ಮೂಡಿಗೆರೆ: ಹೊಯ್ಸಳಲು ಗ್ರಾಮಸ್ಥರ ಸಾರಿಗೆ ಸಮಸ್ಯೆ ಬಗೆಹರಿಸಿದ ಅಧಿಕಾರಿಗೆ ಶಾಸಕಿಯಿಂದ ಅಭಿನಂದನಾ ಪತ್ರ

Update: 2023-07-19 15:45 GMT

ಚಿಕ್ಕಮಗಳೂರು, ಜು.19: ಸ್ವಾತಂತ್ರ್ಯ ಬಂದಾಗಿನಿಂದಲೂ ಸರಕಾರಿ ಬಸ್ ಸೇವೆ ಕಾಣದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊಯ್ಸಳಲು ಗ್ರಾಮಕ್ಕೆ ಕೆಎಸ್ಸಾರ್ಟಿಸಿ ಬಸ್ ಸೇವೆ ಒದಗಿಸಿದ ಕೆಎಸ್ಸಾರ್ಟಿಸಿ ಬಸ್ ಡಿಪೋದ ಹಿರಿಯ ವ್ಯವಸ್ಥಾಪಕ ಸೋಮಶೇಖರ್ ಕೆ.ಕೆ ಅವರಿಗೆ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಅವರು ಅಭಿನಂದನಾ ಪತ್ರ ನೀಡಿ ಗೌರವಿಸಿದ್ದಾರೆ.

ಮೂಡಿಗೆರೆ ತಾಲೂಕಿನ ಹೊಯ್ಸಳಲು ಗ್ರಾಮ ತಾಲೂಕಿನ ಕುಗ್ರಾಮಗಳಲ್ಲೊಂದಾಗಿದ್ದು, ಈ ಗ್ರಾಮ ಸ್ವಾತಂತ್ರ್ಯ ಬಂದಾಗಿನಿಂದಲೂ ಸರಕಾರ ಬಸ್ ಸೇವೆಯನ್ನು ಕಂಡಿರಲಿಲ್ಲ. ಸರಕಾರಿ ಬಸ್ ಸೇವೆಗಾಗಿ ಗ್ರಾಮಸ್ಥರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಲವಾರು ವರ್ಷಗಳಿಂದ ಹಿಂದಿನ ಶಾಸಕರೂ ಸೇರಿದಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಪರಿಣಾಮ ಗ್ರಾಮಸ್ಥರು ಹಾಗೂ ಶಾಲಾ ಕಾಲೇಜು ಮಕ್ಕಳು ಸುಮಾರು 10ಕಿಮೀ ದೂರ ನಡೆದುಕೊಂಡು ಹೊರ ಜಗತ್ತಿನ ಸಂಪರ್ಕ ಪಡೆಯಬೇಕಾಗಿತ್ತು.

ವಿಧಾನಸಭೆ ಚುನಾವಣೆ ಬಳಿಕ ಗ್ರಾಮಸ್ಥರು ಹೊಯ್ಸಳಲು ಗಾಮದ ಜನರ ಸಾರಿಗೆ ಸಮಸ್ಯೆಯನ್ನು ನೂತನ ಶಾಸಕಿ ನಯನಾ ಮೋಟಮ್ಮ ಅವರ ಗಮನಕ್ಕೆ ತಂದಿದ್ದರು. ತಡ ಮಾಡದ ಶಾಸಕಿ ಮೂಡಿಗೆರೆ ಸಾರಿಗೆ ವಿಭಾಗದ ಡಿಪೋ ವ್ಯವಸ್ಥಾಪಕರಿಗೆ ಗ್ರಾಮಸ್ಥರ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದ್ದರು. ಈ ಸಮಸ್ಯೆಗೆ ಸ್ಪಂದಿಸಿದ ಘಟಕ ವ್ಯವಸ್ಥಾಪಕರು ಕೇವಲ ಮೂರು ದಿನಗಳಲ್ಲಿ ಹೊಯ್ಸಳಲು ಗ್ರಾಮಕ್ಕೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ಸೇವೆ ಆರಂಭಿಸಿ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ್ದರು. ಈ ಬಗ್ಗೆ 'ವಾರ್ತಾ ಭಾರತಿ' ಡಿಜಿಟಲ್ ಚಾನೆಲ್ ಮಾಡಿದ್ದ ವಿಶೇಷ ವೀಡಿಯೊ ವರದಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. 

ಗ್ರಾಮದ ಸಮಸ್ಯೆ ಪರಿಹಾರಕ್ಕೆ ಕೂಡಲೇ ಸ್ಪಂದಿಸಿದ ಮೂಡಿಗೆರೆ ಕೆಎಸ್ಸಾರ್ಟಿಸಿ ಡಿಪೋ ವ್ಯವಸ್ಥಾಪಕ ಸೋಮಶೇಖರ್ ಅವರಿಗೆ ಶಾಸಕಿ ನಯನಾ ಮೋಟಮ್ಮ ಗ್ರಾಮಸ್ಥರ ಪರವಾಗಿ ಅಭಿನಂದನಾ ಪತ್ರ ನೀಡಿ ಗೌರವಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News