ಕಾಂಗ್ರೆಸ್ ಸರ್ಕಾರದ ಎಡವಟ್ಟುಗಳ ವಿರುದ್ಧ ಬಿಜೆಪಿ ಪ್ರತಿಭಟನೆಗಿಳಿದರೆ ಅನುದಾನ ಹಂಚಿಕೆ ಬಗ್ಗೆ ಆಪಾದನೆ ಮಾಡೋದು ಸಿಎಂ ಚಾಳಿ: ಪ್ರಲ್ಹಾದ್ ಜೋಶಿ
ನವದೆಹಲಿ: ಅನುದಾನ ಹಂಚಿಕೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಆಪಾದನೆ "ಹಾಡಿದ್ದೇ ಹಾಡೋ ಕಿಸಬಾಯಿ ದಾಸ" ಎಂಬ ಗಾದೆ ಮಾತಿನಂತಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದ್ದಾರೆ.
ಕೇಂದ್ರ ಸರ್ಕಾರ ರಾಜ್ಯಕ್ಕೆ ಸಮರ್ಪಕ ಅನುದಾನ ನೀಡಿದ್ದರೆ ರಾಜಕೀಯ ಬಿಡುವೆ; ಇಲ್ಲದಿದ್ದರೆ ಪ್ರಲ್ಹಾದ ಜೋಶಿ ರಾಜಕಾರಣ ಬಿಡುತ್ತಾರೆಯೇ? ಎಂದು ಸಿಎಂ ಪ್ರಶ್ನಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಪ್ರಲ್ಹಾದ ಜೋಶಿ, ನೀವು ರಾಜಕೀಯ ಬಿಡುವ ಮಾತೂ ನಿಮ್ಮ "ಗ್ಯಾರಂಟಿ" ರೀತಿಯೇ! ಆಗಿರುತ್ತದೆ. ಹಳೇ ಗ್ರಾಮೋಫೋನ್ ತರ ಅದೇ ವಾಕ್ಯವನ್ನು (ಸುಳ್ಳನ್ನು) ಪುನರುಚ್ಚರಿಸುತ್ತಿದ್ದೀರಿ. ನೀವು ರಾಜಕೀಯ ಬಿಡುವ ಮಾತು ಸಹ ನಿಮ್ಮ "ಅರೆಬರೆ ಗ್ಯಾರಂಟಿ ಥರಾನೆ"…ನಿಮ್ಮಿಂದ ಅದು ಎಂದೂ ಆಗದ ಮಾತು. ಹಾಗಾಗಿ "ರಾಜಕಾರಣ ಬಿಡುವ ಮೊದಲು ಮುಖ್ಯಮಂತ್ರಿ ಸ್ಥಾನ ಬಿಟ್ಟು ಹಗರಣಗಳ ತನಿಖೆಗೆ ಅನುವು ಮಾಡಿಕೊಡಿ ಸಾಕು" ಎಂದು ಸಿಎಂಗೆ ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಹಗರಣ, ಎಡವಟ್ಟುಗಳ ವಿರುದ್ಧ ಬಿಜೆಪಿ ಪ್ರತಿಭಟನೆಗಿಳಿದರೆ ಅನುದಾನ ಹಂಚಿಕೆ ಬಗ್ಗೆ ಆಪಾದನೆ ಮಾಡೋದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಂದು ವಾಕ್ಚಾಳಿ ಆಗಿಬಿಟ್ಟಿದೆ. ವಿನಾಕಾರಣ ಕೇಂದ್ರ ಸರ್ಕಾರದ ಮೇಲೆ ಹರಿಹಾಯುವುದೇ ನಿತ್ಯ ಕಾಯಕವಾಗಿಬಿಟ್ಟಿದೆ. ಇದೇ ಸುಳ್ಳನ್ನು ಇನ್ನೂ ಎಷ್ಟು ದಿನ ಹೇಳುತ್ತಾ ರಾಜಕೀಯ ಮಾಡುತ್ತೀರಿ? ಎಂದು ಜೋಶಿ ಪ್ರಶ್ನಿಸಿದ್ದಾರೆ.
ಕರ್ನಾಟಕಕ್ಕೆ ಸಲ್ಲಬೇಕಾದ ಎಲ್ಲಾ ಅನುದಾನವೂ ಸಂದಿದೆ. ಯಾವುದೂ ಬಾಕಿ ಇಲ್ಲ. ಸ್ವತಃ ಕೇಂದ್ರ ಹಣಕಾಸು ಸಚಿವರೇ ಅನೇಕ ಬಾರಿ ದಾಖಲೆ ಸಮೇತ ಸ್ಪಷ್ಟಪಡಿಸಿದ್ದಾರೆ. ಹಣಕಾಸು ಆಯೋಗದ ಹಂಚಿಕೆ ಪ್ರಮಾಣದಿಂದ ಸಹ ಇದು ಸ್ಪಷ್ಟವಾಗಿದೆ ಎಂದು ಜೋಶಿ ಪ್ರತ್ಯುತ್ತರ ಕೊಟ್ಟಿದ್ದಾರೆ. ಆರ್ಥಿಕತೆ, ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ನಂ.1 ಎನ್ನುತ್ತೀರಿ. ಹಾಗಿದ್ದರೂ ಕೇಂದ್ರದ ಅನುದಾನದ ಜಪ ಮಾಡುತ್ತಿದ್ದೀರಿ. ಇದು ನಿಮ್ಮ ಇಬ್ಬಗೆಯ ನೀತಿಯಲ್ಲವೇ? ಎಂದು ಪ್ರಶ್ನಿಸಿದರು.
ಮೋದಿ ಆಡಳಿತದಲ್ಲಿ ರಾಜ್ಯಗಳಿಗೆ ಅನುದಾನ ಸಂಪನ್ಮೂಲ ಹೆಚ್ಚಿದೆ. ಇದು ಎಲ್ಲರಿಗೂ ತಿಳಿದ ವಿಷಯವೇ. ಆದರೆ, ಚುನಾವಣೆ ಗೆಲ್ಲುವ ಭರದಲ್ಲಿ ನೀವು ನೀಡಿದ ಭರವಸೆಗಳನ್ನು ಪೂರೈಸಲಾಗದೆ ಮತ್ತು ರಾಜ್ಯದ ಅಭಿವೃದ್ಧಿಗೆ ಬ್ರೇಕ್ ಹಾಕಿರುವುದು ಇಡೀ ದೇಶಕ್ಕೇ ತಿಳಿದಿದೆ. ಗ್ಯಾರಂಟಿಗಳಿಂದ ರಾಜ್ಯದ ರಸ್ತೆಗೂ ಬುಟ್ಟಿ ಮಣ್ಣು ಹಾಕದಾಗಿದೆ ಎಂದು ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ್ದಾರೆ. ರಾಜ್ಯದ ಅಭಿವೃದ್ಧಿ ಕಡೆಗೂ ಸ್ವಲ್ಪ ಗಮನ ಹರಿಸಿ ಎಂದರು.
ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣಗಳಿಂದ ನಾಡಿಗೆ ಅಪಕೀರ್ತಿ ತಂದಿದ್ದೀರಿ. ಹಾಲು, ಪೆಟ್ರೋಲ್, ಡೀಸೆಲ್, ವಿದ್ಯುತ್ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಮೇಲೆ ಹೊರೆ ಹೊರಿಸಿದ್ದೀರಿ. ಇದರ ಜೊತೆ ಕಾನೂನು ವ್ಯವಸ್ಥೆಯೂ ಕುಸಿದಿದೆ. ಇದು ನಿಮ್ಮ ಅದಕ್ಷ ಆಡಳಿತಕ್ಕೆ ನಿದರ್ಶನಗಳು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದ್ದಾರೆ.