ಪದವಿ ವಿದ್ಯಾರ್ಥಿಗಳಿಗೆ ಅಪ್ರೆಂಟೀಸ್‍ಶಿಪ್ ಎಂಬೆಡೆಡ್ ಡಿಗ್ರಿ ಪ್ರೊಗ್ರಾಂ ಅನುಷ್ಠಾನ : ಸಚಿವ ಎಂ.ಸಿ. ಸುಧಾಕರ್

Update: 2024-08-13 15:55 GMT

ಬೆಂಗಳೂರು: ಸರಕಾರಿ ಕಾಲೇಜುಗಳಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿಗಳ ಉದ್ಯೋಗಾರ್ಹತೆ ಹೆಚ್ಚಿಸುವ ಹಾಗೂ ಕೈಗಾರಿಕೆಗಳಿಗೆ ತರಬೇತುಗೊಂಡ ಉದ್ಯೋಗಿಗಳನ್ನು ನೀಡುವ ಉದ್ದೇಶದಿಂದ ಅಪ್ರೆಂಟೀಸ್‍ಶಿಪ್ ಎಂಬೆಡೆಡ್ ಡಿಗ್ರಿ ಪ್ರೊಗ್ರಾಂ ಅನ್ನು ಅನಿಷ್ಠಾನ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.

ಮಂಗಳವಾರ ಉನ್ನತ ಶಿಕ್ಷಣ ಪರಿಷತ್ ಆವರಣದಲ್ಲಿ ರಾಜ್ಯದ 45 ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರೊಂದಿಗೆ ಸೆಕ್ಟರ್ ಸ್ಕಿಲ್ ಕೌನ್ಸಿಲ್ ಮತ್ತು ಸಿಆರ್‌ ಐಎಸ್‍ಪಿ ಸಂಸ್ಥೆಯೊಂದಿಗೆ ಅಪ್ರೆಂಟೀಸ್‍ಶಿಪ್ ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಲಾಜಿಸ್ಟಿಕ್, ರಿಟೇಲ್ ಸ್ಕಿಲ್ ಕೌನ್ಸಿಲ್‍ಗಳಡಿ ಒಟ್ಟು ಮೂರು ವರ್ಷಗಳ ಅವಧಿಯ ಬ್ಯಾಂಕಿಂಗ್ ಅಂಡ್ ಪೈನಾನ್ಸ್, ಇ-ಕಾಮರ್ಸ್, ಲಾಜಿಸ್ಟಿಕ್, ರಿಟೇಲ್ ಪದವಿ ಕೋರ್ಸ್‍ಗಳನ್ನು ಆಯ್ದ 45 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಮೂಲ ಸೌಕರ್ಯಗಳು ಹಾಗೂ ಅಧ್ಯಾಪಕರನ್ನು ಬಳಸಿಕೊಂಡು ಅನುಷ್ಠಾನಗೊಳಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಈ ಕಾರ್ಯಕ್ರಮದಡಿ ಮೊದಲ ನಾಲ್ಕು ಸೆಮಿಸ್ಟರ್ ಗಳಲ್ಲಿ ವಿದ್ಯಾರ್ಥಿಗಳು ಆಯಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಾರೆ. 5 ಮತ್ತು 6ನೆ ಸೆಮಿಸ್ಟರ್‌ ಗಳಲ್ಲಿ ಸಂಬಂಧಪಟ್ಟ ಸೆಕ್ಟರ್ ಸ್ಕಿಲ್ ಕೌನ್ಸಿಲ್ ವತಿಯಿಂದ ನಿಗದಿಗೊಂಡ ಕೈಗಾರಿಕೆ, ಸಂಸ್ಥೆಗಳಲ್ಲಿ ಈ ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್ ಶಿಪ್ ತರಬೇತಿ ನೀಡಲಾಗುತ್ತದೆ ಎಂದು ಅವರು ಹೇಳಿದರು.

ಅಂತಿಮ ಎರಡು ಸೆಮಿಸ್ಟರ್‌ ಗಳಲ್ಲಿ ಅಪ್ರೆಂಟಿಸ್ ಶಿಪ್‍ಗಾಗಿ ಕೈಗಾರಿಕೆಗಳಿಗೆ ತೆರಳುವ ವಿದ್ಯಾರ್ಥಿಗಳು ಪ್ರತಿ ತಿಂಗಳು ಸುಮಾರು 10 ಸಾವಿರ ರೂ.ಗಳನ್ನು ಸ್ಟೈಪೆಂಡ್ ಆಗಿ ಪಡೆಯಲಿದ್ದಾರೆ. ಈ ಶೈಕ್ಷಣಿಕ ವರ್ಷದಲ್ಲಿ ಈಗಾಗಲೇ ಕಾರ್ಯಕ್ರಮಕ್ಕೆ ಸುಮಾರು 1300 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಂಡಿದ್ದಾರೆ ಎಂದು ಸಚಿವರು ಹೇಳಿದರು.

ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯುವವರಲ್ಲಿ ಶೇ.96 ಪ.ಜಾ/ಪ.ಪಂ, ಇತರ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಗಳಿಗೆ ಸೇರಿದ ವಿದ್ಯಾರ್ಥಿಗಳಿದ್ದಾರೆ. ಶೇ.51 ವಿದ್ಯಾರ್ಥಿನಿಯರು ಮತ್ತು ಶೇ.81 ಗ್ರಾಮಿಣ ಭಾಗದ ವಿದ್ಯಾರ್ಥಿಗಳಿದ್ದು, ಅಪ್ರೆಂಟೀಸ್‍ಶಿಪ್ ಎಂಬೆಡೆಡ್ ಡಿಗ್ರಿ ಪ್ರೊಗ್ರಾಂ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ ಎಂದು ಅವರು ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News