ಯೋಗೇಶ್ವರ್ ಜೇಬಿನಲ್ಲಿ ಐದು ʼಬಿ ಫಾರಂʼ ಇಟ್ಟುಕೊಂಡು ತಿರುಗಾಡುತ್ತಿದ್ದಾರೆ : ನಿಖಿಲ್ ಕುಮಾರಸ್ವಾಮಿ

Update: 2024-10-22 17:04 GMT

ಬೆಂಗಳೂರು : ಕಾಂಗ್ರೆಸ್ ಪಕ್ಷ ಸೇರಲು ಸಜ್ಜಾಗಿರುವ ಸಿ.ಪಿ.ಯೋಗೇಶ್ವರ್ ಜೇಬಿನಲ್ಲಿ ಐದು ಬಿ ಫಾರಂ ಇಟ್ಟುಕೊಂಡು ತಿರುಗಾಡುತ್ತಿದ್ದಾರೆಂಬ ಮಾಹಿತಿ ಬಂದಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮಂಗಳವಾರ ಜೆಡಿಎಸ್ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ನಾನು ಹೊಂದಾಣಿಕೆ ರಾಜಕೀಯ ಮಾಡಲ್ಲ. ಒಂದು ಪಕ್ಷದಲ್ಲಿದ್ದು ಬೇರೆ ಪಕ್ಷಗಳ ‘ಬಿ ಫಾರಂ’ ಇಟ್ಟುಕೊಂಡು ಓಡಾಡುವುದು ಗೊತ್ತಿಲ್ಲ. ಹಾಗೆ ಮಾಡುವ ಜಾಯಮಾನವೂ ನನ್ನದಲ್ಲ’ ಎಂದು ಅವರು ಹೇಳಿದರು. ರಾಜ್ಯದ ಬಿಜೆಪಿ ನಾಯಕರು ಯೋಗೇಶ್ವರ್ ಪರ ಬ್ಯಾಟಿಂಗ್ ಮಾಡ್ತಿದ್ದೀರಿ. ಈಗ ಯೋಗೇಶ್ವರ್ ಕಾಂಗ್ರೆಸ್ ಮನೆ ಬಾಗಿಲು ಮುಂದೆ ನಿಂತಿರುವ ಬಗ್ಗೆ ಸುದ್ದಿ ಕೇಳಿ ಬರುತ್ತಿದೆ’ ಎಂದು ದೂರಿದರು.

‘ಚುನಾವಣೆಯಲ್ಲಿ ದೇವೇಗೌಡರು ಸೋತಿಲ್ಲವೇ? ನಾನು ಎರಡು ಬಾರಿ ಸೋತಿರಬಹುದು, ಆದರೆ ಸತ್ತಿಲ್ಲ. ಹೀಗಾಗಿ ಚುನಾವಣೆಗೆ ಹೆದರಿ ಕೂರುವ ಜಾಯಮಾನ ನನ್ನದಲ್ಲ. ಎರಡು ದಿನಗಳಿಂದ ಯೋಗೇಶ್ವರ್‍ಗೆ ನೀವು ಒಪ್ಕೊಳೋದಾದ್ರೆ ಜೆಡಿಎಸ್ ಚಿಹ್ನೆಯಡಿ ಸ್ಪರ್ಧೆ ಮಾಡಿ ಎಂದು ಹೇಳಿದ್ದೆವು. ಈ ಹಿಂದೆ ಯಾವುದಾದರೂ ಚಿಹ್ನೆ ಸರಿ ನಾನು ಸ್ಪರ್ಧೆ ಮಾಡುತ್ತೇನೆಂದು ಭಾಷಣ ಬಿಗಿದಿದ್ದರು. ಆದರೆ, ಈಗ ಅವರು ಬೇರೆ ವರಸೆಯ ಹೆಜ್ಜೆಗಳನ್ನು ಇಡುತ್ತಿದ್ದಾರೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಯೋಗೇಶ್ವರ್ ಹೇಳಿಕೆಗಳನ್ನ ಗಮನಿಸಿದ್ದೇವೆ. ಅವರು ಗೊಂದಲದ ಹೇಳಿಕೆ ನೀಡಿದ್ದರು. ಆ ಮೇಲೆ ಕುಮಾರಸ್ವಾಮಿ, ಒಕ್ಕಲಿಗರನ್ನು ತುಳಿಯುತ್ತಿದ್ದಾರೆ ಅಂತೆಲ್ಲಾ ಹೇಳಿದ್ದರು. ಆದರೆ ಎರಡು ದಿನಗಳಿಂದ ಏನೆಲ್ಲ ನಡೆಯುತ್ತಿದೆ ಎನ್ನುವುದು ನನಗೆ ಗೊತ್ತಿದೆ. ಸಿಎಂ, ಡಿಸಿಎಂ, ಸಚಿವರು, ಅಕ್ಕ-ಪಕ್ಕದ ನಾಯಕರು ಯೋಗೇಶ್ವರ್‌ಗೆ ಟಿಕೆಟ್ ಕೊಡುತ್ತೇವೆ ಎನ್ನುತ್ತಿದ್ದಾರೆ ಎಂದು ಅವರು ತಿಳಿಸಿದರು.

ಕಾಣದ ‘ಕೈ'ವಾಡ: ಮಂಡ್ಯದಲ್ಲಿ ನನಗೆ ಮೊದಲ ಅವಕಾಶ ಕೊಟ್ರು ಆ ಚುನಾವಣೆ ಯಾವ ರೀತಿ ನಡೆದಿದೆ ಎಂದು ರಾಜ್ಯದ ಜನತೆಗೆ ಗೊತ್ತು. ರಾಜಕೀಯ ಷಡ್ಯಂತ್ರ ಅಲ್ಲಿಗೆ ಸುಮ್ಮನೆ ಆಗಲಿಲ್ಲ. ನಂತರ ರಾಮನಗರದಲ್ಲಿ ಕಾರ್ಯಕರ್ತರ ಒತ್ತಡದಿಂದ ನಾನು ಸ್ಪರ್ಧೆ ಮಾಡಿದೆ. ರಾಮನಗರದಲ್ಲೂ ಕಾಣದ ರಾಜಕೀಯ ಕೈವಾಡ ನಡೆದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News