ಸಾವಯವ ಮತ್ತು ಸಿರಿಧಾನ್ಯ ಹಬ್ ಸ್ಥಾಪನೆ : ಎಚ್.ಕೆ.ಪಾಟೀಲ್

Update: 2024-11-14 13:58 GMT

ಎಚ್.ಕೆ.ಪಾಟೀಲ್

ಬೆಂಗಳೂರು : ರಾಜ್ಯದ ಸಾವಯವ ಮತ್ತು ಸಿರಿಧಾನ್ಯ ಉತ್ಪಾದಕರಿಗೆ, ಮಾರುಕಟ್ಟೆ ದಾರರಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗುವಂತೆ ಮಾರುಕಟ್ಟೆ ಸಂಪರ್ಕವನ್ನು ವಿಸ್ತರಿಸಲು ಮತ್ತು ಆರೋಗ್ಯವನ್ನು ಸುಧಾರಿಸಲು ‘ಸಾವಯವ ಮತ್ತು ಸಿರಿಧಾನ್ಯ ಹಬ್’ ಅನ್ನು 20 ಕೋಟಿ ರೂ.ಅನುದಾನದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹೆಬ್ಬಾಳದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಒದಗಿಸಿರುವ ಈ 20 ಕೋಟಿ ರೂ. ಅನುದಾನ ಬಳಸಿಕೊಂಡು ಬೆಂಗಳೂರಿನ ಹೆಬ್ಬಾಳದಲ್ಲಿ ‘ಸಾವಯವ ಮತ್ತು ಸಿರಿಧಾನ್ಯ ಹಬ್’ ಸ್ಥಾಪನೆ ಮಾಡಲಾಗುವುದು ಎಂದರು.

ಇತರೆ ನಿರ್ಣಯಗಳು:

ಕೆಪಿಎಸ್ಸಿ ತನ್ನ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಸಲ್ಲಿಕೆ ಮಾಡಿರುವ 2023-24ನೇ ಸಾಲಿನ ವಾರ್ಷಿಕ ವರದಿಯನ್ನು ವಿಧಾನಮಂಡಲದ ಮುಂದೆ ಮಂಡಿಸಲು ಸಚಿವ ಸಂಪುಟದ ಅನುಮೋದಿಸಿದೆ.

2025ನೇ ಸಾಲಿನ 19 ಸಾರ್ವತ್ರಿಕ ರಜಾ ದಿನಗಳನ್ನು ಮತ್ತು 20 ಪರಿಮಿತ ರಜಾ ದಿನಗಳ ಪಟ್ಟಿಯನ್ನು ಸಚಿವ ಸಂಪುಟ ಅನುಮೋದಿಸಿದೆ. ವಿಧಾನ ಪರಿಷತ್ತಿನ ಎರಡು ಸ್ಥಾನಗಳಿಗೆ ಇಬ್ಬರು ಸದಸ್ಯರನ್ನು ರಾಜ್ಯಪಾಲರಿಂದ ನಾಮನಿರ್ದೇಶನ ಮಾಡಲು ಹೆಸರು ಶಿಫಾರಸ್ಸು ಮಾಡಲು ಮುಖ್ಯಮಂತ್ರಿಗೆ ಸಚಿವ ಸಂಪುಟ ಅಧಿಕಾರ ನೀಡಿದೆ.

2024-25ನೇ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಪಿಎಂ-ಅಭಿಮ್ ಯೋಜನೆಯಡಿ ಅನುಮೋದನೆಯಾಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಡುಪಿ ಮತ್ತು ದಾವಣಗೆರೆ ಜಿಲ್ಲಾ ಆಸ್ಪತ್ರೆಗಳಲ್ಲಿ 50 ಹಾಸಿಗೆಗಳ ತೀವ್ರ ನಿಗಾ ಆರೈಕೆ ಘಟಕಗಳ ನಿರ್ಮಾಣ ಹಾಗೂ ಉಡುಪಿ, ದಾವಣಗೆರೆ ಮತ್ತು ವಿಜಯಪುರ ತೀವ್ರ ನಿಗಾ ಆರೈಕೆ ಘಟಕಗಳಿಗೆ ಅಗತ್ಯವಿರುವ ಉಪಕರಣಗಳ ಖರೀದಿಸಲು ಒಟ್ಟು ಅಂದಾಜು ಮೊತ್ತ 39.37 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ಸರಕಾರಿ ರೇಷ್ಮೆ ತರಬೇತಿ ಸಂಸ್ಥೆಯ ಆವರಣದಲ್ಲಿ ಹೈ ಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ ನಿರ್ಮಾಣ ಹಂತ-2ರ ಕಾಮಗಾರಿಯನ್ನು 125 ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಡಾ.ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣದ 13.94 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಘಟನೋತ್ತರ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಪಿಎಂ-ಅಭಿಮ್ ಯೋಜನೆಯಡಿ ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಹುಬ್ಬಳ್ಳಿ, ಹಾಸನ ಹಾಗೂ ಬಳ್ಳಾರಿ ವೈದ್ಯಕೀಯ ಕಾಲೇಜುಗಳಲ್ಲಿ 50 ಹಾಸಿಗೆಗಳ ಸಾಮರ್ಥ್ಯದ ಒಟ್ಟು 7 ತೀವ್ರ ನಿಗಾ ಆರೈಕೆ ಬ್ಲಾಕ್‍ಗಳ ನಿರ್ಮಾಣದ 148.20 ಕೋಟಿ ರೂ.ಗಳ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ 69,919 ಅಂಗನವಾಡಿ ಕೇಂದ್ರಗಳಿಗೆ ಪ್ರತಿ ಕೇಂದ್ರಕ್ಕೆ 3 ಸಾವಿರ ರೂ. ಘಟಕ ವೆಚ್ಚದಂತೆ 2024-25ನೇ ಸಾಲಿನಲ್ಲಿ ಶಾಲಾ ಪೂರ್ವ ಶಿಕ್ಷಣ ಕಿಟ್‍ಗಳನ್ನು 20.98 ಕೋಟಿ ರೂ.ಗಳ ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಸನ್ನಡತೆ ಆಧಾರದಲ್ಲಿ 55 ಜೀವಾವಧಿ ಕೈದಿಗಳನ್ನು ಅವಧಿ ಪೂರ್ವ ಬಿಡುಗಡೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಪೈಕಿ ಬೆಂಗಳೂರು ಕಾರಾಗೃಹದ 19, ಮೈಸೂರು-4, ಬೆಳಗಾವಿ-9, ಕಲಬುರಗಿ-7, ವಿಜಯಪುರ-4, ಬಳ್ಳಾರಿ-9 ಮತ್ತು ಧಾರವಾಡ ಕಾರಾಗೃಹದಲ್ಲಿರುವ 3 ಕೈದಿಗಳನ್ನು ಬಿಡುಗಡೆಗೊಳಿಸಲು ಸಚಿವ ಸಂಪುಟ ನಿರ್ಣಯಿಸಿದೆ.

ಪ್ರತಿ ಅಂಗನವಾಡಿಗೆ 1 ಲಕ್ಷ ರೂ.ಗಳಂತೆ ರಾಜ್ಯದ ಒಟ್ಟು 17,551 ಅಂಗನವಾಡಿ ಕೇಂದ್ರಗಳಿಗೆ ಎಲ್‍ಇಡಿ ಮತ್ತು ಇತರೆ ಧ್ವನಿ ಹಾಗೂ ದೃಶ್ಯ ಸಾಧನ, ಆರ್.ಓ ಘಟಕ, ಮಳೆ ನೀರಿನ ಕೊಯ್ಲು, ಪೋಷಣ್ ವಾಟಿಕಾ ಮತ್ತು ಇತರೆ ಸೌಲಭ್ಯಗಳನ್ನು ಕೇಂದ್ರ ಸರಕಾರದ ಮಾರ್ಗಸೂಚಿಯನ್ವಯ ಒದಗಿಸಲು ಸಕ್ಷಮ್ ಯೋಜನೆಯಡಿ ಕೇಂದ್ರದ ಪಾಲು 10.48 ಕೋಟಿ ರೂ.ಮತ್ತು ರಾಜ್ಯದ ಪಾಲು 69.90 ಕೋಟಿ ಸೇರಿದಂತೆ ಒಟ್ಟು 174.75 ಕೋಟಿ ರೂ.ಗಳ ಅನುದಾನವನ್ನು ವಿನಿಯೋಗಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ.

ಕರ್ನಾಟಕ ಜಾಗತಿಕ ಸಾಮಥ್ರ್ಯ ಕೇಂದ್ರಗಳ ನೀತಿ 2024-25ಕ್ಕೆ ಅನುಮೋದನೆ ನೀಡಲಾಗಿದೆ. ಬೆಂಗಳೂರಿನಲ್ಲಿ 28 ಕೋಟಿ ರೂ.ವೆಚ್ಚದಲ್ಲಿ ಕೃತಕ ಬುದ್ಧಿಮತ್ತೆ ಉತ್ಕøಷ್ಟತ ಕೇಂದ್ರ ಸ್ಥಾಪನೆ. ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತುಪ್ರದರ್ಶನ ಪ್ರಾಧಿಕಾರ (ತಿದ್ದುಪಡಿ) ಅಧ್ಯಾದೇಶ, 2024ಕ್ಕೆ ಅನುಮೋದನೆ ನೀಡಲಾಗಿದೆ.

2006 ಎಪ್ರಿಲ್ 1ರ ಪೂರ್ವದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಲಾಖೆ, ಕಾರ್ಮಿಕ ರಾಜ್ಯ ವಿಮಾ ಇಲಾಖೆಗೆ ಸೇವೆಗೆ ಸೇರಿದ ಮತ್ತು ನಂತರದಲ್ಲಿ ನಿಯಮಾನುಸಾರ ಸರಕಾರದ ಆದೇಶದಂತೆ ಸ್ವಾಯತ್ತ ವೈದ್ಯಕೀಯ ಕಾಲೇಜುಗಳಿಗೆ ಬೋಧಕ ಹುದ್ದೆಗಳಿಗೆ ವಿಲೀನಗೊಂಡ ಅರ್ಹ 161 ವೈದ್ಯರ ಸೇವೆಯನ್ನು ಪಿಂಚಣಿ ಉದ್ದೇಶಕ್ಕಾಗಿ ಸಂರಕ್ಷಿಸಿ ಆದೇಶ ಹೊರಡಿಸಲು ಸಚಿವ ಸಂಪುಟ ನಿರ್ಣಯಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News