ಬೆಳಗಾವಿ | ನಾಪತ್ತೆಯಾಗಿದ್ದ ಜೈನಮುನಿ ಹತ್ಯೆ ಪ್ರಕರಣ: ಇಬ್ಬರು ವಶಕ್ಕೆ, ಮೃತದೇಹಕ್ಕಾಗಿ ಶೋಧ

Update: 2023-07-08 11:06 GMT

ಹತ್ಯೆಗೀಡಾದ ಜೈನ ಮುನಿ

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದಿಂದ ನಾಪತ್ತೆಯಾಗಿದ್ದ ಜೈನಮುನಿ ಹತ್ಯೆಯಾಗಿರುವುದಾಗಿ ವರದಿಯಾಗಿದೆ.

ಹಿರೇಕೋಡಿ ಗ್ರಾಮದ ನಂದಿಪರ್ವತ ಜೈನ ಆಶ್ರಮದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಹತ್ಯೆಯಾದವರು ಎಂದು ಗುರುತಿಸಲಾಗಿದೆ.

ಜೈನಮುನಿ ಜುಲೈ 6ರಂದು ಬೆಳಗ್ಗೆ ತಮ್ಮ ಆಶ್ರಮದಿಂದ ನಾಪತ್ತೆಯಾಗಿದ್ದರು. ಮೊನ್ನೆ ಬೆಳಗ್ಗೆ ಭಕ್ತರು ಆಶ್ರಮಕ್ಕೆ ಆಗಮಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಜೈನ ಮುನಿ ಕಳೆದ 15 ವರ್ಷಗಳಿಂದ ನಂದಿಪರ್ವತ ಆಶ್ರಮದಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ.

ಆಶ್ರಮದ ಸುತ್ತಮುತ್ತ ಶೋಧ ನಡೆಸಿದ್ದ ಭಕ್ತರಿಗೆ ಜೈನಮುನಿ ಸುಳಿವು ಸಿಗದಿದ್ದಾಗ ನಿನ್ನೆ ಚಿಕ್ಕೋಡಿ ಪೊಲೀಸ್ ಠಾಣೆಗೆ ಜೈನಮುನಿಗಳು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು‌ ತನಿಖೆ ಕೈಗೊಂಡಿದ್ದ ಚಿಕ್ಕೋಡಿ ಪೊಲೀಸರು, ಅನುಮಾನದ ಮೇಲೆ ಇಬ್ಬರನ್ನು ವಶಕ್ಕೆ ಪಡೆದಿದ್ದರು. ತನಿಖೆಯ ವೇಳೆ ಜೈನಮುನಿ ಹತ್ಯೆಯ ಬಗ್ಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಿ ಕಟಕಬಾವಿ ಗ್ರಾಮದ ಗದ್ದೆಯಲ್ಲಿ ಎಸೆದಿದ್ದಾಗಿ ಆರೋಪಿಗಳು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ್ ತಿಳಿಸಿದ್ದಾರೆ. 

ಮೃತದೇಹಕ್ಕಾಗಿ ಶೋಧ 

ಆರೋಪಿಗಳ ಮಾಹಿತಿ ಆಧರಿಸಿ ಕಟಕಬಾವಿ ಗ್ರಾಮದ ಗದ್ದೆಯಲ್ಲಿ ಪೊಲೀಸರು ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ. ಶೋಧಕ್ಕಾಗಿ ಜೆಸಿಬಿಗಳನ್ನು ಬಳಸಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News