ʼಕೋವಿಡ್ ವರದಿʼಯನ್ನು ಸದನದಲ್ಲಿ ಮಂಡಿಸಲಿ : ಆರ್.ಅಶೋಕ್ ಆಗ್ರಹ

Update: 2024-11-14 14:52 GMT

ಆರ್.ಅಶೋಕ್

ಬೆಂಗಳೂರು : ಕೊರೋನ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಮೈಕಲ್ ಡಿ.ಕುನ್ನಾ ನೇತೃತ್ವದ ಸಮಿತಿ ನೀಡಿರುವ ವರದಿಯನ್ನು ರಾಜ್ಯ ಸರಕಾರ ಸದನದಲ್ಲಿ ಮಂಡಿಸಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಯಾವ ಸರಕು ಯಾವ ದರದಲ್ಲಿತ್ತು. ಎಲ್ಲ ರಾಜ್ಯದಲ್ಲಿ ಕಿಟ್‍ಗಳನ್ನು ಎಷ್ಟು ದರಕ್ಕೆ ಖರೀದಿ ಮಾಡಲಾಗಿದೆ ಎಂದು ತಿಳಿಸಲಿ. ತುರ್ತು ಖರೀದಿ ಮಾಡದೆ 60 ದಿನಗಳ ಟೆಂಡರ್‌ಗೆ ಕಾದುಕೊಂಡು ಕೂತಿದ್ದರೆ ಎಲ್ಲವೂ ಮುಗಿದು ಹೋಗುತ್ತಿತ್ತು. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಬೇಕು ಎಂದರು.

ಈಡಿ ತನಿಖೆ ಮಾಡಬೇಕು: 50 ಮಂದಿ ಶಾಸಕರನ್ನು ಖರೀದಿಸಲು ಬೇಕಾದ 2,500 ಕೋಟಿ ರೂ. ಎಲ್ಲಿದೆ, ಯಾವ ವ್ಯಕ್ತಿ ಖರೀದಿಸಲು ಮುಂದಾಗಿದ್ದಾರೆಂದು ಸಿದ್ದರಾಮಯ್ಯ ತಿಳಿಸಬೇಕು. ಈ ಕುರಿತು ಜಾರಿ ನಿರ್ದೇಶನಾಲಯ ತನಿಖೆ ಮಾಡಬೇಕು. ಮುಖ್ಯಮಂತ್ರಿ ರಾಜೀನಾಮೆ ನೀಡುವ ಕಾಲ ಸನ್ನಿಹಿತವಾಗಿದ್ದು, ಅದಕ್ಕಾಗಿ ಶಾಸಕರಿಗೆ ದರ ನಿಗದಿ ಮಾಡಿದ್ದಾರೆ ಎಂದು ಟೀಕಿಸಿದರು.

‘ಗುಪ್ತಚರ ವಿಭಾಗ ಅವರ ಕೈಯಲ್ಲೇ ಇದ್ದು, ಎಲ್ಲಿ ಯಾರಿಗೆ ಎಷ್ಟು ಹಣ ನೀಡಲಾಗಿದೆಂಬ ವರದಿ ಅವರು ತರಿಸಿಕೊಳ್ಳಬಹುದಿತ್ತು. ತಮ್ಮ ಸ್ಥಾನ ಅಸ್ಥಿರವಾಗಿರುವುದರಿಂದ ಹೀಗೆ ಮಾತಾಡಿದ್ದಾರೆ. ಹೊಸ ಸರಕಾರ ರಚನೆಯಾಗಲು 50ಕ್ಕೂ ಅಧಿಕ ಶಾಸಕರು ಪಕ್ಷ ಬಿಟ್ಟು ಹೊರಗೆ ಬರಬೇಕಾಗುತ್ತದೆ. ಆ ಲೆಕ್ಕದಲ್ಲೂ ಅವರು ತಪ್ಪಾಗಿ ಹೇಳಿದ್ದಾರೆ ಎಂದರು.

ಇವರನ್ನು ಮುಟ್ಟಿದರೆ ಜನರು ದಂಗೆ ಏಳುತ್ತಾರೆ ಎನ್ನಲು ಇವರು ಮೇಲಿಂದ ಇಳಿದು ಬಂದವರಲ್ಲ. ಯತೀಂದ್ರಗೆ ನ್ಯಾಯಾಂಗದ ಬಗ್ಗೆ ಗೌರವವಿಲ್ಲ. ಇವರ ಪರವಾಗಿ ತೀರ್ಪು ಬಂದರೆ ನ್ಯಾಯಾಲಯ ಸರಿ ಇದೆ, ಇಲ್ಲವಾದರೆ ಸರಿ ಇಲ್ಲ ಎನ್ನುತ್ತಾರೆ. ಸಚಿವ ಝಮೀರ್ ಅಹ್ಮದ್ ಇದೇ ರೀತಿ ಮಾತಾಡಿದ್ದಾರೆ. ಕಾಂಗ್ರೆಸ್ ಗೆದ್ದಾಗ ಇವಿಎಂ ಸರಿ ಇದೆ, ಸೋತಾಗ ಇವಿಎಂ ಸರಿ ಇಲ್ಲ ಎನ್ನುತ್ತಾರೆ ಎಂದು ಲೇವಡಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News