ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ಖಚಿತ: ಕೆ.ಎಸ್.ಈಶ್ವರಪ್ಪ

Update: 2023-09-02 12:25 GMT

ಶಿವಮೊಗ್ಗ, ಸೆ.2: ನೂರಕ್ಕೆ ನೂರು ಆಪರೇಷನ್ ಕಮಲ ಆಗುತ್ತದೆ. ಈ ದೇಶದಲ್ಲಿ ಕಾಂಗ್ರೆಸ್ ಗೆ ಭವಿಷ್ಯ ಇಲ್ಲ. ಈಗಾಗಿ ಎಲ್ಲಾ ನಾಯಕರು ಬಿಜೆಪಿಗೆ ಬರುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಭಾರೀ ದೊಡ್ಡ ಸುದ್ದಿ ಮಾಡುತ್ತಿದೆ. ಬಿಜೆಪಿ ಒಪ್ಪಿಗೆ ಕೊಟ್ಟರೆ ಅರ್ಧ ಶಾಸಕರು ನಮ್ಮ ಪಕ್ಷಕ್ಕೆ ಬರುತ್ತಾರೆ ಎನ್ನುತ್ತಿದ್ದಾರೆ. ಆದರೆ ಒಬ್ಬನೇ ಒಬ್ಬ ಶಾಸಕ ಕಾಂಗ್ರೆಸ್ ಗೆ ಹೋಗಿಲ್ಲ. ಪಾರ್ಲಿಮೆಂಟ್ ಚುನಾವಣೆ ಹಿಂದೆ ಅಥವಾ ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವೇ ಇರಲ್ಲ ಎಂದರು.

17 ಜನ ಶಾಸಕರು ಸಮಾಧಾನ ಇಲ್ಲವೆಂದು ನಮ್ಮ ಪಕ್ಷಕ್ಕೆ ಬಂದರು. ರಾಯರೆಡ್ಡಿ ಅವರು ಯಾರೋ ಪಕ್ಷ ಕಟ್ಟಿದ್ದರು, ಯಾರೋ ಅಧಿಕಾರಕ್ಕೆ ಬಂದರು ಅಂದಿದ್ದಾರೆ. ಮುನಿಯಪ್ಪನವರು ಎಲ್ಲಾ ಹಿರಿಯರು ರಾಜೀನಾಮೆ ಕೊಡಬೇಕು ಎಂದಿದ್ದಾರೆ. ಹೀಗಾದ್ರೆ ಸರಕಾರ ಉಳಿಯುತ್ತದಾ. ಎಂ.ಬಿ.ಪಾಟೀಲ್ ಅವರು ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿರ್ತಾರೆ ಎನ್ನುತ್ತಾರೆ. ಸರಕಾರದ ಬಗ್ಗೆ ಕೆಲವು ಶಾಸಕರ ಅಸಮಾಧಾನವಿದೆ ಎನ್ನುತ್ತಾರೆ. ಡಿಕೆಶಿ ಹೌದು ಅಸಮಾಧಾನ ಇದೆ ನಾವು ಸರಿ ಮಾಡಿಕೊಳ್ಳುತ್ತೇವೆ ಎನ್ನುತ್ತಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮಾತಿಗೆ ಒಂದಕ್ಕೊಂದು ಅರ್ಥವೇ ಇಲ್ಲ ಎಂದರು.

ಪ್ರಿಯಾಂಕ ಖರ್ಗೆ ಅಭಿವೃದ್ಧಿ ಮಾಡಲು ಆಗುತ್ತಿಲ್ಲ ಎಂದಿದ್ದಾರೆ. ಅಭಿವೃದ್ಧಿ ಮಾಡಲಾಗದಿದ್ದರೆ ಯಾಕಿದ್ದೀರಿ? ರಾಜೀನಾಮೆ ಕೊಟ್ಟು ಹೋಗಿ. ಒಂದೇ ಒಂದು ಇಲಾಖೆಗೆ ಅಭಿವೃದ್ಧಿಗೆ ಹಣ ಕೊಟ್ಟಿಲ್ಲ. ಇದನ್ನು ಸರಕಾರ ಎಂದು ಕರೆಯಬೇಕೆ ಎಂದು ಪ್ರಶ್ನಿಸಿದರು.

ಕಳೆದ ಸರಕಾರದಲ್ಲಿ ನಡೆದ ಕಾಮಗಾರಿಗೆ ಇನ್ನೂ ಹಣ ಬಿಡುಗಡೆ ಆಗಿಲ್ಲ. ಕೆಲಸ ಪೂರ್ಣವಾಗಿದೆ ಆದರೂ ಹಣ ಬಿಡುಗಡೆಯಾಗಿಲ್ಲ. ಈ ಸರಕಾರ ಪೂರ್ಣ ಭ್ರಷ್ಟಾಚಾರದಿಂದ ಕೂಡಿದೆ. ಬಡವರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದು ಲೋಡ್ ಶೆಡ್ಡಿಂಗ್ ಮಾಡುತ್ತಿದ್ದಾರೆ ಎಂದರು.

ವಿಶೇಷವಾಗಿ ಡಿಕೆಶಿ ಅವರು ಭಂಡತನದ ಸರಕಾರ ನಡೆಸುತ್ತಿದ್ದಾರೆ. ಸಿಕ್ಕಾಪಟ್ಟೆ ಆಸ್ತಿ ಲೂಟಿ ಮಾಡಿ ತಿಹಾರ್ ಜೈಲಿನಲ್ಲಿದ್ದು ಬಂದ ಡಿಕೆ ಶಿವಕುಮಾರ್ ಜನಪ್ರತಿನಿಧಿಗಳಿಗೆ ವೇದಾಂತ ಹೇಳುತ್ತಾರೆ ಎಂದು ಈಶ್ವರಪ್ಪ ತಿವಿದರು.

ಲಾಲು ಪ್ರಸಾದ್ ಯಾದವ್ ನಾನು ಸಾಯುವುದರೊಳಗೆ ಮೋದಿ ಇಳಿಯುವುದನ್ನು ನೋಡಬೇಕು ಅಂದಿದ್ದಾರೆ. ನಾನು ಭಗವಂತನಲ್ಲಿ ಪ್ರಾರ್ಥನೆ ಮಾಡ್ತೇನೆ ಲಾಲ್ ಪ್ರಸಾದ್ ಯಾದವ್ ಸಾಯಬಾರದು. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ಮೋದಿ ಮತ್ತೆ ಪ್ರಧಾನಿಯಾಗುವುದು ಅಷ್ಟೇ ಸತ್ಯ. ದೇಶದಲ್ಲಿ  ಅವರು ಒಟ್ಟಾಗಲು ಸಾಧ್ಯವಿಲ್ಲ. ಅವರು ಒಮ್ಮತದ ಪ್ರಧಾನಿ ಅಭ್ಯರ್ಥಿ ಘೋಷಿಸಲು ಸಾಧ್ಯವಿಲ್ಲ ಎಂದರು.

ವಿಪಕ್ಷ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷ ಯಾವಾಗ ಮಾಡಬೇಕು ಎಂಬುದು ನಮಗೆ ಗೊತ್ತಿದೆ. ನಾವು ಮಾಡಿಕೊಳ್ಳುತ್ತೇವೆ. ನಿಮ್ಮ ಪಕ್ಷಕ್ಕೆ ಎರಡು ವರ್ಷ ಎಐಸಿಸಿಗೆ ಅಧ್ಯಕ್ಷರೇ ಇರಲಿಲ್ಲ. ಇನ್ನು ಸರಕಾರ ಬಂದು ಮೂರು ತಿಂಗಳಾಗಿದೆ. ವಿಪಕ್ಷ ನಾಯಕ, ಅಧ್ಯಕ್ಷರಾಗಿ ಮಾಡುತ್ತೇವೆ. ನಮ್ಮ ಎಲ್ಲಾ ಶಾಸಕರು ವಿಪಕ್ಷದ ನಾಯಕರೇ, ಯಾರು ಯಾರಿಗೂ ಕಡಿಮೆಯಿಲ್ಲ ಎಂದರು.

ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಜಿಲ್ಲಾ ಬಿಜೆಪಿ ರೈತಮೋರ್ಚಾ ವತಿಯಿಂದ ಸೆ.8ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಲಿದೆ. ರಾಜ್ಯದಲ್ಲಿ ಕಿಸಾನ್ ಸಮ್ಮಾನ್ ಯೋಜನೆ, ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ಸರ್ಕಾರ ರದ್ದುಗೊಳಿಸಿದೆ. ಮನ ಬಂದಂತೆ ವಿದ್ಯುತ್ ಕಡಿತ ಮಾಡುತ್ತಿದ್ದಾರೆ. ವಿದ್ಯುತ್ ಒದಗಿಸುವ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ. ಸರ್ಕಾರದ ಎಲ್ಲಾ ನಿರ್ಲಕ್ಷ್ಯ ಧೋರಣೆ ವಿರುದ್ಧ ಬಿಜೆಪಿ ರೈತ ಮೋರ್ಚಾ ವತಿಯಿಂದ ರಾಜ್ಯಾದ್ಯಂತೆ ಪ್ರತಿಭಟನೆ ಹಮ್ಮಿಕೊಂಡಿದ್ದು, ಬೆಂಗಳೂರಿನಲ್ಲಿ ಸ್ವತಃ ಬಿ.ಎಸ್. ಯಡಿಯೂರಪ್ಪನವರು ಪ್ರತಿಭಟನೆಯ ನೇತೃತ್ವ ವಹಿಸಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಶಾಸಕರಾದ ಎಸ್‌ಎನ್. ಚನ್ನಬಸಪ್ಪ. ಡಿ.ಎಸ್. ಅರುಣ್, ಪ್ರಮುಖರಾದ ಜ್ಞಾನೇಶ್ವರ್, ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮಿ ಶಂಕರ ನಾಯಕ್, ಗಿರೀಶ್ ಪಟೇಲ್, ಶಿವರಾಜ್, ಕೆ.ವಿ. ಅಣ್ಣಪ್ಪ, ಚಂದ್ರಶೇಖರ್, ಶಶಿಧರ್ ಮತ್ತಿತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News