ಮೂಡಿಗೆರೆ: ಮರದ ಕೊಂಬೆ ಕತ್ತರಿಸುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ರೈತ ಮೃತ್ಯು

Update: 2023-08-06 14:59 GMT

ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು, ಆ.6: ವಿದ್ಯುತ್ ತಂತಿಗೆ ತಾಗುವ ಹಂತದಲ್ಲಿದ್ದ ಮರದ ಕೊಂಬೆಗಳನ್ನು ಕಡಿಯಲು ಮರ ಏರಿದ್ದ ರೈತರೊಬ್ಬರು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ಹುಯಿಲುಮನೆ ಗ್ರಾಮದಲ್ಲಿ ರವಿವಾರ ಸಂಜೆ ವರದಿಯಾಗಿದೆ.

ಲೋಕಪ್ಪಗೌಡ (56) ವಿದ್ಯುತ್ ಪ್ರವಹಿಸಿ ಮೃತಪಟ್ಟ ರೈತನಾಗಿದ್ದು, ರವಿವಾರ ಸಂಜೆ ಮನೆಯ ಸಮೀಪದ ತಮ್ಮ ತೋಟದ ಮೂಲಕ ಹಾದು ಹೋಗಿದ್ದ ವಿದ್ಯುತ್ ಮಾರ್ಗದ ತಂತಿಗಳು ತೋಟದ ಮರದ ಸಮೀಪದಲ್ಲಿದ್ದು, ಮರದ ಕೊಂಬೆಗಳನ್ನು ಕಡಿಯುವ ಸಲುವಾಗಿ ಮರ ಹತ್ತಿದ್ದರು. ಮರದ ಕೆಲ ಕೊಂಬೆಗಳನ್ನು ಕತ್ತರಿಸುತ್ತಿದ್ದ ವೇಳೆ ಕತ್ತರಿಸಿದ ಕೊಂಬೆಯೊಂದು ವಿದ್ಯುತ್ ತಂತಿ ಮೇಲೆ ಬಿದ್ದಿದೆ. ಈ ವೇಳೆ ಮರದಲ್ಲಿದ್ದ ಲೋಕಪ್ಪಗೌಡರಿಗೆ ವಿದ್ಯುತ್ ಪ್ರವಹಿಸಿ ಲೋಕಪ್ಪಗೌಡ ಮರದಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಕುಟುಂಬಸ್ಥರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಪೊಲೀಸರು ಹಾಗೂ ಮೆಸ್ಕಾಂ ಸಿಬ್ಬಂದಿ ಮರದಲ್ಲಿ ನೇತಾಡುತ್ತಿದ್ದ ಲೋಕಪ್ಪಗೌಡ ಅವರ ಮೃತ ದೇಹವನ್ನು ಕೆಳಗಿಳಿಸಿದ್ದಾರೆ. ಘಟನೆ ಸಂಬಂದ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೆಸ್ಕಾಂ ಇಲಾಖೆ ವಿರುದ್ಧ ರೈತರ ಆಕ್ರೋಶ

ಮಲೆನಾಡು ಭಾಗದಲ್ಲಿ ಕಾಫಿ, ಅಡಿಕೆ ತೋಟಗಳ ಮಧ್ಯೆ ವಿದ್ಯುತ್ ಮಾರ್ಗಗಳು ಹಾದು ಹೋಗಿದ್ದು, ಮೆಸ್ಕಾಂ ಇಲಾಖೆ ಇಂತಹ ಮಾರ್ಗಗಳಲ್ಲಿ ಜಂಗಲ್ ಕಟಿಂಗ್ ಅನ್ನು ಸಮರ್ಪಕವಾಗಿ ಮಾಡದ ಪರಿಣಾಮ ಕಾಫಿ, ಅಡಿಕೆ, ಕಾಳುಮೆಣಸು ಕಟಾವು ಸಂದರ್ಭದಲ್ಲಿ ರೈತರು, ಕಾರ್ಮಿಕರು ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವ ಘಟನೆಗಳು ಕಾಫಿನಾಡಿನಲ್ಲಿ ಭಾರೀ ಸಂಖ್ಯೆಯಲ್ಲಿ ಜರುಗಿವೆ. ಇಂತಹ ಘಟನೆಗಳ ನಿಯಂತ್ರಣಕ್ಕೆ ಮೆಸ್ಕಾಂ ಇಲಾಖೆ ಕ್ರಮಹಿಸುತ್ತಿಲ್ಲ ಎಂಬ ದೂರುಗಳ ಮಧ್ಯೆ ರವಿವಾರ ರೈತ ಲೋಕಪ್ಪಗೌಡ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ. ಈ ಘಟನೆಯಿಂದಾಗಿ ಮೆಸ್ಕಾಂ ಇಲಾಖೆ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದು, ಇಂತಹ ಘಟನೆಗಳಿಗೆ ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಎಂದು ದೂರಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News