ಕ್ಷೇತ್ರಗಳ ಅಭಿವೃದ್ಧಿಗೆ 100 ಕೋಟಿ ರೂ.ಅನುದಾನ ನೀಡಿ : ಮೊದಲ ಬಾರಿ ಆಯ್ಕೆಯಾದ ಶಾಸಕರಿಂದ ಸಿಎಂಗೆ ಮನವಿ

Update: 2024-12-17 10:20 GMT

ಬೆಳಗಾವಿ : ಪ್ರಥಮ ಬಾರಿಗೆ ಆಯ್ಕೆಯಾದ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ತಲಾ 100 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ನೂತನವಾಗಿ ಆಯ್ಕೆಯಾದ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಮಂಗಳವಾರ ಪತ್ರ ಬರೆದಿದ್ದಾರೆ.

ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಯಶ್‍ಪಾಲ್ ಸುವರ್ಣ ಅವರ ಲೇಟರ್‌ ಹೆಡ್‍ನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು, ಸಿಎಂಗೆ ಪತ್ರ ಬರೆದಿದ್ದಾರೆ. 2023ರ ವಿಧಾನಸಭಾ ಚುನಾವಣೆ ಬಳಿಕ ಮೊದಲ ಬಾರಿಗೆ ನೂತನವಾಗಿ ಶಾಸಕರಾಗಿ ಆಯ್ಕೆಯಾಗಿ 1 ವರ್ಷ 7 ತಿಂಗಳುಗಳು ಪುರ್ಣಗೊಳಿಸಿ, 5ನೆ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಕ್ಷೇತ್ರದ ಜನರಿಗೆ ನೂತನವಾಗಿ ಆಯ್ಕೆಯಾದ ನಮ್ಮೆಲ್ಲ ಶಾಸಕರ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಹಾಗೂ ನಿರ್ವಹಣೆ ಕೆಲಸಗಳಿಗೆ ಜನರಿಂದ ದಿನನಿತ್ಯ ಮನವಿಗಳನ್ನು ಸ್ವೀಕರಿಸುತ್ತಿದ್ದೇವೆ.

ಜನರ ಸಮಸ್ಯೆಗಳನ್ನು ನಿವಾರಿಸಲು ಮತ್ತು ಕ್ಷೇತ್ರದಲ್ಲಿ ಹೊಸ ಅಗತ್ಯ ಯೋಜನೆಗಳನ್ನು ಪ್ರಾರಂಭಿಸಲು ಜನರು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ. ನಾವು ಶಾಸಕರಾದಾಗಿನಿಂದಲೂ ಯಾವುದೇ ಗಮನಾರ್ಹ ಅನುದಾನ ಲಭಿಸದೆ ಜನರ ಆದ್ಯತೆಯ ಬೇಡಿಕೆಗಳಿಗೆ, ತುರ್ತು ಸಮಸ್ಯೆಗಳಿಗೆ, ಮೂಲಭೂತ ಸೌಕರ್ಯಗಳ ನಿರ್ವಹಣೆಗೆ ಹಾಗೂ ಅಭಿವೃದ್ಧಿಯ ಕಾಮಗಾರಿಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಪ್ರಗತಿಯಲ್ಲಿರುವ ಅನೇಕ ಕಾಮಗಾರಿಗಳು ನಿಧಾನಗತಿಯಲ್ಲಿವೆ ಅಥವಾ ಸ್ಥಗಿತಗೊಂಡಿದೆ.

ಆದುದರಿಂದ, ಪ್ರಥಮ ಬಾರಿ ಶಾಸಕರಾಗಿ ಆಯ್ಕೆಯಾದ ನಮ್ಮ ಕ್ಷೇತ್ರಕ್ಕೆ ಮಳೆಹಾನಿ, ಕೃಷಿಹಾನಿ, ಸಮುದ್ರ ಕೊರೆತ, ಆಸ್ಪತ್ರೆ, ಶಾಲಾ ಕಟ್ಟಡ, ರಸ್ತೆಗಳ ದುರಸ್ಥಿ-ನಿರ್ಮಾಣ, ಕಾಲುಸಂಕ ಮತ್ತು ಮೋರಿಗಳ ದುರಸ್ಥಿ-ನಿಮಾಣ, ನದಿ ದಂಡೆ ಸಂರಕ್ಷಣೆ ಹಾಗೂ ವಿದ್ಯುತ್-ಬೀದಿದೀಪಗಳ ಸೌಕರ್ಯ ಇತ್ಯಾದಿ ಸಮಸ್ಯೆಗಳಿಗೆ ಸ್ಪಂದಿಸಲು 2023-24 ಮತ್ತು 2024-25ನೆ ಸಾಲಿಗೆ ತಲಾ 50 ಕೋಟಿ ರೂ. ಸೇರಿದಂತೆ ಒಟ್ಟು 100 ಕೋಟಿ ರೂ.ವಿಶೇಷ ಅನುದಾನ ಮಂಜೂರು ಮಾಡಿಸಿ, ಕ್ಷೇತ್ರ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಪತ್ರದಲ್ಲಿ ಕೋರಲಾಗಿದೆ.

ಪತ್ರಕ್ಕೆ ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಘಂಟಿಹೊಳೆ, ಜಗದೀಶ್ ಗುಡಗಂಟಿ, ಸಿದ್ದು ಪಾಟೀಲ್, ಡಾ.ಶೈಲೇಂದ್ರ ಬೆಲ್ದಾಳೆ, ಚಂದ್ರು ಲಮಾಣಿ, ಮಹೇಶ್ ತೆಂಗಿನಕಾಯಿ, ಕೃಷ್ಣ ನಾಯ್ಕ್, ನಿಖಿಲ್ ಕತ್ತಿ, ಭಗೀರಥ ಮುರಳ್ಯ, ಸಮೃದ್ಧಿ ಮಂಜುನಾಥ್ ಸೇರಿದಂತೆ 25ಕ್ಕೂ ಹೆಚ್ಚು ಮಂದಿ ಶಾಸಕರು ಸಹಿ ಹಾಕಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News