ಹೇಮಾವತಿ ನದಿಗೆ ಹಾರಿ ಗುತ್ತಿಗೆದಾರ ಆತ್ಮಹತ್ಯೆ
Update: 2023-10-06 14:43 GMT
ಹೊಳೆನರಸೀಪುರ (ಹಾಸನ): ಹೇಮಾವತಿ ನದಿಗೆ ಹಾರಿ ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದಲ್ಲಿ ಶುಕ್ರವಾರ ವರದಿಯಾಗಿದೆ.
ಸ್ಥಳೀಯ ಪ್ರಥಮ ದರ್ಜೆ ಗುತ್ತಿಗೆದಾರ ಕೆ.ಸತ್ತಾರ್ (79) ಆತ್ಮಹತ್ಯೆ ಮಾಡಿಕೊಂಡಿರುವವರು ಎಂದು ಗುರುತಿಸಲಾಗಿದೆ.
ಮೃತ ಸತ್ತಾರ್, ವೈಯಕ್ತಿಕ ಸಮಸ್ಯೆ ಹಾಗೂ ಸಾಲ ಕೊಟ್ಟಿದ್ದ ಲಕ್ಷಾಂತರ ರೂ.ಹಣ ವಾಪಸ್ ಬಾರದೇ ಇದ್ದುದರಿಂದ ತೀವ್ರವಾಗಿ ನೊಂದಿದ್ದರು. ಇದರಿಂದ ಮಾನಸಿಕ ಖಿನ್ನತೆಗೂ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ.
ನಿನ್ನೆ ಬೆಳಗ್ಗೆ (ಗುರುವಾರ) 9 ಗಂಟೆ ಸುಮಾರಿಗೆ ಪಟ್ಟಣದ ಹೇಮಾವತಿ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದ್ದು, ಅವರ ಮೃತದೇಹ ಪತ್ತೆಯಾಗದ ಹಿನ್ನಲೆಯಲ್ಲಿ ಕುಂದಾಪುರದ ಮುಳುಗು ತಜ್ಞರು ಶೋಧಕಾರ್ಯ ನಡೆಸುತ್ತಿದ್ದಾರೆ. ಈ ಸಂಬಂಧ ಹೊಳೆನರಸೀಪುರ ನಗರಠಾಣೆಯಲ್ಲಿ ಸತ್ತಾರ್ ಸಂಬಂಧಿಕರು ದೂರು ನೀಡಿದ್ದಾರೆ.