ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರಕಾರ ಪುನರ್ ವಿಮರ್ಶಿಸಬೇಕು : ಸಚಿವ ಎಂ.ಸಿ.ಸುಧಾಕರ್

Update: 2024-09-10 15:41 GMT

ಬೆಂಗಳೂರು : ರಾಷ್ಟ್ರೀಯ ಶಿಕ್ಷಣ ನೀತಿ ವ್ಯವಸ್ಥೆಯಲ್ಲಿ ರಾಷ್ಟ್ರಾಧ್ಯಂತ ಒಂದೇ ಶಿಕ್ಷಣ ವ್ಯವಸ್ಥೆ ಜಾರಿ ಮಾಡಲು ಸಾಧ್ಯವಿಲ್ಲ. ಪರ್ಯಾಯ ವ್ಯವಸ್ಥೆಗಳ ರೂಪಿಸದೆ, ಎನ್‍ಇಪಿ ಅನುಷ್ಠಾನದ ಕ್ರಮ ಸರಿಯಲ್ಲ. ಕೇಂದ್ರ ಸರಕಾರ ಈ ನೀತಿಯ ಕುರಿತು ಪುನರ್ ವಿಮರ್ಶಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಒತ್ತಾಯಿಸಿದ್ದಾರೆ.

ಮಂಗಳವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಬೆಂಗಳೂರು ವಿಶ್ವ ವಿದ್ಯಾನಿಲಯದ 59ನೆ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎನ್‍ಇಪಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಹೇಳಿ ಮಾಡಿಸಿದಂತಿದೆ. ಸರಕಾರಿ ಶಿಕ್ಷಣ ಸಂಸ್ಥೆಗಳಿಗೆ ಸರಿಹೊಂದುವಂತಿಲ್ಲ. ಈ ನೀತಿಯಲ್ಲಿ ಶಿಕ್ಷಣಕ್ಕಿಂತ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತಿದೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿಯಡಿ ಬಹುಶಿಸ್ತೀಯ, ಬಹು ಆಯ್ಕೆಯ, ಮುಕ್ತ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಈ ಶಿಕ್ಷಣ ನೀತಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಿಯಾಗಿರಬಹುದು. ಆದರೆ ಕೃಷಿ, ಕಾನೂನು, ಇಂಜಿನಿಯರಿಂಗ್, ವೈದ್ಯಕೀಯ ಎಂದೂ ಹಂಚಿಹೋಗಿರುವ ಸರಕಾರಿ ವಿವಿಗಳಲ್ಲಿ ಅಸಾಧ್ಯವಾಗಿದೆ. ಕಲಾ ವಿಭಾಗದಲ್ಲಿ ಓದುವ ವಿದ್ಯಾರ್ಥಿ ವಿಜ್ಞಾನ ಓದಲು ಬಯಸಿದರೆ ಎನ್‍ಇಪಿ ಅಡಿಯಲ್ಲಿ ಅವಕಾಶ ನೀಡಲಾಗಿದೆ. ಆದರೆ ಸೂಕ್ತ ಶಿಕ್ಷಣ ನೀಡುವ ಅಧ್ಯಾಪಕರ ಕೊರತೆಯ ಬಗ್ಗೆ ಚಿಂತನೆ ನಡೆಸಿಲ್ಲ. ರಾಜ್ಯದ ವಿವಿಗಳಲ್ಲಿ 14ಸಾವಿರ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದರೂ, ಕೊರತೆ ನೀಗಿಲ್ಲ ಎಂದು ಅವರು ಮಾಹಿತಿ ನೀಡಿದರು.

ರಾಜ್ಯ ಸರಕಾರ ಎನ್‍ಇಪಿಯನ್ನು ವಿರೋಧಿಸಿ ಪರ್ಯಾಯ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ. ಕ್ರೆಡಿಟ್ ಸ್ಕೋರ್ ಮತ್ತು ಮುಕ್ತ ಆಯ್ಕೆಗಳನ್ನು ಒಳಗೊಂಡಂತೆ ಸೂಕ್ತ ಮಾರ್ಪಾಡುಗಳನ್ನು ಮಾಡಿದೆ. ರಾಜ್ಯ ಶಿಕ್ಷಣ ನೀತಿಗಾಗಿ ಆಯೋಗ ರಚಿಸಿ ಮಧ್ಯಂತರ ವರದಿ ಆಧಾರ ರಾಜ್ಯ ಶಿಕ್ಷಣ ನೀತಿ ಅನುಷ್ಠಾನಗೊಳಿಸಿದೆ. ಅತಿಶೀಘ್ರದಲ್ಲಿ ಅಂತಿಮ ವರದಿ ಸ್ವೀಕರಿಸಲಾಗುವುದು. ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ಉಳಿಸಿ ರಕ್ಷಿಸಬೇಕಾಗಿದೆ. ಭವಿಷ್ಯದ ಶಿಕ್ಷಣ ಕ್ಷೇತ್ರದ ದೃಷ್ಟಿಯಿಂದ ಸರಕಾರಿ ಶಿಕ್ಷಣ ಸಂಸ್ಥೆಗಳಿಗೆ ಆದ್ಯತೆ ನೀಡಬೇಕು. ಶಿಕ್ಷಣ ಕ್ಷೇತ್ರ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗಕೂಡದು ಎಂದು ಸುಧಾಕರ್ ತಿಳಿಸಿದರು.

ಬೆಂವಿವಿ59ನೇ ಘಟಿಕೋತ್ಸವದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಸಮಾಜ ಸೇವಕ ಕೆ.ಎಸ್.ರಾಜಣ್ಣಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಧನಸಹಾಯ ಆಯೋಗ(ಯುಜಿಸಿ) ಉಪಾಧ್ಯಕ್ಷ ಪ್ರೊ.ದೀಪಕ್ ಕುಮಾರ್, ಕುಲಪತಿ ಡಾ.ಜಯಕರ ಎಸ್.ಎಂ., ಕುಲಸಚಿವ ಶೇಕ್ ಲತೀಫ್, ಮೌಲ್ಯಮಾಪನ ಕುಲಸಚಿವ ಪ್ರೊ.ಶ್ರೀನಿವಾಸ್, ವಾಣಿಜ್ಯವಿಭಾಗ ಮುಖ್ಯಸ್ಥೆ ಡಾ.ಸರ್ವಮಂಗಳಾ, ಪ್ರಾಧ್ಯಪಕ ಪ್ರೊ.ರಾಮಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News