ಸಾಂಸ್ಕೃತಿಕ ಯುದ್ಧಕ್ಕೆ ಸಿದ್ಧವಾಗಬೇಕಿದೆ: ಕೋಟಿಗಾನಹಳ್ಳಿ ರಾಮಯ್ಯ

Update: 2024-01-13 17:10 GMT

ಮೈಸೂರು: 2024ರ ಭೀಕರ ಭಾರತಕ್ಕೆ ವೇದಿಕೆ ಸಿದ್ಧಪಡಿಸಲಾಗಿದ್ದು, ಎಲ್ಲ ರಂಗಗಳನ್ನು ತನ್ನ ಹಿಡಿತಕ್ಕೆ ಒಳಪಡುವ ನೂರುವರ್ಷದ ನೀಲನಕ್ಷೆ ತಯಾರಿಸಲಾಗಿದೆ. ನಮ್ಮ ಪೂರ್ವಿಕರ ಪರಂಪರೆ ಇತಿಹಾಸ, ನುಡಿಗಟ್ಟುಗಳನ್ನು ಮರುವ್ಯಾಖ್ಯಾನಿಸುವ ಮೂಲಕ ಸಾಂಸ್ಕೃತಿಕ ಯುದ್ಧಕ್ಕೆ ಸಿದ್ಧವಾಗಬೇಕಿದೆ ಎಂದು ಬರಹಗಾರ, ಸಂಸ್ಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಕರೆ ನೀಡಿದ್ದಾರೆ.

ನಗರದ ಅಬ್ದುಲ್ ನಝೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯಲ್ಲಿ ಶನಿವಾರ ಶ್ರಮಣ ಸಂಸ್ಕೃತಿ ಟ್ರಸ್ಟ್ ಮತ್ತು ಬಯಲು ಬಳಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ‘90ರ ನಂತರದ ಕರ್ನಾಟಕ’ ರಾಜ್ಯ ಮಟ್ಟದ ವಿಚಾರ ಕಮ್ಮಟದಲ್ಲಿ ಅವರು ಮಾತನಾಡಿದರು

ದೇಶದ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅಪಹರಿಸಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದ್ದು, ಅದರಿಂದ ಹೊರಬರಲು ಅಂಬೇಡ್ಕರ್ ಅವರು ಕಂಡ ನಿಜವಾದ ಪ್ರಜಾಪ್ರಭುತ್ವವನ್ನು ಕಟ್ಟಬೇಕಿದೆ ಎಂದು ಅಭಿಪ್ರಾಯಪಟ್ಟರು.

ದೇಶದ ಕಾರ್ಯಾಂಗ, ನ್ಯಾಯಾಂಗ ಮತ್ತು ಆಡಳಿತ ವ್ಯವಸ್ಥೆಯನ್ನು ಆಕ್ರಮಿಸಿಕೊಳ್ಳಲಾಗಿದೆ. ನಿಜವಾದ ಪ್ರಭುತ್ವದ ಕಲ್ಪನೆಗಳು ದೂರವಾಗಿ ನಿರಂಕುಶ ಪ್ರಭುತ್ವ ನಮ್ಮನ್ನು ಆಳುತ್ತಿದೆ. ಈಗಾಗಲೇ ನೂರುವರ್ಷದ ನೀಲ ನಕ್ಷೆಯನ್ನು ಸಿದ್ಧಪಡಿಸಿಕೊಳ್ಳಲಾಗಿದೆ. 2024ರ ಭಾರತ ಭೀಕರವಾಗಿದ್ದು ಎಲ್ಲ ರಂಗಗಳು ಫ್ಯಾಶಿಸಮ್ ಗೆ ಒಳಪಡಲು ಸಿದ್ಧಗೊಂಡಿವೆ ಎಂದು ಹೇಳಿದರು.

ನೆಲದ ಸಂಸ್ಕೃತಿಯನ್ನು ಯುವ ಪೀಳಿಗೆಗೆ ತಿಳಿಸುವಲ್ಲಿ ನಾವು ವಿಫಲರಾಗಿದ್ದೇವೆ. ಅಂಬೇಡ್ಕರ್ ಅವರ ಸಿದ್ಧಾಂತವನ್ನು ಮೈಗೂಡಿಸಿಕೊಂಡಿರುವ ರಾಜಕೀಯ ಪಕ್ಷಗಳು ಮತ್ತು ದಲಿತ ಸಂಘಟನೆಗಳು ನೈಜ ಪ್ರಜಾಪ್ರಭುತ್ವದ ಬಗ್ಗೆ ಇಂದಿನ ಯುವ ಪೀಳಿಗೆಗಳಿಗೆ ತಿಳಿಸುವ ಕೆಲಸವನ್ನು ಮಾಡಬೇಕಿದೆ ಎಂದು ಹೇಳಿದರು.

ಸಂವಿಧಾನ ಜಾರಿಗೆ ಬಂದು ಇಷ್ಟು ವರ್ಷಗಳಲ್ಲಿ ಸಂವಿಧಾನ ಮೂಲ ಆಶಯವಾದ ಸ್ವಾತಂತ್ರ್ಯ, ಸಮಾನತೆ, ಭಾತೃತ್ವದ ಆಶಯಗಳನ್ನು ಜೀವನ ವಿಧಾನವನ್ನು ಮೈಗೂಡಿಸಿಕೊಳ್ಳುವಲ್ಲಿ ನಾವು ವಿಫಲವಾಗಿದ್ದೇವೆ. ಈ ಮೂರು ಅಂಶಗಳ ತಳಹದಿಯಲ್ಲಿ ಶಿಕ್ಷಣ ರೂಪುಗೊಳ್ಳುವ ಬದಲು ಅನೈತಿಕ, ಅಸಮಾನತೆ ಧೋರಣೆಗಳಿಂದ ರೂಪುಗೊಂಡಿದೆ. ಹೀಗಾಗಿ ಮೌಲ್ಯಗಳು ಕುಸಿಯುತ್ತಿದ್ದು, ಇಂದಿನ ಪರಿಸ್ಥಿತಿಗೆ ಕಾರಣ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಆಶಯದ ಸಂವಿಧಾನ ಇಂದಿಗೂ ಜಾರಿಯಾಗಿಲ್ಲ. ಚಳವಳಿಗಳು, ಶೈಕ್ಷಣಿಕ ಹೋರಾಟಗಳು ಸಂಪೂರ್ಣ ಕೊನೆಯ ಹಂತಕ್ಕೆ ತಲುಪಿವೆ. ಈಗ ನಾವು ಪ್ರತಿಯಾಗಿ ಚಳವಳಿಗಳನ್ನು ಕಟ್ಟಬೇಕು, ಸಂಸ್ಕೃತಿಯನ್ನು ಕಟ್ಟಬೇಕು, ಕ್ರಾಂತಿಯನ್ನು ಕಟ್ಟಬೇಕು ಎಂದು ಹೇಳಿದರು.

ಸಾಹಿತಿ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಇಂದು ಕಪ್ಪು ಹಣ ಪ್ರಜಾಪ್ರಭುತ್ವವನ್ನು ನಿಯಂತ್ರಿಸುತ್ತಿದೆ. ಕಪ್ಪು ಹಣ ಇಲ್ಲದವರು ರಾಜಕೀಯ ನಾಯಕರಾಗಲು ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿದೆ. ಭ್ರಷ್ಟಚಾರಕ್ಕೆ ಇಂದು ಸಾರ್ವಜನಿಕರ ಸಮ್ಮತಿ ಸಿಕ್ಕಿದೆ ಎಂದು ವಿಷಾದಿಸಿದರು.

ಈ ಸಂದರ್ಭದಲ್ಲಿ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ಡಾ.ಚಂದ್ರಶೇಖರ್ ಐಜೂರ್ ಉಪಸ್ಥಿತರಿದ್ದು ಮಾತನಾಡಿದರು. ರವಿಕುಮಾರ್ ಬಾಗಿ, ಅಬ್ದುಲ್ ನಝೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ನಿರ್ದೇಶಕಿ ಕೆ.ಲಕ್ಷ್ಮಿ ಪ್ರಿಯಾ, ಲವ ಉಪಸ್ಥಿತರಿದ್ದರು.

ಜಾತಿಗಣತಿಗೆ ಹೆದರಿ ರಾಮಮಂದಿರ: ಪ್ರೊ.ರವಿವರ್ಮಕುಮಾರ್

ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಜಾತಿಗಣತಿ ಮಾಡುತ್ತೇವೆ ಎಂಬ ಘೋಷಣೆಗೆ ಹೆದರಿದ ಬಿಜೆಪಿ ಮತ್ತು ಆರೆಸ್ಸೆಸ್ ರಾಮಂದಿರದ ಕೆಲಸ ಪೂರ್ಣವಾಗದಿದ್ದರೂ ರಾಮ ಮಂದಿರ ಉದ್ಘಾಟನೆಗೆ ಮುಂದಾಗಿದೆ ಎಂದು ಖ್ಯಾತ ವಿಚಾರವಾದಿ ಪ್ರೊ.ರವಿವರ್ಮಕುಮಾರ್ ಟೀಕಿಸಿದ್ದಾರೆ.

 

 

 

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News