ಮೈಸೂರು | ಪ್ರಭಾವಿ ವ್ಯಕ್ತಿಗಳಿಗೆ ನಿವೇಶನ ಹಂಚಿಕೆ ಆರೋಪ : ಮುಡಾದ 18 ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್

Update: 2024-09-11 09:41 GMT

ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ಪ್ರಭಾವಿ ವ್ಯಕ್ತಿಗಳಿಗೆ ನಿವೇಶನಗಳ ಹಂಚಿಕೆ ಆರೋಪ ಪ್ರಕರಣದಲ್ಲಿ ಮುಡಾದ 18 ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ.

ಮುಡಾ ಸೂಪರಿಂಟೆಂಡೆಂಟ್, ಇಂಜಿನಿಯರ್ ಕಾರ್ಯದರ್ಶಿ ಸೇರಿದಂತೆ 2017ರಲ್ಲಿ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಪ್ರಭಾವಿಗಳಿಗೆ ಹಂಚಿಕೆ ಮಾಡಲಾಗಿರುವ ನಿವೇಶನಗಳನ್ನು ಪ್ರಾಧಿಕಾರ ವಶಕ್ಕೆ ಪಡೆಯಬೇಕು ಎಂದು 2017ರಲ್ಲಿ ಆರ್‌ಟಿಐ ಕಾರ್ಯಕರ್ತ ಗಂಗರಾಜು ಲೋಕಾಯುಕ್ತಕ್ಕೆ ದೂರು ನೀಡಿದ್ದ ಕುರಿತು ದಾಖಲಾಗಿರುವ ಎಫ್‌ಐಆರ್ ಸಂಬಂಧ ಲೋಕಾಯುಕ್ತ ಪೊಲೀಸರು ಈ ನೋಟಿಸ್‌ ಜಾರಿ ಮಾಡಿದ್ದಾರೆ.

ಮೂರು ದಿನಗಳ ಒಳಗೆ ವಿಚಾರಣೆಗೆ ಹಾಜರಾಗುವಂತೆ ಮುಡಾದ 18 ಅಧಿಕಾರಿಗಳಿಗೆ ಮೈಸೂರು ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ದಾರೆ. ಸರ್ವೇ ನಂ.89 ಹಿನಕಲ್, ವಿಜಯನಗರ 2ನೇ ಹಂತ, ಮೈಸೂರು ಇಲ್ಲಿ ಪ್ರಾಧಿಕಾರದ 7 ಎಕರೆ 18 ಗುಂಟೆ ಜಮೀನನ್ನು ವಿಜಯನಗರ 2 ನೇ ಹಂತದ ಬಡಾವಣೆ ನಿರ್ಮಿಸಲು ಭೂ ಸ್ವಾಧೀನಪಡಿಸಿ ಕೊಳ್ಳಲಾಗಿತ್ತು.

1996-97ರಲ್ಲಿ ಹಿನಕಲ್ ಪಂಚಾಯತ್‌ನ ಅಂದಿನ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಮತ್ತು ಅಂದಿನ ಸದಸ್ಯರು ಹಿನಕಲ್ ಬಡಜನರಿಗೆ ಆಶ್ರಯ ನಿವೇಶನ ರಚಿಸಿ ಹಂಚುತ್ತೇವೆ ಎಂದು ಪ್ರಾಧಿಕಾರದ ಆಸ್ತಿಗೆ ಅತಿಕ್ರಮ ಪ್ರವೇಶ ಮಾಡಿ ಪ್ರಾಧಿಕಾರದ ಅನುಮತಿ ಪಡೆಯದೇ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಪ್ರಾಧಿಕಾರದ ಆಸ್ತಿಯಲ್ಲಿ ಸುಮಾರು 350ಕ್ಕೂ ಹೆಚ್ಚು 25:25 ಅಳತೆಯ ನಿವೇಶನಗಳನ್ನು ರಚಿಸಿದ್ದರು. ಈ ನಿವೇಶನಗಳನ್ನು ಬಿಎಂಎಲ್ ನೌಕರರಿಗೆ, ಶಾಲಾ ಶಿಕ್ಷಕರಿಗೆ, ಪಂಚಾಯತ್ ಪಿಡಿಒಗಳಿಗೆ, ಪೋಸ್ಟ್ ಆಫೀಸ್‌ ನೌಕರರಿಗೆ, ಸರಕಾರಿ ನೌಕರರಿಗೆ, ಪಂಚಾಯತ್ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ, ಸದಸ್ಯರಿಗೆ ಸಹಿತ ಉಳ್ಳವರಿಗೆ ಹಂಚಿಕೆ ಮಾಡಿದ್ದರು.

ಈ ಸಂಬಂಧ 2017ರಲ್ಲಿ ಗಂಗರಾಜು ಎಂಬವರು ಪ್ರಾಧಿಕಾರದ ಆಸ್ತಿಯನ್ನು ವಶಕ್ಕೆ ಪಡೆಯಲು ಪ್ರಾಧಿಕಾರಕ್ಕೆ ಹಾಗೂ ಎಸಿಬಿಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಎಫ್‌ಐಆರ್ ದಾಖಲಿಸಲು ಸರಕಾರ ಅನುಮತಿ ನೀಡಿತ್ತು. ಅದರಂತೆ 2022ರಲ್ಲಿ ಎಸಿಬಿ ಎಫ್ಐಆರ್ ದಾಖಲು ಮಾಡಿದ್ದು ಇದು ಲೋಕಾಯುಕ್ತಕ್ಕೆ ವರ್ಗಾವಣೆಗೊಂಡಿತ್ತು. ಲೋಕಾಯುಕ್ತ ಪೊಲೀಸರು ಪ್ರಾಧಿಕಾರದ 18 ಅಧಿಕಾರಿಗಳಿಗೆ ವಿಚಾರಣೆಗೆ 3 ದಿನಗಳೊಳಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News