸ್ಸೆಸ್ ನಾಯಕರಿಗೆ ಸಚಿವ ಭೋಸರಾಜು ಪ್ರಶ್ನೆ

Update: 2024-10-15 13:30 GMT

ಸಚಿವ ಎನ್.ಎಸ್.ಭೋಸರಾಜು

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಐದು ದಶಕಗಳಿಂದಲೂ ಪರಿಶುದ್ಧ ರಾಜಕೀಯ ಜೀವನ ನಡೆಸಿಕೊಂಡು ಬರುತ್ತಿದ್ದಾರೆ. ನ್ಯಾಯಬದ್ಧವಾಗಿ ಮಂಜೂರಾಗಿದ್ದ ಜಮೀನನ್ನು ಹಿಂದಿರುಗಿಸಿ ರಾಹುಲ್ ಖರ್ಗೆ ಮೇಲ್ಪಂಕ್ತಿ ಹಾಕಿದ್ದಾರೆ. ಬಿಜೆಪಿ ಹಾಗೂ ಆರೆಸ್ಸೆಸ್ ನಾಯಕರು ಮಂಜೂರು ಮಾಡಿಸಿಕೊಂಡಿರುವ ಜಮೀನು, ನಿವೇಶನಗಳನ್ನು ಯಾವಾಗ ಹಿಂದಿರುಗಿಸುತ್ತೀರಿ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಮಲ್ಲಿಕಾರ್ಜುನ ಖರ್ಗೆ ಕುಟುಂಬದ ವಿರುದ್ಧ ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡಿರುವುದು ಸರಿಯಲ್ಲ. ನಿರುದ್ಯೋಗಿಗಳಿಗೆ ತರಬೇತಿ ನೀಡಲು ಬಹುಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ನಿವೇಶನಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಇದಕ್ಕೆ ಕಾನೂನುಬದ್ದವಾಗಿ ನಿವೇಶನವೂ ಮಂಜೂರಾಗಿತ್ತು ಎಂದು ತಿಳಿಸಿದ್ದಾರೆ.

ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ನಿಯಮಾನುಸಾರ ಹಂಚಿಕೆಯಾಗಿದ್ದ ಐದು ಎಕರೆ ಜಮೀನನ್ನು ಸರಕಾರಕ್ಕೆ ಹಿಂದಿರುಗಿಸುವ ಮೂಲಕ ಖರ್ಗೆ ಕುಟುಂಬ ಮಾದರಿಯಾಗಿದೆ. ಬಿಜೆಪಿ ಹಾಗೂ ಆರೆಸ್ಸೆಸ್ ನಾಯಕರು ತಮಗೆ ಹಂಚಿಕೆಯಾಗಿದ್ದ ಜಮೀನು, ನಿವೇಶನಗಳನ್ನು ಹಿಂದಿರುಗಿಸಿ ಖರ್ಗೆ ಅವರಂತೆಯೇ ರಾಜ್ಯದ ಜನರಿಗೆ ಆದರ್ಶವಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಲ್ಯಾಣ ಕರ್ನಾಟಕದ ಅಭಿವೃದ್ದಿಯ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೆಚ್ಚಿನ ಕಾಳಜಿಯಿದೆ. ಈ ಟ್ರಸ್ಟ್‍ನ ಮೂಲಕ ಈ ಬೀದರ್, ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಜನಸಾಮಾನ್ಯರಿಗೆ ಹಾಗೂ ಬಡವರಿಗೆ ಶಿಕ್ಷಣ ನೀಡಿ ಅವರಿಗೆ ಉದ್ಯೋಗ ಕಲ್ಪಿಸುವ ಕಾರ್ಯ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಟ್ರಸ್ಟ್ ಲಾಭಾದಾಯಕವಾಗಿ ಕೆಲಸ ಮಾಡುತ್ತಿಲ್ಲ, ಜನಸಾಮಾನ್ಯರಿಗೆ ಶಿಕ್ಷಣ ಮತ್ತು ಕೌಶಲ್ಯದಲ್ಲಿ ನೆರವು ನೀಡುವ ಸಂಸ್ಥೆಯಾಗಿದೆ. ಇಂತಹ ಸಂಸ್ಥೆಯ ಹಾಗೂ ಆಡಳಿತ ಮಂಡಳಿಯ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದು ಬಿಜೆಪಿ ನಾಯಕರಿಗೆ ಶೋಭೆ ತರುವುದಿಲ್ಲ. ಬಿಜೆಪಿ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಭರಾಟೆಯಲ್ಲಿ ಇಲ್ಲಸಲ್ಲದ ಆರೋಪ ಮಾಡುವ ಖಯಾಲಿಯನ್ನು ಬಿಡಬೇಕು ಎಂದು ಭೋಸರಾಜು ಆಗ್ರಹಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News