BBMP ಕಂದಾಯ ವಿಶೇಷ ಆಯುಕ್ತರಾಗಿ ಮುನೀಶ್ ಮೌದ್ಗಿಲ್ ನೇಮಕ
ಬೆಂಗಳೂರು, ಅ.11: ರಾಜ್ಯ ಸರಕಾರವು ಆರು ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಬುಧವಾರ ಆದೇಶ ಹೊರಡಿಸಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಲಯ ಆಯುಕ್ತರನ್ನಾಗಿ ವರ್ಗಾಯಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮುನೀಶ್ ಮೌದ್ಗಿಲ್ ಅವರನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತ(ಕಂದಾಯ)ರನ್ನಾಗಿ ಹಾಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನ ಕಾರ್ಯಕಾರಿ ನಿರ್ದೇಶಕಿ ವಿನೋತ್ ಪ್ರಿಯಾ ಆರ್. ಅವರನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಲಯ ಆಯುಕ್ತೆ(ದಕ್ಷಿಣ)ಯನ್ನಾಗಿ ವರ್ಗಾವಣೆ ಮಾಡಲಾಗಿದೆ.
ಅಟಲ್ ಜನಸ್ನೇಹಿ ಕೇಂದ್ರದ ನಿರ್ದೇಶಕ ಕರೀ ಗೌಡ ಅವರನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಲಯ ಆಯುಕ್ತ(ಯಲಹಂಕ)ರನ್ನಾಗಿ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ನಿಗಮದ ನಿರ್ದೇಶಕಿ(ಐಟಿ) ಸ್ನೇಹಲ್ ಆರ್. ಅವರನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಲಯ ಆಯುಕ್ತೆ(ಪೂರ್ವ)ಯನ್ನಾಗಿ ವರ್ಗಾವಣೆ ಮಾಡಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತೆ(ಎಸ್ಟೇಟ್ಸ್) ಪ್ರೀತಿ ಗೆಹ್ಲೋಟ್ ಅವರನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಲಯ ಆಯುಕ್ತ್ತೆ(ದಾಸರಹಳ್ಳಿ)ಯನ್ನಾಗಿ ಹಾಗೂ ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಪ್ರಾಧಿಕಾರ(ರೇರಾ)ದ ಕಾರ್ಯದರ್ಶಿ ಇಬ್ರಾಹೀಂ ಮೈಗೂರ್ ಅವರನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಲಯ ಆಯುಕ್ತ(ಮಹದೇವಪುರ)ರನ್ನಾಗಿ ವರ್ಗಾವಣೆ ಮಾಡಲಾಗಿದೆ.