ರಾಜ್ಯಾದ್ಯಂತ ಸೆ.1 ರಿಂದ ಡಿ.31ರವರೆಗೆ ಜಾನುವಾರು ಗಣತಿ : ಸಚಿವ ಕೆ.ವೆಂಕಟೇಶ್
Update: 2024-08-15 12:36 GMT
ಬೆಂಗಳೂರು : ರಾಜ್ಯಾದ್ಯಂತ ಸೆಪ್ಟೆಂಬರ್ 1ರಿಂದ ಡಿಸೆಂಬರ್ 31ರ ವರೆಗೆ ಜಾನುವಾರು ಗಣತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ.
ಗುರುವಾರ ಇಲ್ಲಿನ ಪಶುಪಾಲನಾ ಭವನದ ಆವರಣದಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಆಯೋಜಿಸಲಾದ ಕಾರ್ಯಾಗಾರವನ್ನು ಉದ್ಘಾಟಿಸಿದ ಅವರು, ಕೇಂದ್ರ ಪುರಸ್ಕೃತ ಯೋಜನೆಯಡಿ ಜಾನುವಾರು ಗಣತಿಯನ್ನು ಪ್ರತಿ 5 ವರ್ಷಕ್ಕೊಮ್ಮೆ ನಡೆಸಲಾಗುವುದು ಎಂದರು.
ಈ ಬಾರಿ 21ನೆ ಜಾನುವಾರು ಗಣತಿಯನ್ನು ಸೆಪ್ಟೆಂಬರ್ ತಿಂಗಳಿನಿಂದ ಡಿಸೆಂಬರ್ ಅಂತ್ಯದ ವರೆಗೆ ಕೈಗೊಳ್ಳಲಾಗುತ್ತಿದ್ದು, ಇದರಲ್ಲಿ ಜಾನುವಾರುಗಳ ತಳಿವಾರು, ಪ್ರಭೇದವಾರು, ಲಿಂಗವಾರು, ವಯೋಮಾನವಾರು ಮಾಹಿತಿ ಮತ್ತು ಕುಕ್ಕುಟಗಳ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ. ಇದೇ ವೇಳೆ 21ನೆ ಜಾನುವಾರು ಗಣತಿಯ 2024ರ ಸೂಚನಾ ಕೈಪಿಡಿಯನ್ನು ಬಿಡುಗಡೆ ಮಾಡಿದರು.