ಬಿಜೆಪಿ ಕುಗ್ಗಿರುವ ಕಡೆಗಳಲ್ಲಿ ಈಡಿ, ಐಟಿ ದುರ್ಬಳಕೆ, ರಾಜ್ಯಪಾಲರ ದುರುಪಯೋಗ: ಸಚಿವ ಪ್ರಿಯಾಂಕ್ ಖರ್ಗೆ

Update: 2024-11-18 12:54 GMT

ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಬಿಜೆಪಿ ಸಂಘಟನಾತ್ಮಕವಾಗಿ ಕುಗ್ಗಿರುವ ರಾಜ್ಯಗಳಲ್ಲಿ ಈಡಿ, ಐಟಿ ದುರ್ಬಳಕೆಯಾಗುತ್ತಿದೆ. ಉಳಿದ ಕಡೆ ರಾಜ್ಯಪಾಲರ ದುರುಪಯೋಗ ಮಾಡುತ್ತಾರೆ. ಆಪರೇಷನ್ ಕಮಲ ಮಾಡುತ್ತಿರುವುದಕ್ಕೆ ಸಾಕ್ಷಿ ಇದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಮೊದಲು ಆಪರೇಷನ್ ಕಮಲ ಆರಂಭಿಸಿದ ಬಿಜೆಪಿಯವರು ಅನಂತರ ಇದನ್ನು ದೇಶದ ಬೇರೆ ರಾಜ್ಯಗಳಿಗೆ ತೆಗೆದುಕೊಂಡು ಹೋದರು. ಇದೇ ಬಿಜೆಪಿಯವರ ಮಾಡೆಲ್. ಮಹಾರಾಷ್ಟ್ರದಲ್ಲಿ ಉದ್ಯಮಿ ಅದಾನಿ ಜೊತೆ ಸೇರಿ ಸರಕಾರ ಬೀಳಿಸಿದರು. ಸರಕಾರ ಬೀಳಿಸಿದ ಉದಾಹರಣೆಗಳು ಬಹಳಷ್ಟು ಇದೆ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಪಕ್ಷದ ಶಾಸಕರನ್ನು ಸಂಪರ್ಕ ಮಾಡಿದ್ದಾರೆ. ಅದನ್ನು ನಮ್ಮ ಸ್ನೇಹಿತರು ನಮಗೆ ಹೇಳಿದ್ದಾರೆ. ಆದರೆ, ಅದು ಕಾರ್ಯಗತ ಆಗುವುದಿಲ್ಲ. ಬಿಜೆಪಿ ನಾಯಕರು ಸರಕಾರ ಬೀಳಿಸಲು ಸಾವಿರ ಕೋಟಿ ರೆಡಿ ಇದೆ ಅನ್ನುತ್ತಾರೆ. ಹಾಗಾದರೆ ಈ ಹಣ ಎಲ್ಲಿಂದ ಬಂತು. ಸಾವಿರ ಕೋಟಿ ರೂ. ಸಂಗ್ರಹ ಹೇಳಿಕೆ ಬಗ್ಗೆ ಏನು ಕ್ರಮ ಕೈಗೊಂಡಿದ್ದಾರೆ. ಆರೋಪಿತ ನಾಯಕರ ಮೇಲೆ ಮನಿ ಲ್ಯಾಂಡ್ರಿಂಗ್ ಕೇಸಿಲ್ವಾ?. ಒಂದು ಸಾವಿರ ಕೋಟಿ ರೂ. ಯಾವ ದುಡ್ಡು ಅದು? ಅದಾನಿ ದುಡ್ಡಾ ಅಥವಾ ಶೇ.40ರಷ್ಟು ಕಮಿಷನ್ ದುಡ್ಡಾ? ಎಂದು ಅವರು ಟೀಕಿಸಿದರು.

ಬಿಜೆಪಿ ಶೇ.40ರಷ್ಟು ಕಮಿಷನ್ ಪಡೆದ ಆರೋಪ ನಿರಾಧಾರ ಎಂದು ಲೋಕಾಯುಕ್ತ ಕ್ಲೀನ್‍ಚಿಟ್ ನೀಡಿರುವ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, 40 ಪರ್ಸೆಂಟ್ ನಿರಾಧಾರ ಅನ್ನುವುದಾದರೆ ಕುನ್ಹಾ ಅವರ ಆಯೋಗ ಕ್ರಮಕ್ಕೆ ಯಾಕೆ ಸೂಚಿಸಿದೆ. 300 ರೂ. ಕಿಟ್‍ಗೆ 2 ಸಾವಿರ ರೂ. ಕೊಟ್ಟು ಖರೀದಿಸಿದ್ದಾರೆ. ಅದು 40ರಷ್ಟು ಸರಕಾರ ಅಲ್ಲ, 400ರಷ್ಟು ಕಮಿಷನ್ ಸರಕಾರ ಆಗಿತ್ತು ಎಂದು ಆರೋಪಿಸಿದರು.

ಒಂದು ಪ್ರಕರಣದಲ್ಲಿ ಎಫ್‍ಐಆರ್ ದಾಖಲಿಸಲು ಕುನ್ಹಾ ಅವರ ಆಯೋಗ ಸೂಚಿಸಿದೆ. ಬಿಜೆಪಿಯವರಿಗೆ ಜೈಲಿಗೆ ಹೋಗಲು ಯಾಕಿಷ್ಟು ಅವಸರ. ಉಪಸಮಿತಿ ವರದಿ ಬಂದ ಮೇಲೆ ಕ್ರಮ ಆಗಲಿದೆ. ಈ ಸಂಬಂಧ ತನಿಖೆಗೆ ಎಸ್‍ಐಟಿ ರಚನೆಯನ್ನು ಸಿಎಂ ಸಿದ್ದರಾಮಯ್ಯ, ಗೃಹ ಸಚಿವರು ಮಾಡುತ್ತಾರೆ. ಒಳ್ಳೆಯ ಅಧಿಕಾರಿಯನ್ನು ನೇಮಕ ಮಾಡಿ ಎಸ್‍ಐಟಿ ರಚಿಸುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಬಿಪಿಎಲ್ ಮಾನದಂಡದ ಪ್ರಕಾರ ಕ್ರಮ ಆಗಿದೆ. ಬಿಪಿಎಲ್ ಮಾನದಂಡವು ಕೇಂದ್ರ ಸರಕಾರದ ಮಾನದಂಡವಾಗಿದೆ. ಅರ್ಹರಿಗೆ ನ್ಯಾಯ ಸಿಗಬೇಕಲ್ಲವೇ, ಅರ್ಹರಿಗೆ ಅಕ್ಕಿ ಸಿಗುವ ಕೆಲಸ ಮಾಡಲಾಗಿದೆ. ಬಡವರ ದುಡ್ಡು ಬಡವರಿಗೆ ಹೋಗಲಿದೆ. ಮಾನದಂಡ ಬದಲಾವಣೆ ಕೇಂದ್ರ ಸರಕಾರ ಮಾಡಿದರೆ ಮಾಡಲಿ. ಅದನ್ನು ಅನುಸರಿಸುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಸ್ವಾಮೀಜಿಗಳು ಮಾರ್ಗದರ್ಶಕರಾಗಿರಬೇಕು..!

ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಸಿಎಂ ಮಾಡಿ ಎಂದು ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿಕೆ ವಿಚಾರಕ್ಕೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಸ್ವಾಮೀಜಿಗಳು ನಮಗೆ ಮಾರ್ಗದರ್ಶಕರಾಗಿರಬೇಕು. ಆಯಾ ಸಮುದಾಯದ ಸ್ವಾಮೀಜಿಗಳು ಅವರವರ ನಾಯಕರ ಹೆಸರನ್ನು ಸಿಎಂ ಮಾಡಿ ಎಂದು ಹೇಳುತ್ತಾರೆ. ಆದರೆ, ಮುಖ್ಯಮಂತ್ರಿಯನ್ನು ಮಾಡುವುದು ಕಾಂಗ್ರೆಸ್ ಶಾಸಕಾಂಗ ಪಕ್ಷ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News