ಮುಡಾ ಪ್ರಕರಣ : ಈಡಿ ಮುಂದೆ ಮತ್ತೋರ್ವ ಅಧಿಕಾರಿ ಹಾಜರು
Update: 2024-12-04 13:07 GMT
ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಸಂಬಂಧ ವಿಶೇಷ ಭೂ ಅಧಿಕಾರಿ ಮಂಜುನಾಥ್, ಜಾರಿ ನಿರ್ದೇಶನಾಲಯ(ಈಡಿ)ದ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.
ಬುಧವಾರ ಶಾಂತಿ ನಗರದಲ್ಲಿರುವ ಈಡಿ ಕಚೇರಿಗೆ ದಾಖಲೆಗಳ ಸಹಿತ ವಿಚಾರಣೆಗೆ ಹಾಜರಾದ ಮಂಜುನಾಥ್ ಅವರನ್ನು ಅಧಿಕಾರಿಗಳು ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿ ಪ್ರಕರಣ ಸಂಬಂಧ ಮಾಹಿತಿ ಪಡೆದುಕೊಂಡರು.
ಮುಡಾದಲ್ಲಿ ವಿಶೇಷ ಭೂ ಅಧಿಕಾರಿಯಾಗಿದ್ದ ಮಂಜುನಾಥ್ ಅವರು, ಕಾನೂನು ಉಲ್ಲಂಘಿಸಿ ಬೇಕಾಬಿಟ್ಟಿ ನಿವೇಶನಗಳನ್ನು ಹಂಚಿ ನೂರಾರು ಕೋಟಿ ರೂ. ನಷ್ಟ ಉಂಟು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅದರಲ್ಲೂ ನಿಯಮಗಳನ್ನು ಉಲ್ಲಂಘನೆ ಮಾಡಿ ತಮಗೆ ಬೇಕಾದವರಿಗೆ ನಗರದ ಪ್ರಮುಖ ಬಡಾವಣೆಗಳಲ್ಲಿ ನಿವೇಶನ ಹಂಚಿಕೆ ಮಾಡುವಲ್ಲಿ ಇವರ ಪ್ರಮುಖ ಪಾತ್ರವಿತ್ತು ಎನ್ನುವ ಮಾತುಗಳು ಕೇಳಿಬಂದಿತ್ತು.