ಮೂಡಿಗೆರೆ: ಕಾಡಾನೆ ದಾಳಿಗೆ ಕಾಫಿ, ಅಡಿಕೆ ತೋಟಗಳು ನಾಶ
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ರೈತರು, ಕಾಫಿ, ಅಡಿಕೆ ಬೆಳೆಗಾರರು ಬೆಳೆ ಕಳೆದುಕೊಂಡು ಕಂಗಲಾಗಿರುವ ಹೊತ್ತಿನಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಸದ್ಯ ಕಾಡಾನೆಗಳು ರೈತರ ತೋಟಗಳಿಗೆ ನುಗ್ಗಿ ಬೆಳೆಯನ್ನು ನಾಶಪಡಿಸುತ್ತಿವೆ. ಪರಿಣಾಮ ರೈತರ ಬದುಕು ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ.
ಕಳೆದೊಂದು ವಾರದಿಂದ ಸುರಿದ ಭಾರೀ ಮಳೆಗೆ ತುಂಗಾ, ಭದ್ರಾ, ಹೇಮಾವತಿ ನದಿಗಳು ತುಂಬಿ ಹರಿಯುತ್ತಿದ್ದು, ನದಿಪಾತ್ರದ ಜಮೀನುಗಳಿಗೆ ಹಾನಿಯಾಗಿದೆ. ಮಲೆನಾಡು ಭಾಗದಲ್ಲಿ ನಿರಂತರ ಮಳೆಯಿಂದ ಅಡಿಕೆ, ಕಾಫಿ, ಕಾಳು ಮೆಣಸು ಬೆಳೆಗಳಿಗೆ ಕೊಳೆರೋಧ ಭಾದೆ ತಗುಲಿದ್ದು, ಬೆಳೆ ರಕ್ಷಣೆ ಮಾಡಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿ ರೈತರಿದ್ದಾರೆ. ಇದರ ನಡುವೆ ಕಾಡಾನೆಗಳು ರೈತರ ತೋಟಗಳಿಗೆ ದಾಳಿ ಮಾಡಿ ಬೆಳೆ ಹಾಳು ಮಾಡುತ್ತಿರುವುದು ರೈತರ ನಿದ್ದೆ ಕೆಡಿಸಿದೆ.
ಮೂಡಿಗೆರೆ ತಾಲೂಕಿನ ಸಾರಗೋಡು, ಕುಂದೂರು ಭಾಗದಲ್ಲಿನ ಕಾಫಿ ತೋಟಗಳಿಗೆ ಅಂದಾಜು 20ಕ್ಕೂ ಹೆಚ್ಚು ಕಾಡಾನೆಗಳು ಕಳೆದ ಕೆಲ ದಿನಗಳಿಂದ ದಾಳಿ ಇಡುತ್ತಿದ್ದು, ಅಂದಾಜು 60ಕ್ಕೂ ಹೆಚ್ಚು ರೈತರ ತೋಟಗಳಿಗೆ ಕಾಡಾನೆಗಳು ದಾಳಿಯಿಟ್ಟು, ಕಾಫಿ, ಕಾಳು ಮೆಣಸು, ಬಾಳೆ, ಏಲಕ್ಕಿ, ಅಡಿಕೆ ಗಿಡಗಳನ್ನು ನಾಶಗೊಳಿಸಿವೆ. ಕಾಡಾನೆಗಳು ತೋಟಗಳಿಗೆ ನುಗ್ಗಿ ಗಿಡಗಳನ್ನು ನಾಶ ಮಾಡಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಾರದಿರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಹಾರ ಅರಸಿ ಕಾಡಾನೆಗಳು ಅರಣ್ಯ ವ್ಯಾಪ್ತಿಯಲ್ಲಿರುವ ಕಾಫಿ, ಅಡಿಕೆ ತೋಟಗಳಿಗೆ ದಾಳಿ ಇಡುತ್ತಿದ್ದು, ಹೊಲ ಗದ್ದೆಗಳನ್ನು ತುಳಿದು ನಾಶ ಮಾಡುತ್ತಿವೆ. ಮೂಡಿಗೆರೆ ತಾಲೂಕಿನ ಬೈದುಮನೆ ಗ್ರಾಮದಲ್ಲಿ ರಮೇಶ್ ಎಂಬವರ ತೋಟಕ್ಕೆ ಕಳೆದ ಬುಧವಾರ ರಾತ್ರಿ ಕಾಡಾನೆಯೊಂದು ದಾಳಿ ನಡೆಸಿದ್ದು, ಬೈನೆ ಮರವನ್ನು ತಿನ್ನುವ ಭರದಲ್ಲಿ ಸುಮಾರು 1ಎಕರೆ ಕಾಫಿ, ಅಡಿಕೆ ತೋಟವನ್ನು ನಾಶ ಮಾಡಿದೆ. ತಾಲೂಕಿನ ಊರುಬಗೆ ಗ್ರಾಮದ ವ್ಯಾಪ್ತಿಯ ತೋಟಗಳಿಗೆ ಎರಡು ಕಾಡಾನೆಗಳು ದಾಳಿ ಇಡುತ್ತಿದ್ದು, ದಾಳಿಯಿಂದ ತೋಟಗಳಿಗೆ ಅಪಾರ ಹಾನಿ ಸಂಭವಿಸಿದೆ.
ನಿರಂತರವಾಗಿ ಕಾಡಾನೆಗಳ ದಾಳಿಯಿಂದ ಸಂಭವಿಸುತ್ತಿರುವ ನಷ್ಟದ ಕುರಿತು ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕಾಡಾನೆ ದಾಳಿಯಿಂದ ಲಕ್ಷಾಂತರ ರೂ. ನಷ್ಟ ಉಂಟಾಗಿದ್ದು, ಸರಕಾರ ಸೂಕ್ತ ಪರಿಹಾರ ನೀಡುವಂತೆ ಇಲ್ಲಿನ ಬೆಳೆಗಾರರು ಆಗ್ರಹಿಸಿದ್ದಾರೆ.