ಉಡುಪಿ ಜಿಲ್ಲೆಯಲ್ಲಿ ಪಶು ಸಂಗೋಪನಾ ಇಲಾಖೆಯಲ್ಲಿ 280 ಹುದ್ದೆ ಖಾಲಿ : ಸಚಿವ ಕೆ.ವೆಂಕಟೇಶ್
ಬೆಂಗಳೂರು : ಉಡುಪಿ ಜಿಲ್ಲೆಯಲ್ಲಿ ಪಶು ಸಂಗೋಪನಾ ಇಲಾಖೆಗೆ 357 ಹುದ್ದೆಗಳು ಮಂಜೂರಾಗಿದ್ದು, 77 ಭರ್ತಿಯಾಗಿವೆ. ಇನ್ನೂ 280 ಹುದ್ದೆಗಳು ಖಾಲಿಯಿವೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ.
ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಕಿರುಣ್‍ಕುಮಾರ್ ಕೊಡ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಪಶು ಆಸ್ಪತ್ರೆ, ಪಶು ಚಿಕಿತ್ಸಾಲಯ, ಪ್ರಾಥಮಿಕ ಪಶು ಚಿಕಿತ್ಸಾಲಯಗಳಲ್ಲಿ ವೈದ್ಯರ ಮತ್ತು ಸಿಬ್ಬಂದಿಗಳ ಕೊರತೆಯಿರುವುದು ಸರಕಾರದ ಗಮನಕ್ಕೆ ಬಂದಿದೆ ಎಂದು ಹೇಳಿದರು.
400 ಪಶುವೈದ್ಯಾಧಿಕಾರಿಗಳ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಕೆಪಿಎಸ್ಸಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ನೇಮಕಾತಿ ಪ್ರಕ್ರಿಯೆ ವಿಳಂಬವಾಗುವ ಹಿನ್ನೆಲೆಯಲ್ಲಿ ಹಾಲಿ 400 ಪಶುವೈದ್ಯಾಧಿಕಾರಿಗಳ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಆದ್ಯತೆ ಮತ್ತು ಅವಶ್ಯಕತೆಗನುಗುಣವಾಗಿ ಕುಂದಾಪುರದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಜಾನುವಾರು ಅಧಿಕಾರಿಯಿಂದ ಜಾನುವಾರು ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಮುಂಭಡ್ತಿ ನೀಡಿ ಕುಂದಾಪುರ ಪಶು ಆಸ್ಪತ್ರೆಗೆ ಸ್ಥಳ ನಿಯುಕ್ತಿಗೊಳಿಸಲಾಗಿದೆ. ಕಾರ್ಕಳ ತಾಲೂಕಿನ ಭಜಗೂಳಿ ಪಶು ಆಸ್ಪತ್ರೆ, ಅಜೇಕಾರ್ ಪಶು ಆಸ್ಪತ್ರೆ, ಹೆಬ್ರಿ ಪಶು ಆಸ್ಪತ್ರೆ, ಕುಂದಾಪುರ ತಾಲೂಕಿನ ಬೈಂದೂರು ಪಶು ಆಸ್ಪತ್ರೆ, ಶಂಕರನಾರಾಯಣ ಪಶು ಆಸ್ಪತ್ರೆಗೆ ಹಿರಿಯ ಪಶುವೈದ್ಯಕೀಯ ಪರೀಕ್ಷಕರನ್ನು ಜಾನುವಾರು ಅಧಿಕಾರಿ ಹುದ್ದೆಗೆ ಮುಂಭಡ್ತಿ ನೀಡಿ ಭರ್ತಿ ಮಾಡಲಾಗಿದೆ ಎಂದು ವೆಂಕಟೇಶ್ ಮಾಹಿತಿ ನೀಡಿದರು.
ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಿರಿಯ ಪಶುವೈದ್ಯಕೀಯ ಪರೀಕ್ಷಕರ ವೃಂದದಲ್ಲಿ ಮಂಜೂರಾದ ಹುದ್ದೆ-11, ಭರ್ತಿಯಾದ ಹುದ್ದೆ-3 ಹಾಗೂ 8 ಖಾಲಿ ಹುದ್ದೆಗಳಿವೆ. ಖಾಲಿ ಇರುವ ಹುದ್ದೆಗಳಿಗೆ ಎದುರಾಗಿ ಪ್ರಭಾರ ವ್ಯವಸ್ಥೆ ಮೂಲಕ ಸೇವೆಯನ್ನು ಒದಗಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಖಾಲಿ ಇರುವ ಒಟ್ಟು 32 ‘ಡಿ’ದರ್ಜೆ ಹುದ್ದೆಗಳ ಎದುರಾಗಿ 13 ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಸೇವೆಯನ್ನು ಪಡೆಯಲಾಗಿದೆ ಎಂದು ವೆಂಕಟೇಶ್ ತಿಳಿಸಿದರು.