"ಕಟುಕರಿಗೆ ಕಣ್ಣೀರು ಬರುವುದಿಲ್ಲ": ತನ್ನ ಕಣ್ಣೀರಿನ ಬಗ್ಗೆ ವ್ಯಂಗ್ಯವಾಡಿದವರಿಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು

Update: 2024-11-05 14:39 GMT

ನಿಖಿಲ್‌ ಕುಮಾರಸ್ವಾಮಿ

ಬೆಂಗಳೂರು: ‘ಮನುಷ್ಯತ್ವ, ಭಾವನಾತ್ಮಕ ಮನೋಭಾವ ಇರುವವರಿಗೆ ಮಾತ್ರ ಕಣ್ಣೀರು ಬರೋದು. ನನ್ನ ಕಣ್ಣೀರಿನ ಬಗ್ಗೆ ಕೆಲವರು ವ್ಯಂಗ್ಯ ಮಾಡುತ್ತಿದ್ದಾರೆ. ಕಟುಕರಿಗೆ ಕಣ್ಣೀರು ಬರುವುದಿಲ್ಲ’ ಎಂದು ಚನ್ನಪಟ್ಟಣ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಮಂಗಳವಾರ ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದಲ್ಲಿ ತಮ್ಮ ತಾತ, ಮಾಜಿ ಪ್ರಧಾನಿ ದೇವೇಗೌಡರ ಜೊತೆ ಪ್ರಚಾರ ನಡೆಸಿದ ವೇಳೆ ಮಾತನಾಡಿದ ಅವರು, ‘ಆತನಿಗೆ ಹಣೆಬರಹ, ಅದೃಷ್ಟ ಇಲ್ಲ ಅಂತಾರೆ. ನನ್ನ ಹಣೆಬರಹ ಬರೆಯುವವರು ಚನ್ನಪಟ್ಟಣ ಕ್ಷೇತ್ರದ ಜನ. ನಾನು ಮಂಡ್ಯದಲ್ಲಿ ಸೋತಿದ್ದೇನೆ. ಆದರೆ, ಈ ಕ್ಷೇತ್ರದ ಜನ ನನಗೆ ಹೆಚ್ಚಿನ ಮತ ಕೊಟ್ಟು ಆಶೀರ್ವಾದ ಮಾಡಬೇಕು ಎಂದು ಕೋರಿದರು.

ನನ್ನನ್ನು ಕಾಂಗ್ರೆಸ್ ನಾಯಕರು ಹೊರಗಿನವ ಅಂತಾರೆ, ನನಗೆ ಈಗ 36 ವರ್ಷ ವಯಸ್ಸು. ನಾನು ಹುಟ್ಟಿದ ಐದು ವರ್ಷದ ಹಿಂದಿನಿಂದಲೂ ದೇವೇಗೌಡ ಮತ್ತು ಕುಮಾರಣ್ಣ ಸಂಬಂಧ ಚನ್ನಪಟ್ಟಣಕ್ಕೆ ಇದೆ. ದೇವೇಗೌಡರ ಇಗ್ಗಲೂರು ಅಣೆಕಟ್ಟು ನಿರ್ಮಿಸಿ ಕೊಡುಗೆಯಿಂದ ಜನ ನನ್ನನ್ನ ಪ್ರೀತಿಯಿಂದ ಹರಸುತ್ತಿದ್ದಾರೆ. ಕ್ಷೇತ್ರ ಮತ್ತು ಜಿಲ್ಲೆಗೆ ನೀರಾವರಿ ಸೌಲಭ್ಯ ಕಲ್ಪಿಸಿದ್ದು ದೇವೇಗೌಡರು ಎಂದರು,

ಜೆಡಿಎಸ್-ಬಿಜೆಪಿಯ ಕಾರ್ಯಕರ್ತರ ದಂಡು ಬಂದು ಪ್ರಚಾರ ಮಾಡ್ತಿದ್ದಾರೆ. 3ನೇ ಬಾರಿ ನಿಖಿಲ್‍ ಗೆ ತೊಂದರೆ ಆಗಬಾರದು ಅಂತ. ನಾನು ಎರಡು ಚುನಾವಣೆಗಳನ್ನ ಎದುರಿಸಿದ್ದೇನೆ. ಎರಡು ಚುನಾವಣೆಗಳ ಸೋಲಿನ ಕಹಿ ನನಗೆ ನೋವುಗಳಿವೆ. ರಾಮನಗರ ಚುನಾವಣೆಯಲ್ಲಿ ಏನಾಯ್ತು ಎಂದು ನಿಮಗೆ ಗೊತ್ತಿದೆ. ಇಲ್ಲಿ ನಾನು ಜನಪ್ರತಿನಿಧಿ ಆಗಬೇಕೆಂದು ನಾನು ಬಂದಿಲ್ಲ. ನಮ್ಮ ಮನೆಗೆ ಬರುವ ಎಲ್ಲ ವರ್ಗದವರಿಗೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News