ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವರಾಗಿರುವುದು ಅತ್ಯಂತ ಅಪಾಯಕಾರಿ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಆಯವ್ಯಯದ ಲೆಕ್ಕಾಚಾರದ ಮೂಲ ಪಾಠವೇ ಗೊತ್ತಿಲ್ಲದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಪ್ರಧಾನಿ ಮೋದಿ ತಕ್ಷಣ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂಥವರ ಕೈಯಲ್ಲಿ ಹಣಕಾಸು ಖಾತೆ ನೀಡಿರುವುದು ಅತ್ಯಂತ ಅಪಾಯಕಾರಿ ನಿರ್ಧಾರ ಎಂದು ಟೀಕಿಸಿದ್ದಾರೆ.
ಸೋಮವಾರ ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಸಿದ್ದರಾಮಯ್ಯ, "ನರೇಂದ್ರ ಮೋದಿ ಸರಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಮರೆಮಾಚುವ ಹತಾಶ ಪ್ರಯತ್ನ ಮಾಡಿರುವ ನಿರ್ಮಲಾ ಸೀತಾರಾಮನ್ ತಾವೇ ಹೆಣೆದ ಬಲೆಯಲ್ಲಿ ಸಿಕ್ಕಿ ಹಾಕಿಕೊಡಿರುವುದು ದುರಂತ" ಎಂದು ಹೇಳಿದ್ದಾರೆ.
ಅವರ ಪ್ರಕಾರ ಹಿಂದಿನ ಯುಪಿಎ ಸರಕಾರ(2004-2014) ಹತ್ತು ವರ್ಷಗಳ ಅವಧಿಯಲ್ಲಿ ಕರ್ನಾಟಕಕ್ಕೆ ನೀಡಿರುವ ಅನುದಾನ ರೂ.60,779 ಕೋಟಿ. ಎನ್‍ಡಿಎ ಸರಕಾರ(2014-2024)ದ ಅವಧಿಯಲ್ಲಿ ನೀಡಿದ್ದ ಹಣ ರೂ.2,36,955 ಕೋಟಿ. ಆದರೆ ಹತ್ತು ವರ್ಷಗಳ ಅವಧಿಯಲ್ಲಿ ಕೇಂದ್ರ ಸರಕಾರದ ಬಜೆಟ್ ಗಾತ್ರ ಎಷ್ಟು ಪಟ್ಟು ಹೆಚ್ಚಾಗಿದೆ ಎನ್ನುವುದನ್ನು ಅವರು ಮರೆತಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
2013-14ರ ಕೇಂದ್ರ ಸರಕಾರದ ಬಜೆಟ್ ಗಾತ್ರ ರೂ.16,06 ಲಕ್ಷ ಕೋಟಿ. ಆಗ ಕರ್ನಾಟಕಕ್ಕೆ ಅನುದಾನದ ರೂಪದಲ್ಲಿ ರೂ.16,428 ಕೋಟಿ ಮತ್ತು ತೆರಿಗೆ ಹಂಚಿಕೆಯಲ್ಲಿ ರೂ.15,005 ಕೋಟಿ ಹೀಗೆ ಒಟ್ಟು ರೂ.31,483 ಕೋಟಿ ನೀಡಲಾಗಿತ್ತು. ಈ ನೆರವು ಒಟ್ಟು ಬಜೆಟ್ ನ ಶೇಕಡಾ 1.9ರಷ್ಟಾಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
2024-25ರ ಅವಧಿಯ ಕೇಂದ್ರ ಸರಕಾರದ ಬಜೆಟ್ ಗಾತ್ರ ರೂ.48.02 ಲಕ್ಷ ಕೋಟಿಯಾಗಿದೆ. ಈ ಅವಧಿಯಲ್ಲಿ ನಮಗೆ ಕೇಂದ್ರ ಅನುದಾನದ ರೂಪದಲ್ಲಿ ರೂ.15,229 ಕೋಟಿ ಮತ್ತು ತೆರಿಗೆ ಹಂಚಿಕೆಯಲ್ಲಿ ರೂ.44.485 ಕೋಟಿ ನೀಡಲಾಗುತ್ತದೆ. ಇದು ಒಟ್ಟು ಬಜೆಟ್ ಗಾತ್ರದ ಶೇಕಡಾ 1.2 ರಷ್ಟಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
2013-14ರ ಪ್ರಮಾಣದಲ್ಲಿ(ಶೇಕಡಾ 1.9)ಯೇ ಅನುದಾನ ಮತ್ತು ತೆರಿಗೆ ಹಂಚಿಕೆಯ ಹಣವನ್ನು 2024-25ರ ಅವಧಿಯಲ್ಲಿಯೂ ಕರ್ನಾಟಕಕ್ಕೆ ನೀಡಿದ್ದರೆ ರೂ.91,580 ಕೋಟಿಗಳಾಗುತ್ತಿತ್ತು. ಅಂದರೆ ಮೋದಿ ಸರಕಾರ ಮಾಡಿರುವ ಅನ್ಯಾಯದಿಂದಾಗಿ ಕಳೆದ ಒಂದು ವರ್ಷದ ಅವಧಿಯಲ್ಲಿ ಕರ್ನಾಟಕ 31,866 ಕೋಟಿ ರೂಪಾಯಿ ಕಳೆದುಕೊಂಡಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.
ನಿರ್ಮಲಾ ಸೀತಾರಾಮನ್ ಪ್ರಕಾರ ಯುಪಿಎ ಸರಕಾರದ ಕಾಲದಲ್ಲಿ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದ ಪಾಲು ರೂ.81,791 ಕೋಟಿ ಮಾತ್ರ. 2014-24ರ ಅವಧಿಯ ಎನ್‍ಡಿಎ ಸರಕಾರದ ಅವಧಿಯಲ್ಲಿ ರೂ.2.9 ಲಕ್ಷ ಕೋಟಿ. 14ನೇ ಹಣಕಾಸು ಆಯೋಗ ಕರ್ನಾಟಕದ ತೆರಿಗೆ ಪಾಲು ಶೇ.4.72 ಎಂದು ನಿಗದಿಪಡಿಸಿತ್ತು, ಈಗಿನ 15ನೇ ಹಣಕಾಸು ಆಯೋಗ ಈ ಪಾಲನ್ನು ಕಡಿಮೆಗೊಳಿಸಿ ಶೇ.3.64ಕ್ಕೆ ಇಳಿಸಿತು. ಇದರಿಂದ ಕಳೆದ ಐದು ವರ್ಷಗಳಲ್ಲಿ ತೆರಿಗೆ ಪಾಲಿನಲ್ಲಿ ಅಂದಾಜು ರೂ.62,098 ಕೋಟಿಯನ್ನು ಕರ್ನಾಟಕ ಕಳೆದುಕೊಂಡಿದೆ. ಇದನ್ನು ನಿರ್ಮಲಾ ಸೀತಾರಾಮನ್ ಜಾಣತನದಿಂದ ಮರೆಮಾಚಲು ಪ್ರಯತ್ನಿಸಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಜಿಎಸ್‍ಟಿ ಸಂಗ್ರಹದಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿ ರಾಜ್ಯ ಇದೆ. ಇನ್ನು ಜಿಎಸ್‍ಟಿ ಸಂಗ್ರಹದ ಬೆಳೆವಣಿಗೆ ದರವನ್ನು ಗಮನಿಸಿದರೆ ಶೇ.17ರ ಸಾಧನೆಯ ಮೂಲಕ ದೇಶದಲ್ಲೇ ಮೊದಲ ಸ್ಥಾನದಲ್ಲಿ ಕರ್ನಾಟಕವಿದೆ. ಆದರೂ, ರಾಜ್ಯಕ್ಕೆ ಮರಳಿ ದೊರೆಯುತ್ತಿರುವುದು ಶೇ.52 ಪಾಲು ಮಾತ್ರ. ಜಿಎಸ್‍ಟಿಯ ಅವೈಜ್ಞಾನಿಕ ಅನುಷ್ಠಾನದಿಂದಾಗಿ ಕರ್ನಾಟಕವು 2017-18ರಿಂದ 2023-24ರ ವರೆಗೆ ಸುಮಾರು ರೂ.59,274 ಕೋಟಿ ಹಣವನ್ನು ಕಳೆದುಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
2023-24ರ ಅವಧಿಯಲ್ಲಿ ಕೇಂದ್ರವು ರಾಜ್ಯದಿಂದ ಕನಿಷ್ಠ ರೂ.4.30 ಲಕ್ಷ ಕೋಟಿಗೂ ಹೆಚ್ಚು ಸಂಪನ್ಮೂಲವನ್ನು ತೆರಿಗೆ, ಸೆಸ್, ಸರ್‍ಚಾರ್ಜ್ ಮೂಲಕ ಸಂಗ್ರಹಿಸಿದೆ. ಆದರೆ, ಇದಕ್ಕೆ ಪ್ರತಿಯಾಗಿ ರೂ.50 ರಿಂದ 53 ಸಾವಿರ ಕೋಟಿ ಮಾತ್ರ ಕರ್ನಾಟಕಕ್ಕೆ ನೀಡಿದೆ. ಇದರಲ್ಲಿ ತೆರಿಗೆ ಪಾಲು 37 ಸಾವಿರ ಕೋಟಿ ರೂ. ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ನೀಡಿದ ಪಾಲಿನ ಹಣ 13,005 ಕೋಟಿ ರೂ.ಗಳು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
2018-19ರಲ್ಲಿ ಕೇಂದ್ರ ಬಜೆಟ್ ಗಾತ್ರ ರೂ.24,42,213 ಕೋಟಿ ಇತ್ತು. ಆಗ ಕೇಂದ್ರದಿಂದ ರಾಜ್ಯಕ್ಕೆ ದೊರೆಯುತ್ತಿದ್ದ ತೆರಿಗೆ ಪಾಲು ರೂ.35,895 ಕೋಟಿ ಹಾಗೂ ರೂ.16,082 ಕೋಟಿ ಅನುದಾನ ಸೇರಿ ಒಟ್ಟು ರೂ.46,288 ಕೋಟಿ. 2023-24ರಲ್ಲಿ ಕೇಂದ್ರದ ಬಜೆಟ್ ಗಾತ್ರ ರೂ.45,03,097 ಕೋಟಿಗೆ ಏರಿಕೆಯಾಗಿದೆ. ಕರ್ನಾಟಕ್ಕೆ ಕೇಂದ್ರದಿಂದ ತೆರಿಗೆ ಪಾಲು ಹಾಗೂ ಅನುದಾನಗಳೆರಡೂ ಸೇರಿ ಸಿಕ್ಕಿರುವುದು ರೂ.50,257 ಕೋಟಿ ಮಾತ್ರ ಎಂದು ಅವರು ವಿವರಿಸಿದ್ದಾರೆ.
ಪ್ರಸಕ್ತ ಬಜೆಟ್ ಗಾತ್ರದ ಹೋಲಿಕೆಯಲ್ಲಿ ಕರ್ನಾಟಕಕ್ಕೆ ವಾರ್ಷಿಕ ಕನಿಷ್ಠ ಒಂದು ಲಕ್ಷ ಕೋಟಿ ರೂ.ಗಳಷ್ಟು ಹಣ ತೆರಿಗೆಯ ಪಾಲು ಹಾಗೂ ಅನುದಾನದ ಮುಖೇನ ದೊರೆಯಬೇಕಿತ್ತು, ಕರ್ನಾಟಕಕ್ಕೆ ಅನ್ಯಾಯ ಆಗಿರುವುದು ಮನವರಿಕೆಯಾದ ನಂತರವೇ 15ನೇ ಹಣಕಾಸು ಆಯೋಗ ವಿಶೇಷ ಅನುದಾನದ ರೂಪದಲ್ಲಿ 5,495 ಕೋಟಿ ರೂ. ನೀಡಬೇಕೆಂದು ಶಿಫಾರಸು ಮಾಡಿತ್ತು. ಆದರೆ, ನಿರ್ಮಲಾ ಸೀತಾರಾಮನ್ ಈ ಶಿಫಾರಸನ್ನು ನಿರಾಕರಿಸಿರುವ ಕಾರಣ ಆ ದುಡ್ಡು ಕೂಡಾ ಬರಲಿಲ್ಲ ಎಂದು ಅವರು ದೂರಿದ್ದಾರೆ.
ಕೇಂದ್ರ ಸರಕಾರದ ಈ ತಾರತಮ್ಯ ನೀತಿ, ಮಲತಾಯಿ ಧೋರಣೆಯಿಂದಾಗಿ ಕರ್ನಾಟಕವು 2017-18ರಿಂದ ಈವರೆಗೆ ತನಗೆ ಸೇರಬೇಕಾದ ನ್ಯಾಯಯುತ ಪಾಲಾದ 1,87,867 ಕೋಟಿ ರೂ.ಗಳಿಂದ ವಂಚಿತವಾಗಿದೆ. ಇದಲ್ಲದೆ, 15ನೇ ಹಣಕಾಸು ಆಯೋಗವು ಬೆಂಗಳೂರಿನ ಫೆರಿಫೆರಲ್ ರಿಂಗ್ ರಸ್ತೆಗೆ 3 ಸಾವಿರ ಕೋಟಿ ರೂ. ಮತ್ತು ಕೆರೆಗಳು ಸೇರಿದಂತೆ ಬೆಂಗಳೂರು ಜಲಮೂಲ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ.ನೀಡಲು ಶಿಫಾರಸ್ಸು ಮಾಡಿತ್ತು. ಆದರೆ, ಈ ಶಿಫಾರಸ್ಸುಗಳನ್ನು ತಿರಸ್ಕರಿಸಿದ ಹಣಕಾಸು ಸಚಿವರು ರಾಜ್ಯಕ್ಕೆ ಸುಮಾರು 11,495 ಕೋಟಿ ರೂ.ದ್ರೋಹ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಗಾರಿದ್ದಾರೆ.
ನರೇಂದ್ರ ಮೋದಿ ಮತ್ತು ನಿರ್ಮಲಾ ಸೀತಾರಾಮನ್ ಕೂಡಿಕೊಂಡು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ವಿರೋಧ ಪಕ್ಷಗಳ ಸರಕಾರ ಇರುವ ಪ್ರತಿಯೊಂದು ರಾಜ್ಯಗಳಿಗೆ ತೆರಿಗೆ ಮತ್ತು ಅನುದಾನದ ಹಂಚಿಕೆಯಲ್ಲಿ ಅನ್ಯಾಯ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ ದುರಂತವೆಂದರೆ ನಿರ್ಮಲಾ ಸೀತಾರಾಮನ್ ಉಂಡ ಮನೆಗೆ ಎರಡು ಬಗೆದಿದ್ದಾರೆ. ತಮ್ಮನ್ನು ರಾಜ್ಯಸಭೆಗೆ ಆರಿಸಿ ಕಳಿಸಿದ ಕರ್ನಾಟಕಕ್ಕೆ ಅನ್ಯಾಯ ಮಾಡಲು ಹೇಸದ ನಿರ್ಮಲಾ ಸೀತಾರಾಮನ್ ಅವರಿಗೆ ರಾಜ್ಯದ ಹಣಕಾಸು ವ್ಯವಸ್ಥೆ ಬಗ್ಗೆ ಮಾತನಾಡುವ ಯಾವ ನೈತಿಕ ಅಧಿಕಾರ ಇದೆ? ಎಂದು ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದ್ದಾರೆ.