ಎಸ್.ನಿಜಲಿಂಗಪ್ಪರ ಮನೆ ಖರೀದಿಸಿ ನೋಂದಣಿ : ಸಚಿವ ಶಿವರಾಜ್ ತಂಗಡಗಿ

Update: 2024-11-14 14:39 GMT

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಚಿತ್ರದುರ್ಗದಲ್ಲಿ ವಾಸವಿದ್ದ ಮನೆಯನ್ನು ಸರಕಾರ ಶೀಘ್ರ ಖರೀದಿಸಿ, ಒಂದು ತಿಂಗಳಲ್ಲಿ ನೋಂದಣಿ ಮಾಡಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿನ ಸಚಿವ ಕಚೇರಿಯಲ್ಲಿ ನಿಜಲಿಂಗಪ್ಪ ಅವರ ಮನೆ ಖರೀದಿಸಿ ಸಂರಕ್ಷಿಸಲು ಹಾಗೂ ಅಭಿವೃದ್ಧಿಗೊಳಿಸುವ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಮತ್ತು ಚಿತ್ರದುರ್ಗ ಜಿಲ್ಲಾಧಿಕಾರಿ ಜತೆ ಸಭೆ ನಡೆಸಿದ ಅವರು ಈ ಮೇಲ್ಕಂಡ ಸೂಚನೆ ನೀಡಿದರು. ನಿಜಲಿಂಗಪ್ಪ ಅವರ ಮನೆ ಖರೀದಿ ಹಾಗೂ ಸಂರಕ್ಷಣೆ ಸಂಬಂಧ ಈಗಾಗಲೇ ಸರಕಾರ 5 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಿದ್ದರೂ ವಿಳಂಬವಾಗುತ್ತಿರುವ ಬಗ್ಗೆ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಈ ಹಿಂದೆ ಮನೆ ಖರೀದಿ ಸಂಬಂಧ ತಾಂತ್ರಿಕ ಕಾರಣಗಳು ಎದುರಾಗಿತ್ತು. ಇದೀಗ ನಿಜಲಿಂಗಪ್ಪ ಅವರ ಪುತ್ರ ಹಾಗೂ ಅವರ ಸಂಬಂಧಿಗಳ ಜತೆ ಚರ್ಚೆ ನಡೆಸಿದ್ದು, ಮನೆ ಖರೀದಿ ಪ್ರಕ್ರಿಯೆಗೆ ಮುಂದಾಗಿದ್ದೇವೆ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವರಾಜ್ ತಂಗಡಗಿ, ಕಾನೂನುತ್ಮಾಕವಾಗಿ ವ್ಯವಹರಿಸಿ ಕೂಡಲೇ ಮನೆ ಖರೀದಿಸಿ ಎಂದು ತಾಕೀತು ಮಾಡಿದರು.

ಬಳಿಕ ಮಾತನಾಡಿದ ಶಿವರಾಜ್ ತಂಗಡಗಿ, ನಿಜಲಿಂಗಪ್ಪ ಮನೆ ಖರೀದಿ ಹಿನ್ನೆಲೆಯಲ್ಲಿ ಕಾನೂನು ಇಲಾಖೆಯಿಂದ ಅಭಿಪ್ರಾಯ ಪಡೆಯಲಾಗಿದೆ. ನಿಜಲಿಂಗಪ್ಪ ವಾಸವಿದ್ದ ಮನೆ ಖಾತೆಯು ಅವರ 3ನೇ ಪುತ್ರ ಎಸ್.ಎನ್.ಕಿರಣ್ ಶಂಕರ್ ಹೆಸರಿನಲ್ಲಿತ್ತು. ನಿಜಲಿಂಗಪ್ಪ ಬರೆದಿಟ್ಟಿರುವ ‘ವಿಲ್’ ನಂತೆ ಖಾತೆ ಅವರ ಮೊಮ್ಮಗ ವಿನಯ್ ಹೆಸರಿನಲ್ಲಿದ್ದು, ಸಂಪೂರ್ಣ ಆಸ್ತಿಗೆ ವಿನಯ್ ಮಾಲಕತ್ವ ಹೊಂದಿದ್ದಾರೆ ಎಂದು ಹೇಳಿದರು.

ಈ ಸಂಬಂಧ ಅಧಿಕಾರಿಗಳು ಕಿರಣ್ ಅವರೊಂದಿಗೆ ಚರ್ಚೆ ನಡೆಸಿದ್ದು, ತಿಂಗಳಲ್ಲಿ ಮನೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಮನೆ ಖರೀದಿಸಿ ಸಂರಕ್ಷಿಸಲು ಮತ್ತು ಅಭಿವೃದ್ಧಿಪಡಿಸಲು ಐದು ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ಪೈಕಿ ಅಂದಾಜು 4.18 ಕೋಟಿ ರೂ.ಗಳಲ್ಲಿ ಮನೆ ಖರೀದಿಸಲು ತೀರ್ಮಾನಿಸಲಾಗಿದ್ದು, ಮನೆ ಅಭಿವೃದ್ಧಿಗೆ 81.50 ಲಕ್ಷ ರೂ. ವೆಚ್ಚ ಮಾಡಲಾಗುವುದು ಎಂದು ಅವರು ವಿವರಿಸಿದರು.

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎನ್.ಮಂಜುಳಾ, ಚಿತ್ರದುರ್ಗ ಜಿಲ್ಲಾಧಿಕಾರಿ ವೆಂಕಟೇಶ್, ಇಲಾಖೆ ನಿರ್ದೇಶಕಿ ಡಾ.ಧರಣಿ ದೇವಿ ಮಾಲಗತ್ತಿ, ಜಂಟಿ ನಿರ್ದೇಶಕ ಅಶೋಕ್ ಛಲವಾದಿ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

‘ಕರ್ನಾಟಕದ ಏಕೀಕರಣದ ಹೋರಾಟದ ಮುಂಚೂಣಿ ನಾಯಕರಾಗಿದ್ದ ಎಸ್.ನಿಜಲಿಂಗಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ನಾಡಿಗಾಗಿ ಬದುಕನ್ನೇ ಮುಡಿಪಾಗಿಟ್ಟ ಅವರ ಮನೆಯನ್ನು ಖರೀದಿಸಿ ಸ್ಮಾರಕವಾಗಿಸುವ ಕಾರ್ಯ ನನ್ನ ಅವಧಿಯಲ್ಲಿ ಆಗುತ್ತಿರುವುದು ಸಂತಸ ತರಿಸಿದೆ’

-ಶಿವರಾಜ್ ತಂಗಡಗಿ, ಸಚಿವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News