ಶರಾವತಿ ಮುಳುಗಡೆ ಸಂತ್ರಸ್ತರು ಹಾಗೂ ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆ; ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಚಿವ ಮಧು ಬಂಗಾರಪ್ಪ ಸಭೆ

Update: 2023-07-18 18:37 GMT

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಶರಾವತಿ ಮುಳುಗಡೆ ಸಂತ್ರಸ್ತರು ಹಾಗೂ ಅರಣ್ಯ ಹಕ್ಕು ಭೂ ಮಂಜೂರಾತಿ, 94 ಸಿ, 94 ಸಿಸಿ ಸೇರಿದಂತೆ ಮಲೆನಾಡು ಭಾಗದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ವಿಧಾನಸೌಧದಲ್ಲಿ ಮಂಗಳವಾರ ಕಂದಾಯ ಹಾಗೂ ಅರಣ್ಯ ಇಲಾಖೆ‌ಯ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಲಾಯಿತು.

ಶರಾವತಿ ಮುಳುಗಡೆ,ಬಗರ್ ಹುಕುಂ ಸಾಗುವಳಿದಾರರ ಭೂಮಿ ಸಮಸ್ಯೆ ಕುರಿತು ಅಧಿವೇಶನದ ಅವಧಿಯಲ್ಲಿಯೇ ವಿಶೇಷ ಸಭೆ ನಡೆಸುವಂತೆ ಕಂದಾಯ ಹಾಗೂ ಅರಣ್ಯ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಿಗೆ ಸಚಿವ ಮಧು ಬಂಗಾರಪ್ಪ ಪತ್ರ ಬರೆದಿದ್ದರು.

ಈ ಹಿನ್ನಲೆಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ರಾಜ್ಯದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಲಾಯಿತು.

ಸಭೆಯಲ್ಲಿ ಆರು ದಶಕಗಳಿಂದ ಸಮಸ್ಯೆಯಾಗಿಯೇ ಉಳಿದ ಶರಾವತಿ ಮುಳುಗಡೆ ಸಂತ್ರಸ್ಥರ ಭೂಮಿ ಹಕ್ಕಿನ ಸಮಸ್ಯೆಗಳ ಕುರಿತು ಕಾನೂನು ತೊಡಕುಗಳ ನಿವಾರಣೆ ಬಗ್ಗೆ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.

ಅರಣ್ಯ ಹಕ್ಕು ಕಾಯ್ದೆ ಹಾಗೂ ಬಗರ್ ಹುಕುಂ ಸಾಗುವಳಿದಾರರ ರಕ್ಷಣೆ ನೀಡುವ ಕುರಿತು ಚರ್ಚೆ ನಡೆಸಿದರು.

ಸಭೆಯ ನಂತರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು, ಶರಾವತಿ ನಿರಾಶ್ರಿತರಿಗೆ ಶಾಶ್ವತ ಪರಿಹಾರ ಕಲ್ಪಿಸುವ ಪ್ರಕ್ರಿಯೇ ಚಾಲನೆ ನೀಡಿದ್ದೇವೆ ಎಂದರು.

ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಪಕ್ಷದ ವತಿಯಿಂದ ಮಲೆನಾಡು ಜನರ ಭೂಮಿ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಿದ್ದೇವು.ಅಂದು ಶಿವಮೊಗ್ಗದಲ್ಲಿ ನಡೆದ ಸಭೆಯಲ್ಲಿ ಶಾಶ್ವತ ಪರಿಹಾರ ಕೊಡುವ ಭರವಸೆಯನ್ನು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಕೊಟ್ಟಿದ್ದರು.ಅದರಂತೆ ಶಾಶ್ವತ ಪರಿಹಾರ ಕಲ್ಪಿಸುವ ಪ್ರಕ್ರಿಯೆ ಆರಂಭಿಸಿದ್ದೇವೆ ಎಂದರು.

ಸಭೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಬುಡಕಟ್ಟು ಸಚಿವ ನಾಗೇಂದ್ರ,ಕಂದಾಯ ಸಚಿವ ಕೃಷ್ಣ ಬೈರೇಗೌಡ, ಮಲೆನಾಡು ಭಾಗದ ಶಾಸಕರು, ಅಡ್ವೊಕೇಟ್ ಜನರಲ್ ಎಲ್ಲರೂ ಭಾಗಿಯಾಗಿದ್ದೆವು.ಈ ಸಮಸ್ಯೆ ಇತ್ಯರ್ಥ ಮಾಡಲು ಪೀಠಿಕೆ ಹಾಕಿ ಶುರು ಮಾಡಿದ್ದೇವೆ. ನಾವು ವಿಧಾನಸೌಧಕ್ಕೆ ಬರಲು ಶರಾವತಿ ಮುಳುಗಡೆ ರೈತರು ಕಾರಣ.ಆ ಜನ ಇವತ್ತು ಕತ್ತಲಲ್ಲಿ ಇದ್ದಾರೆ. ಅವರನ್ನ ಒಕ್ಕಲೆಬ್ಬಿಸದ ರೀತಿಯಲ್ಲಿ ಕಾನೂನು ಹೋರಾಟ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು‌ ಮಾಹಿತಿ ನೀಡಿದರು.

ಅತಿಕ್ರಮಣ, ಒತ್ತುವರಿ ಅಂತ ಅಲ್ಲಿನ ಜನರನ್ನ ಒಕ್ಕಲೆಬ್ಬಿಸುವ ಪ್ರಕ್ರಿಯೆ ಅರಣ್ಯ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆ.ಹಾಗಾಗಿ ಜಂಟಿ ಸರ್ವೇ ಮಾಡಿದರೆ ಅನೇಕ ಪರಿಹಾರಗಳು ಸಿಗಲಿವೆ ಎಂದರು.

ಇದು ರಾಜ್ಯ ಸರ್ಕಾರಕ್ಕಿಂತ ಕೇಂದ್ರ ಸರ್ಕಾರ, ಸುಪ್ರಿಂ ಕೋರ್ಟ್ ಹಂತದಲ್ಲಿ ಬಗೆಹರಿಯುವ ಸಮಸ್ಯೆ. ಶರಾವತಿ ಹಿನ್ನೀರಿನ ಜನರ ಪರ ಕಾನೂನು ತೊಡಕುಗಳ ನಿವಾರಣೆ ಚರ್ಚೆ ಮಾಡಲಾಗಿದೆ ಎಂದರು.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎಂ ಎ ಪೊನ್ನಣ್ಣ ಅಂಡ್ ಟೀಂ ಕಾನೂನು ತೊಡಕುಗಳ ನಿವಾರಣೆಗೆ ಸಹಾಯ ಮಾಡಲಿದೆ ಎಂದರು.

ಸಭೆಯಲ್ಲಿ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಶಾರದಾ ಪೂರ್ಯನಾಯ್ಕ್, ಭೀಮಣ್ಣ ನಾಯ್ಕ್ ಸೇರಿದಂತೆ ಹಲವರಿದ್ದರು.




 


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News