‘ಗೃಹಲಕ್ಷ್ಮಿ’ ಹಣದಿಂದ ಗ್ರಂಥಾಲಯ ನಿರ್ಮಿಸಿದ್ದ ಮಲ್ಲವ್ವ ಮೇಟಿ; ಕುವೆಂಪು ಅವರ ಕಾನೂರು ಹೆಗ್ಗಡತಿ ಪುಸ್ತಕ ಉಡುಗೊರೆ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Update: 2024-10-15 14:05 GMT

ಬೆಳಗಾವಿ: ಗೃಹಲಕ್ಷ್ಮಿ ಯೋಜನೆಯ ಹಣದಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಅಭ್ಯರ್ಥಿಗಳ ಅನುಕೂಲಕ್ಕಾಗಿ ಗ್ರಂಥಾಲಯ ನಿರ್ಮಿಸಿರುವ ಜಿಲ್ಲೆಯ ರಾಯಬಾಗ ತಾಲೂಕಿನ ಮಂಟೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಲ್ಲವ್ವ ಮೇಟಿ ಅವರ ಕಾರ್ಯವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶ್ಲಾಘಿಸಿದ್ದಾರೆ.

ಮಲ್ಲವ್ವ ಮೇಟಿ ಅವರ ಕಾರ್ಯ ಇಡೀ ಸಮಾಜಕ್ಕೆ ಹಾಗೂ ರಾಜ್ಯಕ್ಕೆ ಮಾದರಿಯಾಗಿದೆ. ಮಲ್ಲವ್ವ ಮೇಟಿ ಕಾರ್ಯನೋಡಿದರೆ ಸಾವಿತ್ರಿಬಾಯಿ ಪುಲೆ ಬಳಿಕ ಆಧುನಿಕ ಅಕ್ಷರದ ಅವ್ವ ಎನ್ನಬಹುದು. ಅವರ ಕಾರ್ಯಕ್ಕೆ ಅಭಿನಂದನೆಗಳು ಎಂದು ಹೇಳಿದರು.

ಗ್ರಂಥಾಲಯಕ್ಕೆ ‘ಗೃಹಲಕ್ಷ್ಮಿ' ಹೆಸರಿಡಿ: ಮಲ್ಲವ್ವ ಮೇಟಿ ನಿರ್ಮಿಸಿರುವ ಗ್ರಂಥಾಲಯಕ್ಕೆ ಗೃಹಲಕ್ಷ್ಮಿ ಹೆಸರಿಡಲು ಮನವಿ ಮಾಡಿದರು. ಗೃಹಲಕ್ಷ್ಮಿ ಯೋಜನೆಯಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಿದ್ದು, ಈ ಯೋಜನೆಯ ಹೆಸರು ಅಜರಾಮರವಾಗಿರಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಸರು ಈ ಯೋಜನೆಯ ಮೂಲಕ ಶಾಶ್ವತವಾಗಿ ಉಳಿಯಲಿ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

‘ಕಾನೂರು ಹೆಗ್ಗಡತಿ' ಪುಸ್ತಕ ಉಡುಗೊರೆ: ರಾಷ್ಟ್ರಕವಿ ಕುವೆಂಪು ಬರೆದಿರುವ ಕಾನೂರು ಹೆಗ್ಗಡತಿ ಪುಸ್ತಕವನ್ನು ಸಚಿವರು ಗ್ರಂಥಾಲಯಕ್ಕೆ ಉಡುಗೊರೆ ನೀಡಿದರು. ಈ ಗ್ರಂಥಾಲಯ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಲಿ. ಇದರ ಸದುಪಯೋಗವನ್ನು ಎಲ್ಲರೂ ಪಡೆಯುವಂತಾಗಲಿ ಎಂದು ಅವರು ಹಾರೈಸಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News