ಸಚಿವೆಯರ ದೇಹದ ಬಗ್ಗೆ ವಿವಾದಾತ್ಮಕ ಹೇಳಿಕೆ: ಸಾಮಾಜಿಕ ಜಾಲತಾಣದಲ್ಲಿ ವಿಶ್ವೇಶ್ವರ್ ಭಟ್ ವಿರುದ್ಧ ಆಕ್ರೋಶ
ಬೆಂಗಳೂರು: ಪತ್ರಕರ್ತ ವಿಶ್ವೇಶ್ವರ್ ಭಟ್ ಅವರು ಮತ್ತೊಂದು ಹೊಸ ವಿವಾದ ಸೃಷ್ಟಿಸಿಕೊಂಡಿದ್ದು, ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಭಟ್ ಅವರು ಮಹಿಳೆಯರ ವಸ್ತ್ರಧಾರಣೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಹೆಣ್ಣುಮಕ್ಕಳ ವಸ್ತ್ರಧಾರಣೆಯ ಬಗ್ಗೆ ಓದುಗರೊಬ್ಬರಿಗೆ ನೀಡಲಾದ ಸಲಹೆಯಲ್ಲಿ ವಿಶ್ವೇಶ್ವರ್ ಭಟ್ ಅವರು ಲೇಖಕಿಯರು ಹಾಗೂ ಸಚಿವೆಯರ ಬಗ್ಗೆ ‘ಬಾಡಿ ಶೇಮಿಂಗ್’ ಹಾಗೂ ಮಹಿಳಾ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ.
ಮಮತಾ ಬ್ಯಾನರ್ಜಿ, ಮೋಟಮ್ಮಾ, ಲಕ್ಷ್ಮೀ ಹೆಬ್ಬಾಳ್ಕರ್, ಸೌಮ್ಯಾ ರೆಡ್ಡಿ ಮೊದಲಾದ ಮಹಿಳಾ ನಾಯಕರನ್ನು ಉಲ್ಲೇಖಿಸಿರುವ ವಿಶ್ವೇಶ್ವರ್ ಭಟ್ “ಇವರು ಅಂಥ ಡ್ರೆಸ್ (ಬಿಗಿಯಾದ ಉಡುಪು) ಧರಿಸಿದರೆ, ಬರಿಗಣ್ಣಿನಿಂದ ನೋಡಲು ಸಾಧ್ಯವಾ?” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
“ಹೆಣ್ಣುಮಕ್ಕಳು ಯಾವ ಡ್ರೆಸ್ಸನ್ನೂ ಬಹಳ ದಿನಗಳ ಕಾಲ ಇಷ್ಟಪಡುವುದಿಲ್ಲ. ಅಂದರೆ ಟೈಟ್ ಡ್ರೆಸ್ಸನ್ನು ಯಾವತ್ತೂ ಧರಿಸುವುದಿಲ್ಲ. ಆಗೊಮ್ಮೆ-ಈಗೊಮ್ಮೆ ಧರಿಸಿದಾಗ, ಮನೆಯಲ್ಲಿ 'ಸದನ ಸದೃಶ' ವಾತಾವರಣ ನಿರ್ಮಿಸಬಾರದು. ಕೆಲ ದಿನಗಳ ಬಳಿಕ ಮಗಳಿಗೆ ನೀವು ಅಂಥ ಡ್ರೆಸ್ ಧರಿಸು ಅಂದರೂ ಧರಿಸುವುದಿಲ್ಲ. ಅಷ್ಟಕ್ಕೂ ಆ ವಯಸ್ಸಿನ ಮಕ್ಕಳು ಟೈಟ್ ಡ್ರೆಸ್ ಧರಿಸಿದರೇ ಚೆಂದ. ಇನ್ನು ಲಕ್ಷ್ಮೀ ಹೆಬ್ಬಾಳ್ಕರ್, ಸೌಮ್ಯ ರೆಡ್ಡಿ, ಶೋಭಾ ಕರಂದ್ಲಾಜೆ, ಉಚಾ ಕತ್ತೆಮನೆ, ಪ್ರತಿಭಾ ನಂದಕುಮಾರ, ಮೋಟಮ್ಮ, ಮಮತಾ ಬ್ಯಾನರ್ಜಿ ಅಂಥ ಡ್ರೆಸ್ ಧರಿಸಿದರೆ ಬರಿಗಣ್ಣಿನಿಂದ ನೋಡಲು ಸಾಧ್ಯವಾ?” ಎಂದು ವಿಶ್ವೇಶ್ವರ್ ಭಟ್ ತಮ್ಮ ಸಲಹೆಯಲ್ಲಿ ಹೇಳಿದ್ದಾರೆ.
ವಿಶ್ವೇಶ್ವರ ಭಟ್ ಈ ಹೇಳಿಕೆಗೆ ಮಾಜಿ ಪತ್ರಕರ್ತ ಅಲ್ಮೇಡಾ ಗ್ಲ್ಯಾಡ್ಸನ್ ಸೇರಿದಂತೆ ಹಲವಾರು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ವಿಶ್ವೇಶ್ವರ್ ಭಟ್ ಅವರು ಇದುವರೆಗೂ ತಮ್ಮ ಪೋಸ್ಟ್ ಬಗ್ಗೆ ವಿಷಾದವನ್ನಾಗಲೀ, ಕ್ಷಮೆಯನ್ನಾಗಲಿ ಕೇಳಲಿಲ್ಲ. ಅದನ್ನು ಅಳಿಸಿಯೂ ಹಾಕಿಲ್ಲ.