ಕೋವಿಡ್ ಹಗರಣ | ನ್ಯಾ.ಡಿ.ಕುನ್ಹಾ ಸಮಿತಿ ವರದಿ ಆಧರಿಸಿ ಕ್ರಮಕ್ಕೆ ನಮ್ಮ ಸರಕಾರ ಬದ್ಧ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಕೊರೊನಾ ಕಾಲದಲ್ಲಿ ಆರೋಗ್ಯ ಸಲಕರಣೆಗಳ ಖರೀದಿಯಲ್ಲಿ ಅವ್ಯವಹಾರ ಆಗಿತ್ತು. ಇದು ನಾವೇ ಬಯಲುಗೊಳಿಸಿರುವ ಹಗರಣ. ಕೊರೊನಾ ಕಾಲದಲ್ಲಿ ಅಸಹಾಯಕ ಜನರ ನೆರವಿಗೆ ಧಾವಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ರಕ್ಷಿಸಬೇಕಾದ ಹೊಣೆ ಸರಕಾರದ್ದಾಗಿತ್ತು. ಆದರೆ ಜನ ಸರಿಯಾಗಿ ಚಿಕಿತ್ಸೆ ಇಲ್ಲದೆ, ಸಾಯುತ್ತಿದ್ದ ಸಂದರ್ಭವನ್ನು ಬಳಸಿಕೊಂಡು ದುಡ್ಡು ನುಂಗಲು ಯತ್ನಿಸಿದ್ದನ್ನು ಇಡೀ ಕರ್ನಾಟಕ ಕಂಡಿದೆ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟನೆ ನೀಡಿರುವ ಅವರು, "ಕೊರೊನಾ ಕಾಲದ ಪಿಪಿಇ ಕಿಟ್ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ನೇರವಾಗಿ ಭಾಗಿಯಾಗಿದ್ದು, ಭ್ರಷ್ಟಾಚಾರ ನಿಷೇಧ ಕಾಯ್ದೆಯಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ.ಕುನ್ಹಾ ನೇತೃತ್ವದ ಸಮಿತಿ ಶಿಫಾರಸು ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಗಮನಿಸಿದೆ" ಎಂದು ಹೇಳಿದ್ದಾರೆ.
ಸರಕಾರದಿಂದ ಸೂಕ್ತ ಕ್ರಮ :
"ನ್ಯಾಯಮೂರ್ತಿ ಡಿ.ಕುನ್ಹಾ ಸಮಿತಿ ಕಳೆದ ಆಗಸ್ಟ್ ತಿಂಗಳಲ್ಲಿ ವರದಿಯನ್ನು ಸರಕಾರಕ್ಕೆ ಸಲ್ಲಿಸಿತ್ತು. ಸುಮಾರು 1700ಕ್ಕೂ ಹೆಚ್ಚು ಪುಟಗಳ ತನಿಖಾ ವರದಿಯನ್ನು ಸಂಪುಟ ಉಪಸಮಿತಿ ಅಧ್ಯಯನ ನಡೆಸುತ್ತಿದೆ. ಅದು ನೀಡುವ ವರದಿಯನ್ನು ಸರಕಾರ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಿದೆ. ಇದು ನಾವೇ ಬಯಲುಗೊಳಿಸಿರುವ ಹಗರಣ. ಕೊರೊನಾ ಕಾಲದಲ್ಲಿ ಅಸಹಾಯಕ ಜನರ ನೆರವಿಗೆ ಧಾವಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ರಕ್ಷಿಸಬೇಕಾದ ಹೊಣೆ ಸರ್ಕಾರದ್ದಾಗಿತ್ತು. ಆದರೆ ಜನ ಸರಿಯಾಗಿ ಚಿಕಿತ್ಸೆ ಇಲ್ಲದೆ ಸಾಯುತ್ತಿದ್ದ ಸಂದರ್ಭವನ್ನೂ ಬಳಸಿಕೊಂಡು ದುಡ್ಡು ನುಂಗಲು ಯತ್ನಿಸಿದ್ದನ್ನು ಇಡೀ ಕರ್ನಾಟಕ ಕಂಡಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.
"ಕೊರೊನಾ ಕಾಲದಲ್ಲಿ ಬೆಡ್, ಪಿಪಿಇ, ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್ ನಿಂದ ಹಿಡಿದು ಸ್ಯಾನಿಟೈಸರ್ ಮತ್ತು ಮಾಸ್ಕ್ವರೆಗೆ ಪ್ರತಿಯೊಂದು ಸಾಮಗ್ರಿ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ದಾಖಲೆಗಳ ಸಮೇತ ಆ ಕಾಲದಲ್ಲಿ ನಾವು ಬಯಲಿಗೆಳೆದಿದ್ದೆವು. ಈ ಬಗ್ಗೆ ನಾನು ಸದನದ ಒಳಗೆ ಮತ್ತು ಹೊರಗೆ ಮಾತನಾಡಿದ್ದೆ. ಆದರೆ ಸರಕಾರ ಅವುಗಳನ್ನೆಲ್ಲ ನಿರಾಕರಿಸುತ್ತಲೇ ತನ್ನ ಭ್ರಷ್ಟಾಚಾರದ ದಂಧೆಯನ್ನು ಮುಂದುವರಿಸಿಕೊಂಡು ಹೋಗಿತ್ತು" ಎಂದು ತಿಳಿಸಿದ್ದಾರೆ.
ಸಮಿತಿಯಿಂದ ಎಲ್ಲ ದಾಖಲೆ ಸಂಗ್ರಹ:
"ನಮ್ಮ ದೇಶದಲ್ಲಿರುವ ಕಂಪೆನಿಗಳು ಪಿಪಿಇ ಕಿಟ್ ಗಳನ್ನು 200 ರಿಂದ 300 ರೂಪಾಯಿ ದರದಲ್ಲಿ ಮಾರಾಟ ಮಾಡಲು ಸಿದ್ಧ ಇರುವಾಗ ಬಿ.ಎಸ್.ಯಡಿಯೂರಪ್ಪ ಮತ್ತು ಶ್ರೀರಾಮುಲು ಸೇರಿಕೊಂಡು ಚೀನಾದ ಕಂಪೆನಿಯಿಂದ ರೂ.2,000ಕ್ಕೆ ಒಂದರಂತೆ ಪಿಪಿಇ ಕಿಟ್ ಗಳನ್ನು ಖರೀದಿ ಮಾಡಿರುವುದನ್ನು ದಾಖಲೆ ಸಹಿತ ಕೊರೊನಾ ಕಾಲದಲ್ಲಿಯೇ ನಾವು ಹೇಳಿದ್ದೆವು. ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ.ಕುನ್ಹಾ ತನಿಖಾ ಸಮಿತಿ ನೀಡಿರುವ ವರದಿಯನ್ನು ನಾನಿನ್ನೂ ಪೂರ್ತಿ ಓದಿಲ್ಲ. ನನ್ನ ಪ್ರಕಾರ ಮಾಧ್ಯಮಗಳಲ್ಲಿ ವರದಿಯಾಗಿರುವುದು ಒಂದು ‘‘ಮಂಜುಗಡ್ಡೆಯ ಒಂದು ಸಣ್ಣ ತುದಿ’’ ಮಾತ್ರ. ಒಂದು ಅಂದಾಜಿನ ಪ್ರಕಾರ ಹತ್ತರಿಂದ ಹದಿನೈದು ಸಾವಿರ ಕೋಟಿ ರೂಪಾಯಿಗಳಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಹೇಳಲಾಗಿದೆ. ತನಿಖಾ ಸಮಿತಿ ಆ ಎಲ್ಲ ದಾಖಲೆಗಳನ್ನು ಸಂಗ್ರಹಿಸಿರಬಹುದು" ಎಂದು ಮಾಹಿತಿ ನೀಡಿದ್ದಾರೆ.
50,000ಕ್ಕೂ ಹೆಚ್ಚು ಜನ ಸಾವು :
"ಕೊರೊನಾ ವೈರಸ್ ನಿಂದಾಗಿ ಸಂಭವಿಸಿದ ಸಾವಿನ ಬಗ್ಗೆ ಆಗಿನ ಸರಕಾರ ಕೊಟ್ಟಿರುವ ಸಾವಿನ ಸಂಖ್ಯೆ ಏನೇ ಇರಬಹುದು. ನಮ್ಮ ಪ್ರಕಾರ ರಾಜ್ಯದಲ್ಲಿ ಮಕ್ಕಳು, ಮಹಿಳೆಯರು, ಯುವಜನರು 50,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಸಾವಿಗೀಡಾಗಿದ್ದಾರೆ. ರಾಜ್ಯ ಸರಕಾರ ಸಕಾಲದಲ್ಲಿ ಚಿಕಿತ್ಸೆ, ಔಷಧಿ ಮತ್ತು ಪ್ರತಿಬಂಧಕ ಕ್ರಮಗಳನ್ನು ಕೈಗೊಂಡಿದ್ದರೆ ಇಷ್ಟೊಂದು ಸಾವು ಖಂಡಿತ ಸಂಭವಿಸುತ್ತಿರಲಿಲ್ಲ. ಜನ ಕೊರೊನಾ ವೈರಸ್ ಗಿಂತ ಹೆಚ್ಚಾಗಿ ಬಿಜೆಪಿಯ ಭ್ರಷ್ಟಾಚಾರದ ವೈರಸ್ ನಿಂದ ಸತ್ತಿದ್ದಾರೆ. ಈ ಸಾವಿಗೆ 20019 ರಿಂದ 2023ರ ವರೆಗೆ ರಾಜ್ಯದಲ್ಲಿ ಇದ್ದ ಬಿಜೆಪಿ ನೇತೃತ್ವದ ಸರಕಾರವೇ ನೇರ ಹೊಣೆ ಎನ್ನುವುದರಲ್ಲಿ ಸಂಶಯವೇ ಇಲ್ಲ" ಎಂದು ಟೀಕಿಸಿದ್ದಾರೆ.
"ಸಾವನ್ನು ಸಂಭ್ರಮಿಸುವ, ಹೆಣ ಬಿದ್ದಲ್ಲಿ ಓಡಿ ರಾಜಕೀಯದ ಬೇಳೆ ಬೇಯಿಸುವ ಬಿಜೆಪಿ ಮತ್ತು ಅದರ ನೇತೃತ್ವದ ಆಗಿನ ಸರಕಾರ ಕೊರೊನಾ ಕಾಲದಲ್ಲಿಯೂ ಇದೇ ಕೆಲಸ ಮಾಡಿದೆ. ಜನ ಬೆಡ್, ವೆಂಟಿಲೇಟರ್, ಔಷಧಿ, ಪಿಪಿಇ ಕಿಟ್, ವ್ಯಾಕ್ಸಿನ್, ಮಾಸ್ಕ್, ಸ್ಯಾನಿಟೈಸರ್ ಇಲ್ಲದೆ ಸಾಯುತ್ತಿರುವಾಗ ಬಿಜೆಪಿಯವರು ಈ ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ದುಡ್ಡು ಹೇಗೆ ಬಾಚಬಹುದು ಎನ್ನುವ ಲೆಕ್ಕದಲ್ಲಿ ತೊಡಗಿದ್ದು ಅತ್ಯಂತ ಅಮಾನವೀಯ ನಡವಳಿಕೆಯಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಭ್ರಷ್ಟಾಚಾರದಲ್ಲಿ ವಿಜಯೇಂದ್ರ ಪಾಲು ಇದೆ :
"ಈ ಯಡಿಯೂರಪ್ಪನವರ ಮಗ ವಿಜಯೇಂದ್ರ ತಾನೊಬ್ಬ ಮಹಾ ಸತ್ಯ ಹರಿಶ್ಚಂದ್ರನ ಮಗನಂತೆ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಾ ತಿರುಗಾಡುತ್ತಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೂ ಆಡಳಿತದ ಸೂತ್ರ ವಿಜಯೇಂದ್ರನ ಕೈಯಲ್ಲಿಯೇ ಇತ್ತು. ಮುಖ್ಯಮಂತ್ರಿಯವರ ಸಹಿಯನ್ನು ತಾನೇ ಹಾಕುತ್ತಿದ್ದ ಎಂದು ಅವರ ಪಕ್ಷದ ನಾಯಕರೇ ಆರೋಪ ಮಾಡಿದ್ದಾರೆ. ಆದ್ದರಿಂದ ಕೊರೊನಾ ಭ್ರಷ್ಟಾಚಾರದಲ್ಲಿ ಅವರ ಪಾಲೂ ಇದೆ" ಎಂದು ಆರೋಪಿಸಿದ್ದಾರೆ.
ನಾಚಿಕೆಗೇಡಿನ ಕೆಲಸ :
"ಇನ್ನೊಬ್ಬ ಆರೋಪಿ ಶ್ರೀರಾಮುಲು ರಾಜಕೀಯ ಹುಟ್ಟು ಪಡೆದಿರುವುದೇ ಬಳ್ಳಾರಿಯ ಗಣಿ ಲೂಟಿಯ ಕೆಸರಲ್ಲಿ. ಇವರು ರಿಪಬ್ಲಿಕ್ ಆಫ್ ಬಳ್ಳಾರಿಯ ಗ್ಯಾಂಗ್ ಲೀಡರ್ ಜನಾರ್ಧನ ರೆಡ್ಡಿಯ ಶಿಷ್ಯಬಳಗಕ್ಕೆ ಸೇರಿದವರು. ಇವರಿಗೆ ರಾಜಕೀಯ ಎಂದರೆ ದುಡ್ಡು ನುಂಗುವುದಾಗಿದೆ. ಅದು ಕಬ್ಬಿಣದ ಅದಿರಾಗಬಹುದು ಇಲ್ಲವೇ ಕೊರೊನಾ ರೋಗಿಗಳನ್ನು ಉಳಿಸುವ ಪಿಪಿಇ ಕಿಟ್ ಆಗಿರಬಹುದು. ಅವರಿಗೆ ಜನರ ಪ್ರಾಣ, ಆರೋಗ್ಯ ಮುಖ್ಯ ಅಲ್ಲ, ಹಣ ಬಂದು ಜೇಬಿಗೆ ಬಿದ್ದರೆ ಸಾಕು. ಇಂತಹವರು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಕೇಳುತ್ತಾ ಅಡ್ಡಾಡುತ್ತಿರುವುದು ನಾಚಿಕೆಗೇಡಿನ ಕೆಲಸವಾಗಿದೆ" ಎಂದು ಟೀಕಿಸಿದ್ದಾರೆ.
"ಡಿ.ಕುನ್ಹಾ ಸಮಿತಿ ವರದಿ ಆಧಾರದಲ್ಲಿ ಕ್ರಮಕೈಗೊಳ್ಳಲು ನಮ್ಮ ಸರಕಾರ ಬದ್ಧವಾಗಿದೆ. ಕಾನೂನಿನ ಪ್ರಕ್ರಿಯೆ ಅವಸರದಲ್ಲಿ ನಡೆಯುವಂತಹದ್ದಲ್ಲ. ಅದು ಪೂರ್ಣಗೊಳ್ಳುವವರೆಗೆ ಕೊರೊನಾ ಸಾವಿಗೆ ನೇರ ಹೊಣೆಗಾರರಾಗಿರುವ ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ಹಾಗೂ ಶ್ರೀರಾಮುಲು ಇವರೆಲ್ಲ ತಮ್ಮ ಚುನಾವಣಾ ಪ್ರಚಾರವನ್ನು ತಕ್ಷಣ ನಿಲ್ಲಿಸಿ ಮನೆಗೆ ಹೋಗಬೇಕು. ಮಾನ ಮರ್ಯಾದೆ ಇದ್ದರೆ ತಮ್ಮ ಭ್ರಷ್ಟ ಮುಖವನ್ನು ಹೊತ್ತು ಕೊಂಡು ಜನರ ಬಳಿ ಮತಕೇಳಲು ಹೋಗಬಾರದು. ಜನರು ಕೂಡಾ ಇವರ ಸಭೆಗಳನ್ನು ಬಹಿಷ್ಕರಿಸಬೇಕು" ಎಂದು ಹೇಳಿದ್ದಾರೆ.
ಕೊರೊನಾ ಕಾಲದ ಪಿಪಿಇ ಕಿಟ್ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ನೇರವಾಗಿ ಭಾಗಿಯಾಗಿದ್ದು, ಭ್ರಷ್ಟಾಚಾರ ನಿಷೇಧ ಕಾಯ್ದೆಯಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿಕುನ್ಹಾ ನೇತೃತ್ವದ ಸಮಿತಿ ಶಿಫಾರಸು… pic.twitter.com/JdJiwxQ3V3
— Siddaramaiah (@siddaramaiah) November 9, 2024