ಸರಕಾರಿ ವಿಶ್ವವಿದ್ಯಾಲಯಗಳ ಸಾಧನೆಯ ಬಗ್ಗೆ ಅವಲೋಕನ ಅಗತ್ಯ : ಸಚಿವ ಎಂ.ಸಿ. ಸುಧಾಕರ್

Update: 2024-08-21 15:18 GMT

ಬೆಂಗಳೂರು : ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳು ಸರಕಾರಿ ವಿಶ್ವವಿದ್ಯಾಲಯಗಳಿಗಿಂತ ಹೆಚ್ಚು ಸಾಧನೆ ಮಾಡಿದ್ದು, ಈ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ, ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.

ಬುಧವಾರ ಇಲ್ಲಿನ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ನೃಪತುಂಗ ವಿಶ್ವವಿದ್ಯಾಲಯದ ಪ್ರಥಮ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಖಾಸಗಿ ವಿಶ್ವವಿದ್ಯಾಲಯಗಳು ಶೇ.76ರಷ್ಟು ಸಾಧನೆ ಮಾಡಿದರೆ, ಸರಕಾರಿ ವಿಶ್ವವಿದ್ಯಾಲಯಗಳು ಶೇ.39ರಷ್ಟು ಸಾಧನೆ ಮಾಡಿವೆ. ಸರಕಾರಿ ವಿಶ್ವವಿದ್ಯಾಲಯಗಳು ಇನ್ನು ಹೆಚ್ಚಿನ ಗುಣಮಟ್ಟದ ಶಿಕ್ಷಣ ನೀಡಿ ಮುನ್ನಡೆಯಬೇಕಿದೆ ಎಂದರು.

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಕೈಗೆಟುಕುವ ದರದಲ್ಲಿ ನೀಡಿದರೆ ಸರ್ವರಿಗೂ ಉತ್ತಮ ವಿದ್ಯಾಭ್ಯಾಸ ದೊರೆಯುತ್ತದೆ. ನಮ್ಮಲ್ಲಿ 150 ವರ್ಷಗಳಿಗೂ ಹಳೆಯದಾದ ವಿಶ್ವವಿದ್ಯಾಲಯಗಳು ಒಳ್ಳೆಯ ಶಿಕ್ಷಣ ನೀಡುತ್ತಿದೆ. ಇಂದಿನ ಬದಲಾದ ಶೈಕ್ಷಣಿಕ ಬೇಡಿಕೆಗಳಿಗೆ ಅನುಗುಣವಾಗಿ ಹೆಚ್ಚು ಜನ ಖಾಸಗಿ/ಸ್ವಾಯತ್ತ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.

ನಾವು ಇಂದು ಪ್ರಾಕೃತಿಕ ವಿಕೋಪಗಳು, ಹವಮಾನ ವೈಪರೀತ್ಯಗಳನ್ನು ಎದರುಸುತ್ತಿದ್ದೇವೆ. ನಮ್ಮಲ್ಲಿರುವ ಸಾಮರ್ಥ್ಯ ವನ್ನು ಗುರುತಿಸಿಕೊಂಡು ಯಾವ ರಂಗದಲ್ಲಾದರೂ ಸರಿ ಹೆಸರು ಮಾಡಬೇಕು. ಇದರಿಂದ ನಮಗೆ ಮತ್ತು ದೇಶಕ್ಕೆ ಒಳ್ಳೆಯ ಹೆಸರು ಬರುತ್ತದೆ. ದೇಶದ ನಾಗರೀಕರಾಗಿ ನಾವು ಮಾಡಬೇಕಾದ ಕೆಲಸಗಳು ಮತ್ತು ಹೊರಬೇಕಾದ ಜವಬ್ದಾರಿಗಳು ಬಹಳಷ್ಟಿವೆ ಎಂದು ಅವರು ಹೇಳಿದರು.

ಘಟಿಕೋತ್ಸವದಲ್ಲಿ ಬಾಹ್ಯಕಾಶ ವಿಜ್ಞಾನಿ ನಂದಿನಿ ಹರಿನಾಥ್, ಸ್ವಾಮಿ ವಿವೇಕಾನಂದ ಯುತ್ ಮೂಮೆಂಟ್‍ನ ಡಾ. ರಾಮಸ್ವಾಮಿ ಬಾಲಸುಬ್ರಮಣ್ಯಂ ಮತ್ತು ಇನ್ಫೋಸಿಸ್ ಸಹ ಸಂಸ್ಥಾಪಕ ಡಾ. ಕೆ. ದಿನೇಶ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಯಿತು.

ಇದೇ ವೇಳೆ ನೃಪತುಂಗ ವಿಶ್ವವಿದ್ಯಾಲಯದ ಒಟ್ಟು 338 ಸ್ನಾತಕೋತ್ತರ ಮತ್ತು 454 ಸ್ನಾತಕ ಪದವಿಧರರಿಗೆ ಈ ಪ್ರಥಮ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಯಿತು. ನೃಪತುಂಗ ವಿಶ್ವವಿದ್ಯಾಲಯದ ಕುಲಪತಿಗಳಾದ ಶ್ರೀನಿವಾಸ ಎಸ್. ಬಳ್ಳಿ, ಕುಲಸಚಿವರುಗಳಾದ ಪ್ರೊ. ಎ.ಸಿ.ಮಂಜುಳಾ, ಶಿವನಂದ ಬಾ ಕರಾಳೆ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ನೃಪತುಂಗ ವಿವಿ ಘಟಿಕೋತ್ಸವಕ್ಕೆ ರಾಜ್ಯಪಾಲ ಗೈರು

ಕೇಂದ್ರ ಗುಪ್ತಚರ ಇಲಾಖೆಯ ಸೂಚನೆಯ ಮೇರೆಗೆ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಆ.29ರವರೆಗಿನ ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಅದರಂತೆಯೆ ಇಂದು(ಆ.21) ನಡೆದ ನೃಪತುಂಗ ವಿಶ್ವವಿದ್ಯಾನಿಲಯದ ಮೊದಲ ಘಟಿಕೋತ್ಸವ ಕಾರ್ಯಕ್ರಮಕ್ಕೂ ಗೈರುಹಾಜರಾಗಿದ್ದರು.

ಮುನ್ನೆಚ್ಚರಿಕೆ ಕ್ರಮವಾಗಿ, ಸಾರ್ವಜನಿಕ ಕಾರ್ಯಕ್ರಮದಿಂದ ದೂರವಿರುವಂತೆ ಕೇಂದ್ರ ಗುಪ್ತಚರ ಇಲಾಖೆಯಿಂದ ಬಂದ ಸೂಚನೆಯನುಸಾರ ಕೊನೆ ಕ್ಷಣದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರ್ಧಾರವನ್ನು ರಾಜ್ಯಪಾಲ ಬದಲಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಇದರ ಬೆನ್ನಲ್ಲೇ ಗುಪ್ತಚರ ಇಲಾಖೆ ರಾಜ್ಯಪಾಲರಿಗೆ ಝಡ್ ಕೆಟಗರಿ ಭದ್ರತೆ ನೀಡಿದೆ. ಅದರಂತೆ ರಾಜ್ಯಪಾಲರು ಬುಲೆಟ್ ಪ್ರೂಫ್ ಕಾರು ತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆ.29ರವರೆಗೆ ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳನ್ನೂ ಅವರು ಮುಂದೂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News