ಪೇಜಾವರ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಬೇಕಿತ್ತು: ದಿನೇಶ್ ಅಮಿನ್ ಮಟ್ಟು
ಶಿವಮೊಗ್ಗ: ಸಂವಿಧಾನವನ್ನು ನಾವು ಗೌರವಿಸಬೇಕು. ನಮ್ಮನ್ನು ಗೌರವಿಸುವ ಸಂವಿಧಾನ ಬೇಕು ಎಂಬ ಪೇಜಾವರ ಸ್ವಾಮೀಜಿಯ ಮಾತು ಸಲ್ಲ. ಪೇಜಾವರ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಬೇಕಿತ್ತು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅಭಿಪ್ರಾಯಿಸಿದ್ದಾರೆ.
ಸಂವಿಧಾನ ದಿನದ ಅಂಗವಾಗಿ ಒಡನಾಟ ಸಂಸ್ಥೆ ವತಿಯಿಂದ ಸಹ್ಯಾದ್ರಿ ವಾಣಿಜ್ಯ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ 'ಪ್ರಜಾಪ್ರಭುತ್ವ, ಮಾಧ್ಯಮ ಮತ್ತು ನಾವು' ವಿಷಯದ ಕುರಿತು ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಪೇಜಾವರ ಸ್ವಾಮೀಜಿ ಬಯಸಿರುವ ಸಂವಿಧಾನ ಮನುಸ್ಮೃತಿ. ಡಾ.ಅಂಬೇಡ್ಕರ್ ರಚಿಸಿದ್ದ ಸಂವಿಧಾನವನ್ನು ಮೊದಲ ಬಾರಿಗೆ ಆರೆಸ್ಸೆಸ್ ವಿರೋಧಿಸಿತ್ತು. ಈಗ ಸಂವಿಧಾನವನ್ನು ಬದಲಾವಣೆ ಮಾಡಲು ಆಗುವುದಿಲ್ಲ ಎಂಬ ಕಾರಣಕ್ಕೆ ಅದನ್ನು ದುರ್ಬಲ ಮಾಡುವ ಪ್ರಯತ್ನ ನಡೆದಿದೆ. ಸಂವಿಧಾನದ ರಕ್ಷಕರಾದ ರಾಜ್ಯಪಾಲರು ಈಗ ಏನು ಮಾಡುತ್ತಿದ್ದಾರೆ. ಪೇಜಾವರ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಬೇಕಿತ್ತು ಎಂದವರು ಹೇಳಿದರು.
ಒಬ್ಬ ವ್ಯಕ್ತಿಗೆ ಇರುವಷ್ಟೇ ಅಭಿವ್ಯಕ್ತಿ ಸ್ವಾತಂತ್ರ್ಯ ಮಾಧ್ಯಮಗಳಿಗೂ ಇವೆ. ಈಗ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೀರಿ ಕಾರ್ಯನಿರ್ವಹಿಸಿದ ಪರಿಣಾಮ ಮಾಧ್ಯಮ ಸಂಸ್ಥೆಗಳಿಗೆ ನೋಟಿಸ್ ಗಳು ಬರುತ್ತಿವೆ. ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಅನೇಕರು ಹೇಳುವುದುಂಟು. ಆದರೆ ಈ ಸಂಗತಿ ಸಂವಿಧಾನದಲ್ಲಿ ಉಲ್ಲೇಖವೇ ಆಗಿಲ್ಲ. ಭ್ರಷ್ಟತೆ ಎಂಬುದು ಸಮಾಜದ ಎಲ್ಲ ಹಂತಗಳಲ್ಲಿ ಬೇರು ಬಿಟ್ಟಿದೆ. ಅದಕ್ಕೆ ಮಾಧ್ಯಮವೂ ಹೊರತಾಗಿಲ್ಲ. ಎಲ್ಲವೂ ವಿಫಲವಾಗಿರುವಾಗ ಜನರು ಈಗ ಮಾಧ್ಯಮಗಳತ್ತ ನೋಡುತ್ತಿದ್ದಾರಷ್ಟೇ ಎಂದರು.
ಸಂವಿಧಾನ ವಿರೋಧಿ ಹೇಳಿಕೆ ನೀಡುವವರ ವಿರುದ್ಧ ಧ್ವನಿ ಎತ್ತಬೇಕಾದ ಪ್ರಗತಿಪರರು ದಣಿದಿದ್ದಾರೆ ಎಂದೇ ನನ್ನ ಭಾವನೆ. ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕಾಗಿ ಸಿಎಂ ಮನೆ ಎದುರು ಕಾದು ಬೇರೆಯವರಿಂದ ಪ್ರಭಾವ ಬೀರಿಸಿ ಅಧಿಕಾರ ಪಡೆದ ಪ್ರಗತಿಪರರು, ಈಗ ನಾವು ನಿಷ್ಪಕ್ಷವಾಗಿರಬೇಕೆಂದು ಭಾವಿಸಿದಂತಿದೆ. ಹೀಗಾಗಿ ಪ್ರತಿರೋಧ ತೋರುತ್ತಿಲ್ಲ ಎಂದರು.
ಪತ್ರಕರ್ತರಾದ ಸತೀಶ್ ಜಿ.ಟಿ ಹಾಗೂ ಬಿ.ಎಸ್.ಅಂಜುಂ ಪ್ರತಿಕ್ರಿಯೆ ನೀಡಿದರು. ಫ್ರಾನ್ಸಿಸ್ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು.
ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ, ಕಾಲೇಜಿನ ಪ್ರಾಚಾರ್ಯ ಟಿ.ಅವಿನಾಶ್, ಒಡನಾಟ ಬಳಗದ ಅಕ್ಷತಾ ಹುಂಚದಕಟ್ಟೆ, ರೈತ ನಾಯಕರಾದ ಕೆ.ಟಿ.ಗಂಗಾಧರ, ಎಚ್.ಆರ್.ಬಸವರಾಜಪ್ಪ, ದಲಿತ ಸಂಘರ್ಷ ಸಮಿತಿಯ ಗುರುಮೂರ್ತಿ, ಅಂಕಣಕಾರ ಬಿ.ಚಂದ್ರೇಗೌಡ ಉಪಸ್ಥಿತರಿದ್ದರು.