ರಾಜ್ಯಪಾಲರ ಪತ್ರಗಳಿಗೆ ಸಂಪುಟದ ನಿರ್ಣಯದಂತೆ ಮಾಹಿತಿ : ಸಚಿವ ಎಚ್.ಕೆ.ಪಾಟೀಲ್

Update: 2024-09-26 13:44 GMT

ಎಚ್.ಕೆ.ಪಾಟೀಲ್

ಬೆಂಗಳೂರು : ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಿದಾಗಿನಿಂದಲೂ ರಾಜ್ಯಪಾಲ ಹಾಗೂ ರಾಜ್ಯ ಸರಕಾರದ ನಡುವಿನ ಸಂಘರ್ಷ ತಾರಕಕ್ಕೇರಿದೆ. ಇದೀಗ, ಹಲವು ಪ್ರಕರಣಗಳ ಕುರಿತು ಮಾಹಿತಿ ಕೋರಿ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗೆ ಪತ್ರಗಳನ್ನು ಬರೆಯುತ್ತಿರುವುದಕ್ಕೆ ಅಂಕುಶ ಹಾಕಲು ಸರಕಾರ ಮುಂದಾಗಿದೆ.

ರಾಜ್ಯಪಾಲರು ಬರೆಯುವಂತಹ ಯಾವುದೆ ಪತ್ರಗಳಿಗೆ ಮುಖ್ಯ ಕಾರ್ಯದರ್ಶಿ ನೇರವಾಗಿ ಉತ್ತರಿಸುವ ಬದಲು, ಸಚಿವ ಸಂಪುಟದ ಗಮನಕ್ಕೆ ತಂದು, ಅಲ್ಲಿ ಕೈಗೊಳ್ಳುವ ನಿರ್ಣಯದಂತೆ ರಾಜ್ಯಪಾಲರಿಗೆ ಮಾಹಿತಿ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಈ ಸಂಬಂಧ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಚಿವ ಸಂಪುಟ ಸಭೆಯ ನಿರ್ಣಯಗಳ ಕುರಿತು ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ರಾಜ್ಯಪಾಲರು ಅಸಹನೆಯ ವರ್ತನೆಯೊಳಗೆ ಪತ್ರಗಳನ್ನು ಬರೆಯುತ್ತಿದ್ದಾರೆ. ಅಲ್ಲದೇ, ಅವರ ಪತ್ರಗಳಿಗೆ ತಕ್ಷಣ ಅಥವಾ ಇಂದೇ ಮಾಹಿತಿ ಕಳುಹಿಸಿ ಎಂದು ಸೂಚನೆಗಳನ್ನು ನೀಡುತ್ತಿದ್ದಾರೆ ಎಂದರು.

ಆದುದರಿಂದ, ನಿಯಮಾವಳಿಗಳನ್ನೆಲ್ಲ ಪರಿಶೀಲನೆ ನಡೆಸಿ, ರಾಜ್ಯಪಾಲರ ಕಚೇರಿಯಿಂದ ಮುಖ್ಯ ಕಾರ್ಯದರ್ಶಿ ಅಥವಾ ಸರಕಾರದ ಯಾವುದೇ ಅಧಿಕಾರಿಗೆ ಸ್ವೀಕೃತವಾಗುವ ಪತ್ರಗಳಿಗೆ ಉತ್ತರಿಸುವ ಮುನ್ನ ಸಚಿವ ಸಂಪುಟದ ಗಮನಕ್ಕೆ ತರಬೇಕು. ಆನಂತರ, ಮುಖ್ಯ ಕಾರ್ಯದರ್ಶಿ ಸಚಿವ ಸಂಪುಟದ ನಿರ್ಣಯದಂತೆ ರಾಜಭವನಕ್ಕೆ ಮಾಹಿತಿಯನ್ನು ಒದಗಿಸಬೇಕು ಎಂದು ಸಚಿವ ಸಂಪುಟ ಸಭೆ ನಿರ್ಣಯ ಕೈಗೊಂಡಿದೆ ಎಂದು ಅವರು ಹೇಳಿದರು.

ರಾಜ್ಯಪಾಲರ ಕಚೇರಿಯಲ್ಲಿ ಬಾಕಿ ಇರುವ ಲೋಕಾಯುಕ್ತದಿಂದ ಸ್ವೀಕೃತವಾಗಿರುವ ಅಭಿಯೋಜನಾ ಮಂಜೂರಾತಿ ಪ್ರಕರಣಗಳ ಕುರಿತು ಮಾಹಿತಿ ಹೇಗೆ ಸೋರಿಕೆಯಾಯಿತು ಎಂಬ ಬಗ್ಗೆ ತನಿಖೆ ನಡೆಸಬೇಕೆಂದು ರಾಜ್ಯಪಾಲರು ಆ.17ರಂದು ಪತ್ರ ಬರೆದು ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದರು ಎಂದು ಅವರು ಹೇಳಿದರು.

ಪೊಲೀಸ್ ಮಹಾನಿರ್ದೇಶಕರು ಆ.20ರಂದು ಲೋಕಾಯುಕ್ತದ ವಿಶೇಷ ತನಿಖಾ ದಳದ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದು ಈ ಕುರಿತು ವಿವರಗಳನ್ನು ಕೇಳಿದ್ದರು. ಈ ಪತ್ರಕ್ಕೆ ಸೆ.4ರಂದು ಉತ್ತರ ಬರೆದಿರುವ ವಿಶೇಷ ತನಿಖಾ ದಳದ ಪೊಲೀಸ್ ಮಹಾ ನಿರ್ದೇಶಕರು ಈ ಸೋರಿಕೆಯಾದ ಕಾಗದ ಪತ್ರಗಳು 2023ರ ನ.24 ರಿಂದ ಪ್ರಸಕ್ತ ಸಾಲಿನ ಆ.8 ರವರೆಗೆ ರಾಜಭವನ ಸಚಿವಾಲಯದಲ್ಲಿಯೇ ಎಂಟು ತಿಂಗಳ ವರೆಗೆ ಇದ್ದವು ಎಂದು ತಿಳಿಸಿದ್ದಾರೆ ಎಂದು ಎಚ್.ಕೆ.ಪಾಟೀಲ್ ಮಾಹಿತಿ ನೀಡಿದರು.

ರಾಜಭವನ ಕಚೇರಿಗೆ ಸಂಬಂಧಪಟ್ಟಂತೆ ಯಾವ ಹಂತದಲ್ಲಿ ಮಾಹಿತಿ ಸೋರಿಕೆಯಾಗಿದೆ, ದಾಖಲೆಗಳು ಬಹಿರಂಗಗೊಂಡಿವೆ ಎಂಬ ಬಗ್ಗೆ ತನಿಖೆ ನಡೆಸಲು ತಮಗೆ ಅನುಮತಿ ನೀಡಬೇಕೆಂದು ಪೊಲೀಸ್ ಮಹಾನಿರ್ದೇಶಕರು ಕೋರಿದ್ದಾರೆ. ಈ ವಿಷಯ ಮಾಧ್ಯಮದಲ್ಲಿ ಹೇಗೆ ಪ್ರಸಾರವಾಯಿತು ಎಂಬ ಬಗ್ಗೆ ತನಿಖೆ ನಡೆಸಲು ಅನುಮತಿ ಕೋರಿರುವುದಾಗಿ ಅವರು ವಿವರಗಳನ್ನು ನೀಡಿದರು.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News