ಲಾಲ್‌ಬಾಗ್‌ನಲ್ಲಿ ಗುಂಪಾಗಿ ಕುಳಿತು ಪಸ್ತಕ ಓದುವುದಕ್ಕೆ ನಿಷೇಧ ಹೇರಿದ ತೋಟಗಾರಿಕಾ ಇಲಾಖೆ!

Update: 2023-09-17 19:21 GMT

ಬೆಂಗಳೂರು: ʼಲಾಲ್‌ಬಾಗ್ ರೀಡ್ಸ್ʼ ಎಂಬ ಅಧ್ಯಯನ ಗುಂಪೊಂದು ತಮ್ಮ ಅತ್ಯಂತ ಪ್ರೀತಿಯ ಅಧ್ಯಯನ ತಾಣವಾದ ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿ ಅನಿರೀಕ್ಷಿತ ಅಡೆತಡೆಗೆ ಈಡಾಗಿದೆ. ಹುಲ್ಲು ಹಾಸಿನ ಮೇಲೆ ಕೂತು ಪುಸ್ತಕ ಓದುವವರಿಂದ ಉದ್ಯಾನವನದ ಹೂವು ಮತ್ತು ಹುಲ್ಲುಹಾಸಿನ ಸೂಕ್ಷ್ಮ ಸಮತೋಲನಕ್ಕೆ ಭಾರಿ ಅಪಾಯ ಎದುರಾಗಿದೆ ಎಂದು ವರದಿಯಾಗಿದೆ. ಹೀಗಾಗಿ ಲಾಲ್‌ಬಾಗ್‌ನಲ್ಲಿನ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರು, ಈ ರೀತಿಯ ಚಟುವಟಿಕೆಗಳು ಇಲಾಖಾ ಮಾರ್ಗಸೂಚಿಗಳಿಗೆ ಹೊಂದಿಕೆಯಾಗದ ಕಾರಣ ಅವನ್ನು ಸ್ಥಗಿತಗೊಳಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ ಎಂದು thenewsminute.com ವರದಿ ಮಾಡಿದೆ.

ಶ್ರುತಿ ಸಾಹು ಹಾಗೂ ಹರ್ಷ್ ಸ್ನೇಹ ಸಾಹು ಎಂಬ ಸ್ವಯಂಸೇವಕರ ನೇತೃತ್ವದಲ್ಲಿ ಪ್ರಾರಂಭಗೊಂಡಿದ್ದ ಕಬ್ಬನ್ ರೀಡ್ಸ್‌ನ ಶಾಖಾ ಸಂಸ್ಥೆ ಲಾಲ್‌ಬಾಗ್ ರೀಡ್ಸ್ ಆಗಿದೆ. ವಿಶ್ವಾದ್ಯಂತ ಅರವತ್ತು ನಗರಗಳಲ್ಲಿ ತನ್ನ ಶಾಖಾ ಸಂಸ್ಥೆಗಳನ್ನು ಹೊಂದಿರುವ ಲಾಲ್‌ಬಾಗ್ ರೀಡ್ಸ್, ತನ್ನ ಚಳವಳಿಯನ್ನು ವೈಟ್‌ಫೀಲ್ಡ್ ರೀಡ್ಸ್, ಸ್ಯಾಂಕಿ ರೀಡ್ಸ್, ಹೊಸೂರು-ಸರ್ಜಾಪುರ ರೀಡ್ಸ್, ಹಾಗೂ ಭಾರತೀಯ ಸಿಟಿ ರೀಡ್ಸ್ ಎಂಬ ಶಾಖಾ ಸಂಸ್ಥೆಗಳೊಂದಿಗೆ ಬೆಂಗಳೂರಿನಲ್ಲೂ ಕಾರ್ಯಾಚರಿಸುತ್ತಿದೆ.

ಲಾಲ್ಬಾಗ್ ರೀಡ್ಸ್ ತನ್ನ ಇತ್ತೀಚಿನ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಹೊರಡಿಸಿರುವ ಪ್ರಕಟನಯ ಪ್ರಕಾರ, ತಮ್ಮ ಕಾರ್ಯಚಟುವಟಿಕೆಯು ಲಾಲ್‌ಬಾಗ್ ಸಸ್ಯೋದ್ಯಾನದ ಆಡಳಿತ ಮಂಡಳಿಯು ನಿಗದಿಗೊಳಿಸಿರುವ ನಿಯಮಾವಳಿಗೆ ಬದ್ಧವಾಗಿದೆ. ಕಳೆದ ವಾರ ಲಾಲ್‌ಬಾಗ್‌ಗೆ ಭೇಟಿ ನೀಡಿದ್ದ ಸಂದರ್ಶಕರೊಬ್ಬರು ಗುಂಪು ಅಧ್ಯಯನವನ್ನು ಗಮನಿಸಿ ದೂರು ನೀಡಿದ್ದರು. ಅವರ ದೂರನ್ನು ಕೈಗೆತ್ತಿಕೊಂಡ ಇಲಾಖೆ, ಗುಂಪು ಅಧ್ಯಯನ ಬಗೆಯ ಚಟುವಟಿಕೆಗಳಿಗೆ ಇಲಾಖೆಯು ಅನುಮತಿ ನೀಡುವುದಿಲ್ಲ. ಕೂಡಲೇ ಅದನ್ನು ಸ್ಥಗಿತಗೊಳಿಸಬೇಕು ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರು ಸೂಚನೆ ನೀಡಿದ್ದಾರೆ. ಕಳೆದ ವಾರ ಲಾಲ್‌ಬಾಗ್‌ಗೆ ಭೇಟಿ ನೀಡಿದ್ದ ಮತ್ತೊಬ್ಬ ನಾಗರಿಕರು, ನಮ್ಮ ಗುಂಪು ಹಲ್ಲು ಹಾಸಿನ ಮೇಲೆ ಕುಳಿತು ಅಧ್ಯಯನ ನಡೆಸುತ್ತಿರುವುದನ್ನು ಗಮನಿಸಿದ್ದು, ಅವರು ಗುಂಪಾಗಿರುವ ನಮ್ಮ ಉಪಸ್ಥಿತಿಯಿಂದ ಹೂವು ಹಾಗೂ ಹುಲ್ಲು ಹಾಸಿನ ನೈಸರ್ಗಿಕ ಬೆಳವಣಿಗೆಗೆ ಅಡಚಣೆಯುಂಟಾಗುತ್ತದೆ ಎಂದು ದೂರು ನೀಡಿದ್ದಾರೆ. ಆ ಬಳಿಕ ಈ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಇಲಾಖೆಯ ಈ ನಿರ್ಧಾರಕ್ಕೆ ಆಕ್ರೋಶ ವ್ಯಕ್ತವಾಗಿದೆ. 

Full View

ಈ ವರ್ಷದ ಎಪ್ರಿಲ್ ತಿಂಗಳಲ್ಲಿ ತೋಟಗಾರಿಕಾ ಇಲಾಖೆಯು ಕಬ್ಬನ್ ಪಾರ್ಕ್‌ನಲ್ಲಿ ಸಾರ್ವಜನಿಕ ನಡವಳಿಕೆಯ ಕುರಿತು ಪರಿಷ್ಕೃತ ನಿಯಮಾವಳಿಗಳನ್ನು ಜಾರಿಗೊಳಿಸಿತ್ತು. ಈ ನಿಯಮಾವಳಿಗಳು ಉದ್ಯಾನವನಕ್ಕೆ ಭೇಟಿ ನೀಡುವ ಸಂದರ್ಶಕರು ಹೇಗೆ ವರ್ತಿಸಬೇಕು ಎಂದು ಹೇಳಿತ್ತು. ಈ ನಿಯಮಾವಳಿಗಳು ಆಟ ಆಡುವುದನ್ನು, ತಿನ್ನುವುದನ್ನು, ನಾಟಕದ ಪ್ರದರ್ಶನವನ್ನು, ಜೋಡಿಗಳು ಅಶ್ಲೀಲ ವರ್ತನೆಗಳಲ್ಲಿ ತೊಡಗುವುದನ್ನು ಹಾಗೂ ಗುಂಪಾಗಿ ಕಬ್ಬನ್ ಪಾರ್ಕ್‌ನಲ್ಲಿ ಸೇರುವುದಕ್ಕೆ ನಿಷೇಧ ಹೇರಿತ್ತು. 

ಈ ಕುರಿತು ಇದುವರೆಗೂ ಲಾಲ್‌ಬಾಗ್ ತೋಟಗಾರಿಕಾ ಇಲಾಖೆ ಯಾವುದೇ ಸ್ಪಷ್ಟನೆ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News